ಭರವಸೆಗೆ ಜಗ್ಗದ ಅನ್ನದಾತರು

ರೈತರೊಂದಿಗೆ ಡಿಸಿ-ಸಿಇಒ ಚರ್ಚೆ•ತಪ್ಪಿತಸ್ಥರ ಅಮಾನತು ಆದೇಶ ಕೈ ಸೇರುವವರೆಗೂ ಹೋರಾಟ

Team Udayavani, Sep 12, 2019, 3:00 PM IST

ಮುದ್ದೇಬಿಹಾಳ: ಧರಣಿ ಸ್ಥಳಕ್ಕೆ ಡಿಸಿ, ಸಿಇಒ, ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ರೈತರ ಜೊತೆ ಚರ್ಚಿಸಿದರು.

ಮುದ್ದೇಬಿಹಾಳ: ವಿಮೆ ವಂಚಿತ ರೈತರ ಬಗ್ಗೆ ಮೂರು ದಿನಗಳಲ್ಲಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಬೆಳೆ ಸಮೀಕ್ಷೆ ಮಾಡುವಾಗ ತಪ್ಪ್ಪು ಮಾಡಿದವರನ್ನು ಗುರುವಾರ ಮಧ್ಯಾಹ್ನ 2 ಗಂಟೆಯೊಳಗೆ ಸೇವೆಯಿಂದ ಅಮಾನತು ಮಾಡ‌ಲಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಜಿಪಂ ಸಿಇಒ ವಿಕಾಸ್‌ ಸುರಾಳ್ಕರ ಇಲ್ಲಿನ ಮಿನಿ ವಿಧಾನಸೌಧ ಆವರಣದಲ್ಲಿ ಧರಣಿ ನಡೆಸುತ್ತಿರುವ ರೈತರಿಗೆ ಬುಧವಾರ ರಾತ್ರಿ ಸ್ಪಷ್ಟ ಭರವಸೆ ನೀಡಿದರೂ ಸಹಿತ ರೈತರು ಅಮಾನತು ಆದೇಶ ಕೈ ಸೇರುವವರೆಗೂ ಧರಣಿ ಮುಂದುವರಿಸುವುದಾಗಿ ತಿಳಿಸಿದ್ದರಿಂದ ಗುರುವಾರವೂ ರೈತರ ಧರಣಿ ಮುಂದುವರಿೆಯಲಿದೆ.

ಬಸರಕೋಡ ಸೇರಿ ಹಲವು ಗ್ರಾಮಗಳ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಬೆಳೆ ವಿಮೆ ಹಂಚಿಕೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಬೇಕು, ತಪ್ಪಿತಸ್ಥರ ಅಮಾನತು ಮಾಡಲು ಒತ್ತಾಯಿಸಿ ಇಲ್ಲಿನ ಮಿನಿ ವಿಧಾನಸೌಧ ಆವರಣದಲ್ಲಿ ಮೂರು ದಿನಗಳಿಂದ ವಿಮೆ ವಂಚಿತ ರೈತರು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಬುಧವಾರ ರೈತರ ಬೇಡಿಕೆಯಂತೆ ತಹಶೀಲ್ದಾರ್‌ ವಿನಯ್‌ಕುಮಾರ ಪಾಟೀಲ ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡು ಅವರನ್ನು ಸ್ಥಳಕ್ಕೆ ಕರೆಸಿದ್ದರು.

ರೈತರಿಗೆ ಸರಿಯಾಗಿ ವಿಮೆ ಜಮಾ ಆಗದಿರಲು ಏನು ಕಾರಣ ಅನ್ನುವ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳು ಎರಡು ದಿನ ಪರಿಶೀಲಿಸಿ ವರದಿ ನೀಡಿದ್ದಾರೆ. ಈ ವರದಿ ಪರಿಶೀಲಿಸಲು, ಕ್ರಮ ಕೈಗೊಳ್ಳಲು ಕಾಲಾವಕಾಶ ಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಕ್ರಮ ಜರುಗಿಸುವುದು ನಿಶ್ಚಿತ. ಧರಣಿ ಹಿಂದಕ್ಕೆ ಪಡೆದುಕೊಳ್ಳಿ ಎಂದು ಜಿಲ್ಲಾಕಾರಿ ಮನವಿ ಮಾಡಿದರೂ ರೈತ ಮುಖಂಡರು ಪಟ್ಟು ಹಿಡಿದದ್ದು ಜಿಲ್ಲಾಡಳಿತ ಮುಂದೇನು ಕ್ರಮ ಕೈಗೊಳ್ಳಬಹುದು ಎನ್ನುವ ಚಿಂತನೆಗೆ ಕಾರಣವಾಗಿದೆ.

ಚರ್ಚೆ ಅಂತಿಮಗೊಂಡ ನಂತರ ಮಾತನಾಡಿದ ಧರಣಿನಿರತರ ಮುಖಂಡ ಶ್ರೀಶೈಲ ಮೇಟಿ, ಡಿಸಿ, ಸಿಇಒ ರೈತರಿಗೆ ಸ್ಪಂದಿಸಿದ್ದಾರೆ. ಅವರಿಗೆ ಗೌರವ ಕೊಟ್ಟು ಗುರುವಾರ ಮಧ್ಯಾಹ್ನದ ನಂತರ ಧರಣಿ ಹಿಂದಕ್ಕೆ ಪಡೆಯುತ್ತೇವೆ. ಅಷ್ಟರೊಳಗೆ ತಪ್ಪಿತಸ್ಥರ ಅಮಾನತು ಆದೇಶ ನಮ್ಮ ಕೈ ಸೇರಬೇಕು ಎಂದು ಹೇಳಿ ಚರ್ಚೆ ಮುಕ್ತಾಯಗೊಳಿಸಿದರು.

ಇದಕ್ಕು ಮುನ್ನ ರೈತರೊಂದಿಗೆ ಚರ್ಚಿಸಿದ ಡಿಸಿ, ಸಿಇಒ ಅವರು ಬೆಳೆ ವಿಮೆ ನಿಯಮ, ಕ್ರಾಪ್‌ ಕಟಿಂಗ್‌, ಇನ್ಸೂರೆನ್ಸ್‌ ಕಂಪನಿ ಆಯ್ಕೆ, ನೋಡಲ್ ಅಧಿಕಾರಿಗಳ ತಂಡದ ನೇಮಕ, ಕ್ರಾಪ್‌ ಕಟಿಂಗ್‌ಗೆ ರ್‍ಯಾಂಡಮ್‌ ಆಗಿ ಪ್ಲಾಟುಗಳ ಆಯ್ಕೆ ಹೀಗೆ ಎಲ್ಲ ಹಂತಗಳ ಬಗ್ಗೆ ತಿಳಿವಳಿಕೆ ಮೂಡಿಸಲು ಯತ್ನಿಸಿದರು. ಸಿಇಒ ಮಹಾರಾಷ್ಟ್ರದಲ್ಲಿರುವ ತಮ್ಮ ಕುಟುಂಬದಲ್ಲೇ ಆಗಿರುವ ಇಂಥ ಘಟನೆಯೊಂದನ್ನು ಉದಾಹರಣೆಯಾಗಿ ನೀಡಿ ಕೆಲವೊಮ್ಮೆ ಎಲ್ಲಿ ತಪ್ಪಾಗಬಹುದು ಎನ್ನುವುದನ್ನು ಬಹಿರಂಗಪಡಿಸಿದರು.

ವಿಷದ ಬಾಟಲು ಪ್ರದರ್ಶನ: ಮದ್ಯಾಹ್ನ ತಹಶೀಲ್ದಾರ್‌, ಸಿಪಿಐ ಧರಣಿ ಸ್ಥಳಕ್ಕೆ ಬಂದು ರೈತರೊಂದಿಗೆ ಚರ್ಚಿಸುತ್ತಿದ್ದಾಗ ಗೌಡಪ್ಪಗೌಡ ಪಾಟೀಲ ಎನ್ನುವವರು ಕೀಟನಾಶಕದ ಬಾಟಲ್ ಪ್ರದರ್ಶಿಸಿ ಬೇಡಿಕೆ ಈಡೇರದಿದ್ದರೆ, ನ್ಯಾಯ ದೊರಕಿದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಒಡ್ಡಿ ಅಧಿಕಾರಿಗಳನ್ನು ದಂಗುಬಡಿಸಿದ್ದರು. ಇದರಿಂದ ಚಿಂತಿತರಾಗಿದ್ದ ಪೊಲೀಸ್‌ ಅಧಿಕಾರಿಗಳು ಡಿಸಿಯನ್ನು ಸ್ಥಳಕ್ಕೆ ಕರೆಸಲು ಹಿಂದೇಟು ಹಾಕಿದ್ದರು. ಆದರೆ ಪರಿಸ್ಥಿತಿ ಕೈ ಮೀರದಂತೆ ನಡೆದುಕೊಳ್ಳುವ ಭರವಸೆ ರೈತ ಮುಖಂಡರಿಂದ ದೊರೆತಿದ್ದರಿಂದ ಡಿಸಿಯನ್ನು ಕರೆಸಲು ಅವರು ಗ್ರೀನ್‌ ಸಿಗ್ನಲ್ ನೀಡಿದ್ದರು. ಹೀಗಾಗಿ ಸಂಜೆ ಡಿಸಿ, ಸಿಇಒ ಬಂದಾಗ ಹೆಚ್ಚಿನ ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹೆಣಗಬೇಕಾಯಿತು.

ಅಧಿಕಾರಿಗಳ ಮನವಿ ಮೇರೆಗೆ ಬುಧವಾರ ನಡೆಸಲು ಉದ್ದೇಶಿಸಿದ್ದ ಕೃಷಿ, ತಾಪಂ ಕಚೇರಿ ಮುತ್ತಿಗೆ, ಬೀಗ ಜಡಿಯುವುದನ್ನು ರೈತರು ಕೈ ಬಿಟ್ಟರು. ಗುರುವಾರ ನೀಡಿದ್ದ ಮುದ್ದೇಬಿಹಾಳ ಬಂದ್‌ ಕರೆಯನ್ನೂ ಹಿಂದಕ್ಕೆ ಪಡೆದುಕೊಂಡರು. ಸಮೀಕ್ಷೆಯಲ್ಲಿ ಆಗಿರುವ ಅನ್ಯಾಯ ತಿಳಿಸಿ ತಪ್ಪಿತಸ್ಥರ ವಿರುದ್ದ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇಲ್ಲಿನ ಪ್ರವಾಸಿ ಮಂದಿರಕ್ಕೆ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಆಗಮಿಸಿದ್ದ ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳಿಗೆ ಲಿಖೀತ ದೂರು ಸಲ್ಲಿಸಿದರು.

ರೈತ ಮುಖಂಡರಾದ ಶ್ರೀಶೈಲ ಮೇಟಿ, ಗುರುನಾಥಗೌಡ ಬಿರಾದಾರ, ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಲ್ಲಿಕಾರ್ಜುನ ಸಿದರಡ್ಡಿ, ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಬಿರಾದಾರ, ಸಂಗಣ್ಣ ಬಾಗೇವಾಡಿ, ವೈ.ಎಲ್. ಬಿರಾದಾರ, ಗೌಡಪ್ಪಗೌಡ ಪಾಟೀಲ, ನಾಗರಾಜ ತಂಗಡಗಿ, ಎಪಿಎಂಸಿ ನಿರ್ದೇಶಕ ವೈ.ಎಚ್. ವಿಜಯಕರ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ