ತಮಿಳುನಾಡಿಗೆ ನೀರು: ಬೀದಿಗಿಳಿದು ರೈತರ ಹೋರಾಟ

ನೆರೆ ರಾಜ್ಯದ ಬೆಳೆ ತಣಿಸಲು ಹರಿದ ಕಾವೇರಿ • ಒಳಹರಿವಿಲ್ಲದಿದ್ದರೂ ನೀರು ಬಿಡುಗಡೆ: ಆಕ್ರೋಶ

Team Udayavani, Jul 21, 2019, 2:35 PM IST

ರಾತ್ರೋರಾತ್ರಿ ಕೆಆರ್‌ಎಸ್‌ ಅಣೆಕಟ್ಟೆಯಿಂದ ನೀರು ಬಿಡುಗಡೆ ಮಾಡಿರುವುದನ್ನು ವಿರುದ್ಧ ರೈತಸಂಘದ ಕಾರ್ಯಕರ್ತರು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಮಂಡ್ಯ: ಕೃಷ್ಣರಾಜಸಾಗರ ಜಲಾಶಯದಿಂದ ರಾತ್ರೋ ರಾತ್ರಿ ತಮಿಳುನಾಡಿಗೆ ನೀರನ್ನು ಹರಿಯಬಿಡಲಾಗಿದೆ. ನಮ್ಮ ರೈತರ ಬೆಳೆಗಳಿಗೆ ದಕ್ಕದ ಕಾವೇರಿ ನೆರೆ ರಾಜ್ಯದ ರೈತರ ಬೆಳೆಗಳನ್ನು ತಣಿಸಲು ವೇಗವಾಗಿ ಹರಿಯುತ್ತಿದ್ದಾಳೆ. ಇದನ್ನು ಕಂಡು ರೊಚ್ಚಿಗೆದ್ದ ರೈತರು ಎಂದಿನಿಂತು ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ.

ಕೆಆರ್‌ಎಸ್‌ ಅಣೆಕಟ್ಟೆಯಲ್ಲಿರುವ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಮೀಸಲಿಡಲಾಗಿದೆ. ಹಾಗಾಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ಯಾವ ಕಾರಣಕ್ಕೂ ಹೊಸ ಬೆಳೆ ಬೆಳೆಯಬಾರದು. ಬೆಳೆ ಬೆಳೆಯಲು ಪೂರ್ವ ಸಿದ್ಧತೆಯನ್ನೂ ನಡೆಸದಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದರು. ಇದೀಗ ತಮಿಳುನಾಡಿನಲ್ಲಿ ರೈತರು ಬೆಳೆದಿರುವ ಬೆಳೆಗೆ ನೀರು ಹರಿಸುತ್ತಿರುವ ರಾಜ್ಯಸರ್ಕಾರ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಡಿಮೆ ನೀರು ಸಂಗ್ರಹ: ಮುಂಗಾರು ಮಳೆ ವೈಫ‌ಲ್ಯದಿಂದ ಕೃಷ್ಣರಾಜಸಾಗರ ಜಲಾಶಯದಲ್ಲಿ ಅತಿ ಕಡಿಮೆ ನೀರು ಸಂಗ್ರಹವಾಗಿದೆ. ಶನಿವಾರ ಅಣೆಕಟ್ಟೆಯ ನೀರಿನ ಮಟ್ಟ 90.03 ಅಡಿ ದಾಖಲಾಗಿದೆ.

ಜಲಾಶಯಕ್ಕೆ 995 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದರೆ, 5810 ಕ್ಯೂಸೆಕ್‌ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. ಹೊರಹರಿವಿನಲ್ಲಿ ನದಿಗೆ 3199 ಕ್ಯೂಸೆಕ್‌, ನಾಲೆಗಳಿಗೆ 2611 ಕ್ಯೂಸೆಕ್‌ ನೀರನ್ನು ಹರಿಯಬಿಡಲಾಗಿದೆ.

ನೀರು 89 ಅಡಿಗೆ ಕುಸಿತ: ಶುಕ್ರವಾರ ಬೆಳಗ್ಗೆ 2908 ಕ್ಯೂಸೆಕ್‌ ಇದ್ದ ಹೊರಹರಿವಿನ ಪ್ರಮಾಣ ಸಂಜೆ 6 ಗಂಟೆಯ ಬಳಿಕ 5064 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ. ಇದರಲ್ಲಿ 2453 ಕ್ಯೂಸೆಕ್‌ ನದಿಗೆ ಹಾಗೂ 2611 ಕ್ಯೂಸೆಕ್‌ ನೀರನ್ನು ನಾಲೆಗಳಿಗೆ ಹರಿಸಿತ್ತು. ಇದರೊಂದಿಗೆ ಜಲಾಶಯದ ನೀರಿನ ಮಟ್ಟ 90.53 ಅಡಿಯಿಂದ 89 ಅಡಿಗೆ ಕುಸಿದಿದೆ.

ರೈತರ ಹಿತ ಕಡೆಗಣನೆ: ಒಣಗುತ್ತಿರುವ ಬೆಳೆಗಳಿಗೆ ನೀರು ಹರಿಸುವಂತೆ ಒಂದು ತಿಂಗಳು ಸತತ ಹೋರಾಟ ನಡೆಸಿದ ಪರಿಣಾಮ ಜು.16ರಿಂದ ಹತ್ತು ದಿನಗಳ ಕಾಲ ನಾಲೆಗಳಿಗೆ ನೀರು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡ ಬೆನ್ನ ಹಿಂದೆಯೇ ರಾಜ್ಯಸರ್ಕಾರ ತಮಿಳುನಾಡಿಗೆ ನೀರನ್ನು ಹರಿಯಬಿಟ್ಟು ಕಾವೇರಿ ಕಣಿವೆ ಪ್ರದೇಶದ ರೈತರ ಹಿತವನ್ನು ಕಡೆಗಣಿಸಿದೆ.

ರೈತರ ಆಕ್ರೋಶ: ಒಣಗುವ ಹಂತದಲ್ಲಿದ್ದ ಬೆಳೆಗಳಿಗೆ ಸಕಾಲದಲ್ಲಿ ನೀರು ಕೊಡದೆ ರೈತರು ನಷ್ಟ ಅನುಭವಿಸುವಂತೆ ಮಾಡಿದ ಜೆಡಿಎಸ್‌ -ಕಾಂಗ್ರೆಸ್‌ ನೇತೃತ್ವದ ಮೈತ್ರಿ ಸರ್ಕಾರ ಹಾಲಿ ನಾಲೆಗಳಿಗೆ ಬಿಡುಗಡೆ ಮಾಡಿರುವ ನೀರು ಕೊನೆಯ ಭಾಗಕ್ಕೆ ತಲುಪದಿರುವ ಹೊತ್ತಿನಲ್ಲೇ ತಮಿಳುನಾಡಿಗೆ ನೀರು ಬಿಡುಗಡೆಗೊಳಿಸಿರುವುದು ರೈತರ ಆಕ್ರೋಶಕ್ಕೆ ಕಿಚ್ಚು ಹೆಚ್ಚುವಂತೆ ಮಾಡಿದೆ.

ಕೆಆರ್‌ಎಸ್‌ ಜಲಾಶಯದ ಒಳಹರಿವನ್ನು ಆಧರಿಸಿ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಿಳಿಸಿತ್ತು. ಅಣೆಕಟ್ಟೆಗೆ ಒಳಹರಿವು ಸಂಪೂರ್ಣ ಕುಸಿದಿರುವಾಗ ನೀರು ಹರಿಸುವ ತುರ್ತು ಅಗತ್ಯವೇನಿತ್ತು. ರಾಜ್ಯಸರ್ಕಾರ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿ ಕಣಿವೆ ಪ್ರದೇಶದ ರೈತರ ಬದುಕಿಗೆ ಸಮಾಧಿ ಕಟ್ಟುತ್ತಿದೆ ಎನ್ನುವುದು ರೈತರ ಆರೋಪವಾಗಿದೆ.

ಬೆಳೆದು ನಿಂತಿರುವ ಬೆಳೆಗಳಿಗೆ ಹತ್ತು ದಿನಗಳ ಕಾಲ ಹರಿಸುತ್ತಿರುವ ನೀರು ಯಾವುದಕ್ಕೂ ಸಾಲದು. ಇಪ್ಪತ್ತು ದಿನಗಳ ಕಾಲ ನೀರು ಹರಿಸಿದರಷ್ಟೇ ಒಣಗುವ ಹಂತದಲ್ಲಿರುವ ಕಬ್ಬು ಕೊಂಚ ಚೇತರಿಸಿಕೊಳ್ಳಲು ಸಾಧ್ಯವಾಗಲಿದೆ. ಅದರ ಬಗ್ಗೆ ಗಮನಹರಿಸಬೇಕಾದ ಸರ್ಕಾರ ಬೆಳೆಗಳ ಸ್ಥಿತಿ-ಗತಿಯನ್ನು ಪರಿಶೀಲಿಸುವ ಗೋಜಿಗೆ ಹೋಗದೆ, ರೈತರ ಸಂಕಷ್ಟ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ತಮಿಳುನಾಡಿಗೆ ನೀರು ಹರಿಸುವ ನಿರ್ಧಾರ ಕೈಗೊಂಡು ರೈತರನ್ನು ಸಾವಿನ ಅಂಚಿಗೆ ದೂಡಿದೆ ಎಂದು ರೈತಸಂಘ (ಮೂಲ ಸಂಘಟನೆ) ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ ಆರೋಪಿಸಿದ್ದಾರೆ.

ರಾಜ್ಯಸರ್ಕಾರ ಮಳೆ ಇಲ್ಲದೆ ಕಾವೇರಿ ಕಣಿವೆ ಪ್ರದೇಶದ ಕೃಷಿ ಚಟುವಟಿಕೆ ಸ್ಥಬ್ಧಗೊಂಡಿರುವುದು, ಕೆರೆ-ಕಟ್ಟೆಗಳು ಬರಿದಾಗಿ ಜನ-ಜಾನುವಾರುಗಳು ನೀರಿಲ್ಲದೆ ಪರದಾಡುತ್ತಿರುವ ಕರಾಳತೆಯನ್ನು ಪ್ರಾಧಿಕಾರಕ್ಕೆ ಮನದಟ್ಟು ಮಾಡಿಕೊಡುವಲ್ಲಿ ವಿಫ‌ಲವಾಗಿದೆ. ನಮ್ಮ ಹಕ್ಕಿನ ನೀರನ್ನು ಉಳಿಸಿಕೊಳ್ಳಲಾಗದೆ ಅಧಿಕಾರ ಉಳಿವಿಗೆ ರಾಜಕೀಯ ದೊಂಬರಾಟ ನಡೆಸುತ್ತಿದ್ದಾರೆ. ಜನರಿಂದ ಆಯ್ಕೆಯಾದ ಶಾಸಕರು ಸ್ಥಳೀಯ ರೈತರ ರಕ್ಷಣೆಗೆ ಧಾವಿಸದೆ ರೆಸಾರ್ಟ್‌ ರಾಜಕಾರಣ ನಡೆಸುತ್ತಾ ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ ಎಂದು ರೈತ ನಾಯಕಿ ಸುನಂದಾ ಜಯರಾಂ ಕಿಡಿಕಾರಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಪಾಂಡವಪುರ: ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆಸಲಾಗುತ್ತಿರುವ ಚರಂಡಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕವಾಗಿದ್ದು,...

  • ಮದ್ದೂರು: ತಾಲೂಕು ಕಚೇರಿಯಲ್ಲಿ ಸಮರ್ಪಕವಾದ ಕೆಲಸ ಕಾರ್ಯಗಳಾಗದೆ ಸಾರ್ವಜನಿಕರು ಪ್ರತಿನಿತ್ಯ ಅಲೆದಾಡುವ ಪ್ರವೃತ್ತಿ ಮುಂದುವರಿದಿದ್ದರೂ ಸಂಬಂಧಿಸಿದ ಅಧಿಕಾರಿಗಳು,...

  • ಭಾರತೀನಗರ : ನಾಲೆಗೆ ಬಸ್‌ ಬಿದ್ದು ಅಮೂಲ್ಯ ಜೀವಗಳು ಬಲಿಯಾದಾಗ ಕಣ್ತೆರೆಯುವ ಆಡಳಿತ ಕೂಡಲೇ ತಡೆಗೋಡೆ ನಿರ್ಮಿಸುವ ಭರವಸೆ ನೀಡಿದ್ದು, ಮತ್ತೂಂದು ಅವಘಡ ಸಂಭವಿಸಿದಾಗಲೇ...

  • ಶ್ರೀರಂಗಪಟ್ಟಣ: ಭಾರತ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ ಅವರ ಪಾತ್ರ ನಗಣ್ಯ ಎಂಬಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಬಿಂಬಿಸಲು ಯತ್ನಿಸು ತ್ತಿದ್ದು, ನೈತಿಕ ಹೊಣೆ...

  • ಮದ್ದೂರು: ಕುಡಿವ ನೀರು, ಶೌಚಾಲಯ, ಆಸನದ  ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ತಾಲೂಕು ಕಚೇರಿಗೆ ಅಗತ್ಯ ಕ್ರಮವಹಿಸುವಂತೆ...

ಹೊಸ ಸೇರ್ಪಡೆ