ಸಂವಿಧಾನ ಉಳಿದರೆ ದೇಶ ಉಳಿವು

ಸಂವಿಧಾನ ವಿರೋಧಿ ಹೇಳಿಕೆ ಸರಿಯಲ್ಲ • ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

Team Udayavani, May 19, 2019, 4:59 PM IST

ಮಾನ್ವಿ: ಡಾ| ಅಂಬೇಡ್ಕರ್‌ 128ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ ಮಾತನಾಡಿದರು.

ಮಾನ್ವಿ: ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ ಎಂದು ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ ಹೇಳಿದರು.

ಪಟ್ಟಣದ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ ಎಸ್‌ಟಿ ನೌಕರರ ಸಮನ್ವಯ ಸಮಿತಿಯಿಂದ ಹಮ್ಮಿಕೊಂಡಿದ್ದ ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ರ 128ನೇ ಜನ್ಮದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ಸಂವಿಧಾನವನ್ನು ಹಿಂದುಳಿದ, ಶೋಷಿತರ, ಬಡವರ ಹಿತರಕ್ಷಣೆಗಾಗಿ ಸಮಾನತೆಯ ಅಂಶಗಳನ್ನು ಸೇರಿಸಿ ಎಲ್ಲರಿಗೂ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ರಚಿಸಲಾಗಿದೆ ಎಂದರು.

ನೌಕರರ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮು ಹೊಳೆಯಪ್ಪನವರ ಪ್ರಾಸ್ತಾವಿಕ ಮಾತನಾಡಿ, ಕೇವಲ ನೌಕರರ ಕ್ಷೇಮಾಭಿವೃದ್ಧಿಗಾಗಿ ಸಂಘ ಸ್ಥಾಪನೆ ಮಾಡಿಲ್ಲ. ನೌಕರರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದರ ಜೊತೆಗೆ ಸಮಾಜ ಒಳಿತಿಗಾಗಿ ದುಡಿಯುತ್ತಿರುವ ಅನೇಕ ಮಹನೀಯರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರೋತ್ಸಾಹಿಸುವ ಕೆಲಸ ಸಂಘಟನೆ ಮಾಡುತ್ತಿದೆ ಎಂದರು.

ಅಂಬೇಡ್ಕರ್‌ ಅನುಯಾಯಿಗಳಾಗಿ ಎಸ್‌ಸಿ, ಎಸ್‌ಟಿ ಸರ್ಕಾರಿ ನೌಕರರ ಪಾತ್ರದ ಕುರಿತು ಸಹ ಪ್ರಾಧ್ಯಾಪಕ ಡಾ| ವಿಜಯಾನಂದ ವಗ್ಗೆ ಹಾಗೂ ಶೋಷಿತರ ಬದುಕಿಗೆ ಮಾರಕವಾದ ಮೌಡ್ಯ ಹಾಗು ಕಂದಾಚಾರಗಳ ಮೂಲ ಮತ್ತು ಪರಿಹಾರದ ಕುರಿತು ಅಬ್ದುಲ್ ರಹೇಮಾನ್‌ ಪಾಷಾ ಉಪನ್ಯಾಸ ನೀಡಿದರು. ಇದೇ ವೇಳೆ ಹೆಚ್ಚು ಅಂಕ ಗಳಿಸಿದ ಎಸ್‌ಸಿ, ಎಸ್‌ಟಿ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಎಸ್‌ಸಿ, ಎಸ್‌ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಹನುಮಂತಪ್ಪ ಭಂಡಾರಿ, ಯುಪಿಎಸ್‌ಸಿ ರ್‍ಯಾಂಕ್‌ ವಿಜೇತೆ ಆಶ್ವಿ‌ಜ ವೆಂಕಟರಮಣ ಮಾತನಾಡಿದರು. ಸಮನ್ವಯ ಸಮಿತಿ ರಾಜ್ಯ ಉಪಾಧ್ಯಕ್ಷ ಆರ್‌. ಮೋಹನ್‌, ರಾಜ್ಯ ಕಾರ್ಯದರ್ಶಿ ಎಚ್. ಗೋಪಾಲಕೃಷ್ಣ, ಸಿಡಿಪಿಒ ಸುಭದ್ರಾದೇವಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜಿತೇಂದ್ರ ಅಂಗಡಿ, ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ತಾಯ್‌ರಾಜ್‌ ಮರ್ಚೆಟ್ಟಾಳ, ಕೆಪಿಟಿಸಿಎಲ್ನ ಗೌತಮ ಕಟ್ಟಿಮನಿ, ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ವಿಭಾಗೀಯ ಉಪಾಧ್ಯಕ್ಷ ಮಹಾದೇವಪ್ಪ, ಕಸಾಪ ನಿಕಟ ಪೂರ್ವ ಅಧ್ಯಕ್ಷ ಮೂಕಪ್ಪ ಕಟ್ಟಿಮನಿ, ಕ.ರಾ.ಪ್ರಾ.ಶಾ. ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಕುರ್ಡಿ, ಕಸಾಪ ಅಧ್ಯಕ್ಷ ಮಹ್ಮದ್‌ ಮುಜೀಬ್‌, ಶಿಕ್ಷಕ ಮಲ್ಲಿಕಾರ್ಜುನ ಭಜಂತ್ರಿ ಇದ್ದರು.

ಕೆಲವರು ಸಂವಿಧಾನದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡುತ್ತಿರುವುದು ಸರಿಯಲ್ಲ. ಅಂಬೇಡ್ಕರ್‌ರು ಅನೇಕ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಅಗತ್ಯ ಅಂಶಗಳನ್ನು ಆಯ್ದು ದೇಶದ ಸಂವಿಧಾನ ರಚಿಸಿದ್ದಾರೆ. ಅವರ ಸಮಾನತೆ ಮತ್ತು ಸಾಮಾಜಿಕ ನ್ಯಾಯಗಳ ತತ್ವಗಳಡಿಯಲ್ಲಿ ಎಲ್ಲರೂ ಒಗ್ಗೂಡಿ ಬಾಳಬೇಕು. ಜಾತಿ, ಧರ್ಮ, ಬಡವ, ಶ್ರೀಮಂತ ಎಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಸಂವಿಧಾನ ಸಮಾನ ಹಕ್ಕುಗಳನ್ನು ನೀಡಿದೆ.
••ಡಿ.ಶಿವಶಂಕರ,
ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ