ಚೆಕ್ ಡ್ಯಾಂ ಕಾಮಗಾರಿ ಕಳಪೆ: ಆರೋಪ
Team Udayavani, Jul 8, 2019, 4:48 PM IST
ಮುದಗಲ್ಲ: ಛತ್ತರ ಸೀಮಾರದಲ್ಲಿ ನಿರ್ಮಿಸುತ್ತಿರುವ ಚೆಕ್ ಡ್ಯಾಂ.
ಮುದಗಲ್ಲ: ಸಮೀಪದ ಛತ್ತರ ಸೀಮಾರದ ಸರ್ವೇ ನಂ 112ರಲ್ಲಿ ನಿರ್ಮಿಸುತ್ತಿರುವ ಚೆಕ್ ಡ್ಯಾಂ ಕಾಮಗಾರಿ ಕಳಪೆಯಾಗಿದೆ ಎಂದು ಗ್ರಾಪಂ ಸದಸ್ಯ ಗ್ಯಾನಪ್ಪ ಸಗರಪ್ಪ ಆರೋಪಿಸಿದ್ದಾರೆ.
2015-16ನೇ ಸಾಲಿನ ಸಣ್ಣ ನೀರಾವರಿ ಇಲಾಖೆಯ ಸುಮಾರು 40 ಲಕ್ಷ ರೂ. ವೆಚ್ಚ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು ಟೆಂಡರ್ ಪಡೆದ ಗುತ್ತಿಗೆದಾರರು ಬೇರೆಯವರಿಗೆ ಉಪಗುತ್ತಿಗೆ ನೀಡಿದ್ದಾರೆ. ಕಳೆದ 20 ದಿನಗಳಿಂದ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮುಕ್ತಾಯ ಹಂತಕ್ಕೆ ತಲುಪಿದೆ. ಚೆಕ್ ಡ್ಯಾಂ ಮುಖ್ಯ ಗೋಡೆ ಸೀಮೆಂಟ್ ನಿಂದ ನಿರ್ಮಿಸಿದ್ದು ಎರಡೂ ಪಕ್ಕದ ಗೋಡೆಗಳನ್ನು ಮಣ್ಣಿನಿಂದ ನಿರ್ಮಿಸಲಾಗಿದೆ. ಮಣ್ಣಿನ ಒಡ್ಡ ಮೇಲೆ ರೂಲರ್ ಹಾಯಿಸಿ ದುಮ್ಮಸು ಮಾಡಿ ಗಟ್ಟಿಗೊಳಿಸದೇ ಹೊಲದಲ್ಲಿ ಸಿಗುವ ಕಚ್ಚಾ ಕಲ್ಲಿನಿಂದ ಕಲ್ಲು ಪಿಚ್ಚಿಂಗ್ ಮಾಡಲಾಗುತ್ತಿದೆ. ಅಂದಾಜು ಪತ್ರಿಕೆಯಲ್ಲಿ ಮಣ್ಣಿನ ಒಡ್ಡನ್ನು ಬಿಗಿಗೊಳಿಸಿ, ದಂಡಗಲ್ಲು ಅಥವಾ ಸೈಜ್ ಕಲ್ಲಿನಿಂದ ನಿರ್ಮಿಸುವ ನಿಯಮವಿದೆ. ಆದರೆ ಗುತ್ತಿಗೆದಾರರು ಎರಡೂ ಭಾಗದ ನೀರು ರಕ್ಷಣೆ ಒಡ್ಡನ್ನು ಸ್ಥಳದಲ್ಲಿಯೇ ದೊರೆಯುವ ಕಲ್ಲು ಬಳಸಿ ನಿರ್ಮಿಸಿದ್ದಾರೆ. ಕಚ್ಚಾ ಕಲ್ಲುಗಳನ್ನು ಬಳಸಿ ಒಡ್ಡು ನಿರ್ಮಿಸುವುದರಿಂದ ಒಡ್ಡಿಗೆ ಕಲ್ಲುಗಳು ಸಮತಟ್ಟಾಗಿ ಕೂಡದೇ ಪೊಳ್ಳಾಗುವ ಸಾಧ್ಯತೆ ಹೆಚ್ಚು. ರಭಸದಿಂದ ನೀರು ಹರಿದರೆ ಚೆಕ್ ಡ್ಯಾಂ ಒಡೆದು ಹೊಲಗಳಿಗೆ ನುಗ್ಗುವ ಸಾಧ್ಯತೆ ಹೆಚ್ಚಿದೆ ಎಂದು ಅವರು ತಿಳಿಸಿದ್ದಾರೆ.
ಕಾಮಗಾರಿ ಪ್ರಾರಂಭಿಸಿದಾಗಿನಿಂದ ಕುಷ್ಟಗಿ ಉಪ ವಿಭಾಗದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಒಮ್ಮೆಯೂ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಪ್ಪಿತಸ್ಥ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.