ವರ್ಷವಾದ್ರೂ ರಚನೆ ಆಗದ ಆಡಳಿತ ಮಂಡಳಿ

ಪುರಸಭೆಗಳಲ್ಲಿ ಅಧಿಕಾರಿಗಳದ್ದೇ ದರಬಾರ • ಸದಸ್ಯರು ತಂದ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು

Team Udayavani, Sep 11, 2019, 12:38 PM IST

ಮುದಗಲ್ಲ: ಪುರಸಭೆ ಎದುರು ಸದಸ್ಯರ ತಂಡ.

ದೇವಪ್ಪ ರಾಠೊಡ
ಮುದಗಲ್ಲ:
ಸ್ಥಳೀಯ ಪುರಸಭೆ ಚುನಾವಣೆ ಮುಗಿದು ವರ್ಷವಾದರೂ ಆಡಳಿತ ಮಂಡಳಿ ರಚನೆ ಆಗಿಲ್ಲ. ಅಧಿಕಾರ ಸಿಗದೇ ಮತ್ತು ತಮ್ಮ ಮಾತನ್ನು ಅಧಿಕಾರಿಗಳು ಕೇಳದ್ದರಿಂದ ಸದಸ್ಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

2018ರ ಆಗಸ್ಟ್‌ 31ರಂದು ಪುರಸಭೆಯ 21 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. ಸೆ.3ರಂದು ಫಲಿತಾಂಶ ಪ್ರಕಟವಾಗಿತ್ತು. ಮುದಗಲ್ಲ ಪುರಸಭೆ ಅಧ್ಯಕ್ಷ ಸ್ಥಾನ ಎಸ್‌ಸಿಗೆ ಮೀಸಲಾದರೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಆದರೆ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರುಗಳ ಮೀಸಲಾತಿ ಆದೇಶದ ವಿರುದ್ಧ ರಾಜ್ಯದ ಕೆಲವೆಡೆ ಕೆಲವರು ಹೈಕೋರ್ಟ್‌ ಮೆಟ್ಟಿಲೇರಿದ್ದರಿಂದ ಪ್ರಕರಣ ಇತ್ಯರ್ಥವಾಗದೇ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ಖಾಲಿ ಉಳಿಯುವಂತಾಗಿದೆ.

ಪುರಸಭೆ ಅಧ್ಯಕ್ಷರ ಚುನಾವಣೆ ನಡೆಯದ ಕಾರಣ ಲಿಂಗಸುಗೂರ ಉಪವಿಭಾಗ ಅಧಿಕಾರಿಗಳೇ ಸ್ಥಳೀಯ ಪುರಸಭೆ ಆಡಳಿತಾಧಿಕಾರಿ ಆಗಿದ್ದಾರೆ. ಆಡಳಿತ ಮಂಡಳಿ ರಚನೆ ಆಗದ್ದರಿಂದ ಸದಸ್ಯರ ಮಾತಿಗೆ ಪುರಸಭೆ ಸಿಬ್ಬಂದಿಯಾಗಲಿ, ಅಧಿಕಾರಿಗಳಾಗಲಿ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ತಾವು ಹೊತ್ತು ತರುವ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅಧಿಕಾರಿಗಳಿದ್ದು ಆಡಿದ್ದೇ ಆಟವಾಗಿದೆ ಎನ್ನುತ್ತಾರೆ ಸದಸ್ಯರು.

ಸಮಸ್ಯೆಗಿಲ್ಲ ಪರಿಹಾರ: ನಮ್ಮ ವಾರ್ಡ್‌ಗಳ ಜನತೆಗೆ ಸಮರ್ಪಕ ಕುಡಿಯುವ ನೀರು, ರಸ್ತೆ, ಚರಂಡಿ, ನೈರ್ಮಲ್ಯ, ಶೌಚಾಲಯಗಳಂತಹ ಕನಿಷ್ಠ ಸೌಕರ್ಯ ಕೊಡಿಸಲು ಆಗುತ್ತಿಲ್ಲ, ಮನೆಗಳ ಮಾಲೀಕರುಗಳಿಗೆ ಖಾತಾ ಉತಾರ, ಮ್ಯುಟೇಶನ್‌, ತೆರಿಗೆ ರಸೀದಿಗಳಂತಹ ದಾಖಲೆಗಳು ಸಹ ಪುರಸಭೆ ಸಿಬ್ಬಂದಿ ಸಕಾಲಕ್ಕೆ ಒದಗಿಸುತ್ತಿಲ್ಲ. ಕೆಲ ಪ್ರಭಾವಿ ಸದಸ್ಯರನ್ನು ಬಿಟ್ಟರೆ ಉಳಿದ ಸದಸ್ಯರಿಗೆ ಆಯಾ ವಾರ್ಡ್‌ಗಳ ಜನತೆಗೆ ದಾಖಲೆ, ಸರಕಾರದ ವಿವಿಧ ಯೋಜನೆಗಳ ಲಾಭ ದೊರಕಿಸಿ ಕೊಡಲು ಸಾಧ್ಯವಾಗುತ್ತಿಲ್ಲ. ಸದಸ್ಯರು ಸಿಬ್ಬಂದಿಗೆ ಸಲ್ಲಿಸುವ ಕಡತಗಳು ತಿಂಗಳಾದರು ಕಾರ್ಯರೂಪಕ್ಕೆ ಬರುತ್ತಿಲ್ಲ. ಸದಸ್ಯರು ಆಯಾ ವಿಭಾಗದ ಸಿಬ್ಬಂದಿಗೆ ಕೆಳಿದರೇ ಇಂದು-ನಾಳೆ ಮಾಡಿಕೊಡುತ್ತವೆ. ರಜೆೆಗೆ ಹೋಗಿದ್ದೆ, ಬೇರೆ ಕೆಲಸವಿತ್ತು ಎಂದು ಜಾರಿಕೊಳ್ಳುತ್ತಿದ್ದಾರೆ. ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯ, ಸಮಸ್ಯೆಗೆ ಪರಿಹಾರ ಸಿಗದ್ದಕ್ಕೆ ಜನತೆ ಮಾತ್ರ ನಮ್ಮತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ಹಿರಿಯ ಸದಸ್ಯ ಶರಣಪ್ಪ ಒಡ್ಡರ್‌, ಬಾಬು ಉಪ್ಪಾರ, ತಸ್ಲೀಂ ಹೈಮದ್‌ ಮುಲ್ಲಾ, ಮಹಿಬೂಬ ಕಡ್ಡಿಪುಡಿ, ಶಬ್ಬೀರ್‌ ಅಳಲು ತೋಡಿಕೊಂಡಿದ್ದಾರೆ.

ಅರೆಬರೆ ಕೆಲಸ: ಪಟ್ಟಣದಲ್ಲಿ 24/7 ಕುಡಿಯುವ ನೀರಿಗೆ ತೋಡಿದ ಪೈಪ್‌ಲೈನ್‌ ಕಾಮಗಾರಿ ಅರೆಬರೆ ಆಗಿವೆ. ಸಿಸಿ ರಸ್ತೆ, ಡಾಂಬರ್‌ ರಸ್ತೆ ಕಾಮಗಾರಿಗೆ ರಸ್ತೆ ಅಗೆದು ಹಾಗೆಯೇ ಬಿಡಲಾಗಿದೆ. ಚರಂಡಿ ಸ್ವಚ್ಛತೆ ಆಗುತ್ತಿಲ್ಲ. ವಿದ್ಯುತ್‌ ಕಂಬಗಳಿಗೆ ದೀಪಗಳಿಲ್ಲ. ಪಟ್ಟಣದ ಜನತೆಗೆ 6-8 ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ. ವಾರ್ಡ್‌ಗಳಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಜನರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ನಮ್ಮಿಂದ ಪರಿಹಾರ ಕೊಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಧಿಕಾರಿಗಳ ವಿರುದ್ಧ ಹೋರಾಟವೊಂದೇ ನಮಗುಳಿದ ದಾರಿ ಎನ್ನುತ್ತಾರೆ ಸದಸ್ಯರು.

ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಸದಸ್ಯರ ಸಮಸ್ಯೆಗೆ ಸ್ಪಂದಿಸಬೇಕು. ಸರ್ಕಾರ ಪುರಸಭೆ ಆಡಳಿತ ಮಂಡಳಿ ರಚನೆಗೆ ಮುಂದಾಗಬೇಕಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ