ಪ್ರವಾಸಿಗರ ಮೋಜು-ಮಸ್ತಿಗೆ ಬ್ರೇಕ್‌ ಎಂದು?

ಫೈರ್‌ ಕ್ಯಾಂಪ್‌ ನಡೆಸಿ ನಡುರಾತ್ರಿ ಕೇಕೆ ಹಾಕುವ ಪ್ರವಾಸಿಗರು: ಆಕ್ರೋಶ•ವನ್ಯಮೃಗ-ಪರಿಸರಕ್ಕೆ ಹಾನಿ

Team Udayavani, May 13, 2019, 1:37 PM IST

ಬಲ್ಲಾಳರಾಯನ ದುರ್ಗದಲ್ಲಿ ಅರಣ್ಯದ ನಡುವೆ ಟೆಂಟ್ ನಿರ್ಮಿಸಿರುವುದು.

ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ವಾರಾಂತ್ಯ ದಿನಗಳಲ್ಲಿ ನಗರವಾಸಿಗಳು ಮುಖ ಮಾಡುತ್ತಿದ್ದು, ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಪಂ ವ್ಯಾಪ್ತಿಯ ಐತಿಹಾಸಿಕ ಬಲ್ಲಾಳರಾಯನ ದುರ್ಗದ ಮೀಸಲು ಅರಣ್ಯದಲ್ಲಿ ಎಗ್ಗಿಲ್ಲದೇ ಅಕ್ರಮ ಪ್ರವೇಶ ಮಾಡಿ ಮೋಜು-ಮಸ್ತಿ ಮಾಡುತ್ತಿರುವುದು ವನ್ಯಮೃಗಗಳಿಗೆ ಹಾಗೂ ಪರಿಸರಕ್ಕೆ ಮಾರಕವಾಗಿದೆ.

ಬಲ್ಲಾಳರಾಯನ ದುರ್ಗದ ಅರಣ್ಯವೂ ಮೀಸಲು ಅರಣ್ಯವಾಗಿದ್ದು, ಈ ಅರಣ್ಯದೊಳಗೆ ಪ್ರವೇಶಿಸಲು ಅರಣ್ಯ ಇಲಾಖೆಯ ಅನುಮತಿ ಅಗತ್ಯ. ಆದರೆ ದುರ್ಗದಹಳ್ಳಿಯ ರಾಣಿಝರಿಯ ನೆತ್ತಿಯ ಮೇಲೆ ಕೆಲ ಪ್ರವಾಸಿಗರು ಟೆಂಟ್ ನಿರ್ಮಿಸಿ ಮೋಜು-ಮಸ್ತಿಯಲ್ಲಿ ತೊಡಗುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಪರಿಸರಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ಕಾನನ ನಡುವೆ ಮೋಜು-ಮಸ್ತಿ: ರಾಜ್ಯದ ವಿವಿಧೆಡೆಯಿಂದ ಕೆಲ ಪ್ರವಾಸಿಗರು ಅರಣ್ಯದ ನಡುವೆ ವಾಸ್ತವ್ಯ ಹೂಡಿ ಮದ್ಯ ಸೇವಿಸಿ ಅಸಭ್ಯವಾಗಿ ವರ್ತಿಸುವುದು ಸಾಮಾನ್ಯವಾಗಿದೆ. ಬಲ್ಲಾಳರಾಯನದುರ್ಗದ ಅಲ್ಲಲ್ಲಿ ಮದ್ಯದ ಬಾಟಲಿಗಳು ಕಂಡು ಬರುತ್ತಿದ್ದು, ಮೋಜುಮಸ್ತಿ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ವನ್ಯಜೀವಿಗಳ ನೆಮ್ಮದಿಗೆ ಭಂಗ: ಇಲ್ಲಿ ಬಿಡಾರ ಹಾಕುವ ಪ್ರವಾಸಿಗರು ಬೆಂಕಿ ಹಾಕಿ ಫೈರ್‌ಕ್ಯಾಂಪ್‌ ನಡೆಸಿವುದಲ್ಲದೆ ಜೋರಾಗಿ ಕೇಕೆ ಹಾಕುವುದರಿಂದ ಪ್ರಶಾಂತ ಪರಿಸರದಲ್ಲಿರುವ ವನ್ಯಜೀವಿಗಳಿಗೆ ತೊಂದರೆ ಉಂಟಾಗುತ್ತಿದೆ. ಬೇಸಿಗೆ ಕಾಲವಾಗಿರುವುದರಿಂದ ಫೈರ್‌ ಕ್ಯಾಂಪ್‌ನ ಬೆಂಕಿ ಕಾಡಿಗೆ ಹರಡುವ ಸಾಧ್ಯತೆ ಇದೆ. ಹಿಂದಿನಿಂದಲೂ ನಿರಂತರವಾಗಿ ಪ್ರವಾಸಿಗರೂ ಇಲ್ಲಿ ಮೋಜುಮಸ್ತಿಯಲ್ಲಿ ತೊಡಗಿರುವ ಘಟನೆಗಳು ಮರುಕಳಿಸುತ್ತಿದ್ದರೂ ಅರಣ್ಯ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಬಂಗಾಡಿ, ಸುಂಕಸಾಲೆ ಮಾರ್ಗದಿಂದ ಪ್ರವೇಶ: ಮಂಗಳೂರು ಕಡೆಯಿಂದ ಚಾರಣ ಕೈಗೊಳ್ಳುವ ಕೆಲ ಪ್ರವಾಸಿಗರು ಬಂಗಾಡಿ ಮೂಲಕ ಚಾರಣ ಕೈಗೊಂಡು ಬಲ್ಲಾಳರಾಯನದುರ್ಗದಲ್ಲಿ ರಾತ್ರಿ ಉಳಿದು ಕೊಳ್ಳುತ್ತಿದ್ದಾರೆ. ಒಮ್ಮೆ ಇಲ್ಲಿ ಬಂದು ಹೋದ ಪ್ರವಾಸಿಗರು ಮತ್ತಷ್ಟು ಜನರನ್ನು ಮತ್ತೆ ಕರೆ ತರುತ್ತಿದ್ದು, ದಿನದಿಂದ ದಿನಕ್ಕೆ ಪ್ರವಾಸಿಗರ ಮೋಜು-ಮಸ್ತಿ ಮಿತಿ ಮೀರುತ್ತಿದೆ. ಸುಂಕಸಾಲೆಯ ಮೂಲಕ ರಾಣಿಝರಿ ಬಲ್ಲಾಳರಾಯನ ದುರ್ಗಕ್ಕೆ ಸಾಗುವ ಪ್ರವಾಸಿಗರು ರಾತ್ರಿ ಇಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ.

ಸೂಚನಾಫಲಕ ಅಳವಡಿಸಲಿ: ಬಲ್ಲಾಳರಾಯನ ದುರ್ಗದ ಪ್ರವೇಶಿಸುವ ಮಾರ್ಗದ ಆರಂಭದಲ್ಲಿ ಅರಣ್ಯ ಇಲಾಖೆ ಮೀಸಲು ಅರಣ್ಯದೊಳಗೆ ಪ್ರವೇಶಿಸದಂತೆ ಸೂಚನಾಫಲಕಗಳನ್ನು ಅಳವಡಿಸಿಸುವ ಅಗತ್ಯವಿದೆ. ಅಕ್ರಮ ಪ್ರವೇಶ ಮಾಡಿದರೆ ಕಾನೂನಿನಲ್ಲಿ ಅದಕ್ಕಿರುವ ಶಿಕ್ಷೆ ಅಥವಾ ದಂಡದ ಪ್ರಮಾಣವನ್ನು ಸೂಚನಾಫಲಕದಲ್ಲಿ ಅಳವಡಿಸಿದರೆ ಅಕ್ರಮ ಪ್ರವೇಶ ಮಾಡುವವರ ಪ್ರಮಾಣ ಸ್ವಲ್ಪವಾದರೂ ಕಡಿಮೆಯಾಗಬಹುದಾಗಿದೆ.

ಗ್ರಾಪಂ ಪ್ರಯತ್ನಕ್ಕೆ ಅಡ್ಡಗಾಲದ ಪ್ರವಾಸಿಗರು: ಬಲ್ಲಾಳರಾನದುರ್ಗದ ಮೀಸಲು ಅರಣ್ಯವೂ ಸುಂಕಸಾಲೆ ಗ್ರಾಪಂ ವ್ಯಾಪ್ತಿಗೆ ಬರುವುದರಿಂದ ಈ ಭಾಗದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಆಗಾಗ ಸ್ವಚ್ಛತಾ ಆಂದೋಲನ ನಡೆಸುತ್ತಾ ಬಂದಿದ್ದು ಅಲ್ಲಲ್ಲಿ ಸ್ವಚ್ಛತೆ ಅರಿವು ಮೂಡಿಸುವ ಸೂಚನಾಫಲಕಗಳನ್ನು ಅಳವಡಿಸಿದೆ. ಹತ್ತಾರು ಕಸದ ತೊಟ್ಟಿಗಳನ್ನು ಅಲ್ಲಲ್ಲಿ ಇಡಲಾಗಿದೆ. ಆದರೂ ಪ್ರವಾಸಿಗರು ಪ್ಲಾಸ್ಟಿಕ್‌ ಮದ್ಯದ ಬಾಟಲಿಗಳನ್ನು ಕಸದ ತೊಟ್ಟಿಗೆ ಹಾಕದೇ ಅರಣ್ಯದೊಳಗೆ ಎಸೆಯುತ್ತಿರುವುದು ನಡೆಯುತ್ತಲ್ಲೆ ಇದೆ.

ಮೀಸಲು ಅರಣ್ಯದ ನೆಪದಲ್ಲಿ ಸಣ್ಣರೈತರನ್ನು ಒಕ್ಕಲೆಬ್ಬಿಸುವ ಅರಣ್ಯ ಇಲಾಖೆ ಮೀಸಲು ಅರಣ್ಯದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಇವುಗಳು ಕಣ್ಣಿಗೆ ಬಿದ್ದರೂ ಮೌನವಹಿಸಿರುವುದು ಪ್ರವಾಸಿಗರ ಮೇಲಿನ ಪ್ರೀತಿಗೋ ಅಥವಾ ಅವರು ಕೊಡುವ ಹಣದಾಸೆಗೋ ಎಂಬ ಅನುಮಾನಗಳು ವ್ಯಕ್ತವಾಗುತ್ತಿದೆ.
ಅಶ್ವಥ್‌, ಕೊಟ್ಟಿಗೆಹಾರದ ಪರಿಸರಪ್ರೇಮಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ