ಮತದಾನದ ಮಹತ್ವ ಸಾರಿದ ವಾಕಥಾನ್‌

Team Udayavani, Sep 2, 2019, 3:51 PM IST

ಸಮಗ್ರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಡಳಿತ ಆಯೋಜಿಸಿದ್ದ ವಾಕಥಾನ್‌ಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಮಂಡ್ಯ: ನನ್ನ ಓಟ ಮತದಾರರ ಪಟ್ಟಿ ಪರಿಶೀಲನೆ ಕಡೆಗೆ, ತುಂಬಿತು 18 ವರ್ಷ ಸಿಕ್ಕಿತು ಮತದಾನದ ಹರ್ಷ, ಜಾಗೃತ ಮತದಾರ ಪ್ರಜಾಪ್ರಭುತ್ವದ ನೇತಾರ..

ಹೀಗೆ ಮತದಾನದ ಮಹತ್ವ ಸಾರುವ ಹಲವಾರು ಜಾಗೃತಿ ಫ‌ಲಕಗಳನ್ನು ಹಿಡಿದು ನೂರಾರು ಸಂಖ್ಯೆಯಲ್ಲಿ ಆಗಮಿಸಿದ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಸಮಗ್ರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಡಳಿತ ಆಯೋಜಿಸಿದ್ದ ವಾಕಥಾನ್‌ನಲ್ಲಿ ಪಾಲ್ಗೊಂಡರು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹಸಿರು ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಪಂ ಸಿಇಒ ಕೆ.ಯಾಲಕ್ಕೀಗೌಡ, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್‌, ಉಪವಿಭಾಗಾಧಿಕಾರಿ ಶಿವಪ್ಪ, ನಗರಸಭೆ ಆಯುಕ್ತ ಲೋಕೇಶ್‌, ತಹಶೀಲ್ದಾರ್‌ ನಾಗೇಶ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ. ಮಂಚೇಗೌಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಯಿಂದ ನಗರಸಭೆ ಕಾರ್ಯಾಲಯದವರೆಗೆ ವಾಕಥಾನ್‌ ನಡೆಸಿ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.

ನಗರಸಭೆ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಮಾತನಾಡಿ, ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತದೆ. ಅದೇ ಕಾರಣಕ್ಕೆ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಿದ್ದು, ಮತದಾರರು ಅದನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಇಂದಿನಿಂದ ಅ. 15ರವರೆಗೆ ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯಲಿದೆ. ಒಂದೂವರೆ ತಿಂಗಳ ಕಾಲ ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸಲು ಅವಕಾಶ ಕಲ್ಪಿಸಿದೆ. ಬೂತ್‌ ಲೆವೆಲ್ ಅಧಿಕಾರಿಗಳು, ತಾಲೂಕು ಕಚೇರಿ, ಸಾರ್ವಜನಿಕ ಸೇವಾ ಕೇಂದ್ರ, ಅಟಲ್ ಜನಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ಮತದಾರರ ಪೂರಕ ಕೇಂದ್ರಗಳಲ್ಲಿ ಅಗತ್ಯ ದಾಖಲೆಗಳನ್ನು ನೀಡಿ ಉಚಿತವಾಗಿ ತಿದ್ದುಪಡಿ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಪರಿಷ್ಕರಣಾ ಕಾರ್ಯಕ್ಕೆ ಬೂತ್‌ ಲೆವೆಲ್ ಸಿಬ್ಬಂದಿಗೆ ವಿಶೇಷ ಮೊಬೈಲ್ ಆ್ಯಪ್‌ ಸಿದ್ಧಪಡಿಸಿದ್ದು, ಇವರು ಮನೆಮನೆಗೆ ಭೇಟಿ ನೀಡಿ ಪಟ್ಟಿ ಪರಿಶೀಲನೆ, ಸೇರ್ಪಡೆ, ತಿದ್ದುಪಡಿ, ತೆಗೆದುಹಾಕುವಿಕೆ ಕೆಲಸ ಮಾಡಲಿದ್ದಾರೆ. ಅಂತೆಯೇ, ಸಾರ್ವಜನಿಕರಿಗೂ ಚುನಾವಣಾ ಆ್ಯಪ್‌(ವೋಟರ್‌ ಹೆಲ್ಪ್ಲೈನ್‌ ಆ್ಯಪ್‌) ಇದ್ದು, ಅದರ ಮೂಲಕವೂ ಅರ್ಜಿ ಸಲ್ಲಿಸಬಹುದು ಎಂದು ವಿವರಿಸಿದರು.

ತಹಶೀಲ್ದಾರ್‌ ಎಲ್.ನಾಗೇಶ್‌, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಟಿ.ಎನ್‌. ನರಸಿಂಹಮೂರ್ತಿ, ಜಿಪಂ ಯೋಜನಾಧಿಕಾರಿ ಧನುಷ್‌ ಇತರರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ