ನರೇಗಾದಲ್ಲಿ ಮಹಿಳೆಯರೇ ಹೆಚ್ಚು ಭಾಗಿ
Team Udayavani, Mar 9, 2021, 5:27 PM IST
ಮಂಡ್ಯ: ಮಹಿಳಾ ಕಾಯಕೋತ್ಸವ ಅಭಿಯಾನದ ನಂತರ ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ ಎಂದು ಜಿಪಂ ಸಿಇಒ ಎಸ್.ಎಂ.ಜುಲ್ ಫಿಖಾರ್ ಉಲ್ಲಾ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಜಿಪಂ, ತಾಪಂ ಹಾಗೂ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಸೋಮವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಕಾಯಕ ಬಂಧುಗಳಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಕೂಲಿ ಹಣ ನೇರವಾಗಿ ಮಹಿಳೆಯರ ಖಾತೆಗೆ ಜಮೆಯಾಗುತ್ತಿರುವ ವಿಚಾರದಲ್ಲಿ ಇಡೀ ರಾಜ್ಯದಲ್ಲೇ ಮಂಡ್ಯ ಜಿಲ್ಲೆ ಮುಂಚೂಣಿಯಲ್ಲಿದೆ. ಸ್ವಸಹಾಯ ಗುಂಪುಗಳ ಪರಿಕಲ್ಪನೆ ಬಂದ ಮೇಲೆ ಮಹಿಳೆಯರು ಯೋಜನೆಗಳಲ್ಲಿ ಪಾಲ್ಗೊಳ್ಳಲು ಹೆಚ್ಚು ಹೆಚ್ಚು ಮುಂದೆ ಬರುತ್ತಿದ್ದಾರೆ ಎಂದು ತಿಳಿಸಿದರು.
ಕ್ರಿಯಾಶೀಲರಾಗಲು ತರಬೇತಿ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುವ ಕಾಯಕ ಬಂಧುಗಳು ಗ್ರಾಮಪಂಚಾಯಿತಿ ಮತ್ತು ಕೂಲಿಕಾರರ ನಡುವೆ ಕೊಂಡಿ ಇದ್ದ ಹಾಗೆ.ಕಾಯಕ ಬಂಧುಗಳು ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಲು ತರಬೇತಿ ನೀಡಲಾಗುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಯೋಜನೆ ಪ್ರಯೋಜನಪಡೆಯಿರಿ: ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ದೇವಿ ಮಾತನಾಡಿ, ಮಹಿಳೆಯರು ಬಿಡುವೇ ಇಲ್ಲದ ಬದುಕಿನ ಜತೆ ಸಂಘರ್ಷದ ಬದುಕನ್ನು ನಡೆಸುತ್ತಿದ್ದು, ಗ್ರಾಮೀಣ ಭಾಗದ ಮಹಿಳೆಯರ ಉದ್ಯೋಗ ಖಾತರಿ ಯೋಜನೆಯಪ್ರಯೋಜನಗಳನ್ನು ಪಡೆದುಕೊಳ್ಳಬೇಕು. ಮಹಾತ್ಮ ಗಾಂಧಿ ನರೇಗಾಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳುವಂತೆ ಮಾಡಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಹೇಳಿದರು.
ಜಿಲ್ಲಾ ಐಇಸಿ ಸಂಯೋಜಕಿ ರೇಖಾ ಮಾತನಾಡಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಲ್ಲಾ ಪಂಚಾಯಿತಿಯು ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ 36.47 ಲಕ್ಷ ಮಾನವ ದಿನಗಳ ಉದ್ಯೋಗ ಸೃಜನೆಮಾಡಿದೆ ಎಂದು ತಿಳಿಸಿದರು.
ಎನ್‌ಆರ್‌ಎಲ್‌ಎಂ ಯೋಜನೆ ಕುರಿತು ಯೋಜನಾ ಸಂಯೋಜಕ ವೀರಣ್ಣ, ಸ್ವತ್ಛ ಭಾರತ್ ಅಭಿಯಾನ ಕುರಿತು ಎಚ್‌ಆರ್‌ಡಿಸಂಯೋಜಕರಾದ ಚನ್ನೇಗೌಡ ವಿಷಯ ಮಂಡಿಸಿದರು. ಯಲಿಯೂರು ಪಿಡಿಒ ರುದ್ರಯ್ಯ ಮತ್ತು ಕಾಯಕ ಬಂಧು ಸುನೀತಾ ಶಿಬಿರಾರ್ಥಿಗಳಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಸತತ 5 ವರ್ಷಗಳಿಂದ 100ಉದ್ಯೋಗ ಪಡೆದುಕೊಂಡ ಸುನೀತಾ ಅವರನ್ನು ಸನ್ಮಾನಿಸಲಾಯಿತು. ಜಿಪಂ ಉಪ ಕಾರ್ಯದರ್ಶಿ(ಅಭಿವೃದ್ಧಿ) ಧನರಾಜು, ಯೋಜನಾ ನಿರ್ದೇಶಕ ಎಚ್.ಎ.ಷಣ್ಮುಗಂ, ತಾಪಂ ಇಒ ಬಸವರಾಜು, ಸಹಾಯಕನಿರ್ದೇಶಕರಾದ(ಗ್ರಾ.ಉ) ಶ್ರೀನಿವಾಸ್, ತಾಲೂಕು ಐಇಸಿ ಸಂಯೋಜಕಿ ಡಿ.ಆಶಾ ಹಾಗೂ ಎನ್‌ಆರ್‌ಎಲ್‌ಎಂ ಸ್ವ ಸಹಾಯ ಸಂಘದ ಸದಸ್ಯರು, ಕಾಯಕ ಬಂಧು-ಕೂಲಿಕಾರ ಮಹಿಳೆಯರು ಹಾಜರಿದ್ದರು.