ಸಂಕಷ್ಟ ಸಹಿಸಿಕೊಂಡರೆ ಬದುಕು ಬಂಗಾರ: ಸ್ವಾಮೀಜಿ

ನೇಬಗೇರಿಯಲ್ಲಿ ಧಾರ್ಮಿಕ ಕಾರ್ಯಕ್ರಮ ಕಂಪು

Team Udayavani, May 13, 2019, 4:26 PM IST

ಮುದ್ದೇಬಿಹಾಳ: ನೇಬಗೇರಿಯಲ್ಲಿ ಧರ್ಮಸಭೆ, ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ಶ್ರೀಗಳು ಹಾಗೂ ಗಣ್ಯರು ಉದ್ಘಾಟಿಸಿದರು.

ಮುದ್ದೇಬಿಹಾಳ: ತಾಯಂದಿರು ತಾಳಿದರೆ ಜಗತ್ತು ಉಳಿಯುತ್ತದೆ. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ತಾಳಿಕೊಳ್ಳುವ ಹೆಣ್ಣಿನ ಬಾಳು ಬಂಗಾರವಾಗುತ್ತದೆ. ಕಷ್ಟ ಕಾರ್ಪಣ್ಯಗಳು ಬಂದಾಗಲೇ ಮನುಷ್ಯನ ಜೀವನ ಪಾವನವಾಗುತ್ತದೆ ಎಂದು ಸರೂರು ಹಾಲುಮತ ಮೂಲ ಗುರುಪೀಠದ ಅಗತೀರ್ಥ ಶಾಖಾಮಠದ ಗುರು ಮಹಾಸ್ವಾಮಿಗಳು ಹೇಳಿದರು.

ಮುದ್ದೇಬಿಹಾಳ ತಾಲೂಕು ನೇಬಗೇರಿ ಗ್ರಾಮದಲ್ಲಿ ರವಿವಾರ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ, ಧರ್ಮಸಭೆ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಜನರು, ತಾಯಂದಿರು ಮೂಢ ನಂಬಿಕೆ ಕೈ ಬಿಡಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಕೊಡಿಸಲು ಮುಂದಾಗಬೇಕು. ಇಂದಿನ ಯುವ ಜನತೆ ಅಂಟಿಸಿಕೊಂಡಿರುವ ದುಷ್ಟ ಚಟಗಳು ಸಂಸಾರವನ್ನೇ ನಾಶಮಾಡುವ ಮಟ್ಟಕ್ಕೆ ಪರಿಣಾಮ ಬೀರುತ್ತಿದ್ದು ಯುವಜನತೆ ಎಚ್ಚೆತ್ತುಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಕರಭಂಟನಾಳ ಗುರು ಗಂಗಾಧರೇಶ್ವರ ಹಿರೇಮಠದ ಶಿವಕುಮಾರ ಸ್ವಾಮಿಗಳು ಮಾತನಾಡಿ, ಉಚಿತ ಸಾಮೂಹಿಕ ವಿವಾಹ ಬಡವರ ಮದುವೆ ಅಲ್ಲ ಇದು ಭಾಗ್ಯವಂತರ ಮದುವೆ. ಧರ್ಮ ಸಭೆಯಂಥ ಧಾರ್ಮಿಕ ವೇದಿಕೆಯಲ್ಲಿ ಶರಣರು, ಶ್ರೀಗಳು, ಪೂಜ್ಯರು ಇರುತ್ತಾರೆ. ಇಂಥ ವೇದಿಕೆ ಮೇಲೆ ಚಪ್ಪಲಿ ಧರಿಸಿ ಬರದಂತೆ ಹಿಂದಿನ ಮೂರು ವರ್ಷಗಳ ಧರ್ಮ ಸಭೆಯಲ್ಲಿ ತಿಳಿಹೇಳಲಾಗಿದೆ. ಆದರೂ ಚಪ್ಪಲಿ ಹಾಕಿ ವೇದಿಕೆ ಏರಿ ಶ್ರೀಗಳ ಜೊತೆ ಪಾಲ್ಗೊಳ್ಳುವ ಸಂಪ್ರದಾಯ ಮುಂದುವರಿದಿದೆ. ಇದು ವೇದಿಕೆಯ ಧಾರ್ಮಿಕ ಗಾಂಭಿರ್ಯಕ್ಕೆ ವಿರುದ್ಧವಾದದ್ದು. ಇನ್ನು ಮುಂದಾದರೂ ಧರ್ಮ ಸಭೆಗಳಲ್ಲಿ ಇಂಥದ್ದಕ್ಕೆ ಆಸ್ಪದ ಕೊಡಬಾರದು ಎಂದರು.

ಎಪಿಎಂಸಿ ಅಧ್ಯಕ್ಷ ಗುರಣ್ಣ ತಾರನಾಳ, ಎಪಿಎಂಸಿ ನಿರ್ದೇಶಕ ವೈ.ಎಚ್. ವಿಜಯಕರ, ಜಿಪಂ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ನೀಲಮ್ಮ ಮೇಟಿ, ಬಿಜೆಪಿ ಧುರೀಣರಾದ ಕಾಶೀಬಾಯಿ ರಾಂಪುರ, ಸಂಗಮ್ಮ ದೇವರಳ್ಳಿ ಮಾತನಾಡಿದರು. ವಿಜಯಪುರ ಸಿದ್ದಾರೂಢ ಮಠದ ಭೋಗೇಶ್ವರಿ ಅಮ್ಮನವರು ಆಶೀರ್ವಚನ ನೀಡಿದರು.

ಜಿಪಂ ಮಾಜಿ ಸದಸ್ಯೆ ಕಾಶೀಬಾಯಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಅಖೀಲ ಗೋವಾ ಕನ್ನಡಿಗರ ಹೋರಾಟ ಸಮಿತಿ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ, ಪಿಎಲ್ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಬಿ.ಕೆ.ಬಿರಾದಾರ, ಜಿಪಂ ಮಾಜಿ ಸದಸ್ಯೆ ಸುನಂದಾ ನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ಸಾಬಣ್ಣ ವಾಲೀಕಾರ, ಸಂಗನಗೌಡ ಪಾಟೀಲ, ಸಂಗಣ್ಣ ಬಿಸಲದಿನ್ನಿ, ಲಕ್ಷ್ಮಣ ಬಿಜ್ಜೂರ, ಮಂಜುನಾಥ ಪಾಟೀಲ, ಬಸಯ್ಯ ಹಿರೇಮಠ, ಎಸ್‌.ಎಸ್‌.ಹುಲ್ಲೂರ, ಹಣಮಗೌಡ ಬ್ಯಾಲ್ಯಾಳ ವೇದಿಕೆಯಲ್ಲಿದ್ದರು.

ಒಟ್ಟು 31 ಜೋಡಿ ವಧು ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಿಆರ್‌ಪಿ ಎಂ.ಎ. ತಳ್ಳಿಕೇರಿ ನಿರೂಪಿಸಿದರು. ಬಿ.ಬಿ. ಪೂಜಾರಿ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ದೇವಸ್ಥಾನದಲ್ಲಿ ಮೂಲ ಮೂರ್ತಿಗಳಿಗೆ ಅಭಿಷೇಕ ನಡೆಸಲಾಯಿತು. ಡೊಳ್ಳು ವಾದ್ಯ, ಭಾಜಾ ಭಜಂತ್ರಿ ಸಮೇತ ಮಾರುತೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ, ಕಳಸದ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ