ದೊರೆಗೆ ಆಶ್ರಯ ಕೊಟ್ಟು ಊರು ಬಿಟ್ಟರು

Team Udayavani, Jun 19, 2019, 9:50 AM IST

ಮುಧೋಳ: ಸಿಎಂ ಗ್ರಾಮ ವಾಸ್ತವ್ಯ ಬಳಿಕವೂ ಅಭಿವೃದ್ಧಿ ಕಾಣದ ಇಂಗಳಗಿ ಗ್ರಾಮದ ರಸ್ತೆಗಳನ್ನು ಕಳೆದ ಎರಡು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾಗಿದೆ.

ಮಹಾಂತೇಶ ಕರೆಹೊನ್ನ
ಮುಧೋಳ:
2007, ಜ.23ರಂದು ಸಿಎಂ ಕುಮಾರಸ್ವಾಮಿ, ತಾಲೂಕಿನ ಇಂಗಳಗಿಯ ಕುಟುಂಬವೊಂದರ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು. ಮದ್ದಿಲ್ಲದ ರೋಗ ಹೊಂದಿದ್ದ ಆ ಕುಟುಂಬಕ್ಕೆ ಬದುಕಿಗೆ ಜೀವನಾಧಾರದ ಜತೆಗೆ ಇಡೀ ಗ್ರಾಮದ ಅಭಿವೃದ್ಧಿಗೆ ಅನುದಾನ ಹರಿದು ಬರುತ್ತದೆ ಎಂದು ನಂಬಿದ್ದರು. ಆದರೆ, ಅದೆಲ್ಲ ಆಗಲಿಲ್ಲ. ಮದ್ದಿಲ್ಲದ ರೋಗದ ಕುರಿತು ಊರ ಜನರಿಗೆ ಗೊತ್ತಿರಲಿಲ್ಲ. ಸಿಎಂ ಗ್ರಾಮ ವಾಸ್ತವ್ಯದಿಂದ ಅದು ಜಗತ್ತಿಗೇ ಗೊತ್ತಾಯಿತು. ಹೀಗಾಗಿ ಆ ಕುಟುಂಬ ಮಾನಸಿಕ ಹಿಂಸೆ ಅನುಭವಿಸಿ ಗ್ರಾಮವನ್ನೇ ತೊರೆದು, ಪಕ್ಕದ ಊರಿಗೆ ಹೋಗಿ ನೆಲೆ ಕಂಡುಕೊಂಡಿತು.

ಇಂಗಳಗಿಯ ವಾಸ್ತವ್ಯದ ವೇಳೆ ಮನೆಯ ಮುಖ್ಯಸ್ಥನಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಹಾಗೂ ಕುಟುಂಬಕ್ಕೆ ಧನಸಹಾಯ ಮಾಡುವುದಾಗಿ ಹೇಳಿ ಹೋದ ಸಿಎಂ, ಆನಂತರ ಈ ಬಗ್ಗೆ ಕ್ಯಾರೇ ಎನ್ನಲಿಲ್ಲ. ಇದಕ್ಕಾಗಿ ಆ ಕುಟುಂಬ ಬೆಂಗಳೂರಿನ ಮುಖ್ಯಮಂತ್ರಿಗಳ ಕಚೇರಿ, ಮನೆಗೆ ಎಡತಾಕಿದರೂ ಆ ಕುಟುಂಬಕ್ಕೇನೂ ನೆರವು ದೊರೆಯಲಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮದ ಬೇಡಿಕೆಗಳೂ ಈಡೇರಲಿಲ್ಲ: ಗ್ರಾಮದ ಪರವಾಗಿ ಬೇಡಿಕೆ ಇಟ್ಟಿದ್ದ ಆಸ್ಪತ್ರೆ, ಸಮುದಾಯ ಭವನ ಹಾಗೂ ಸರ್ಕಾರಿ ಪಪೂ ಕಾಲೇಜು ಸೇರಿದಂತೆ ಕೆಲವು ಬೇಡಿಕೆಯ ಮನವಿ ಸಿಎಂಗೆ ಕೊಡಲಾಗಿತ್ತು. ಈ ಯಾವ ಬೇಡಿಕೆಗಳೂ ಈಡೇರಿಲ್ಲವೆಂದು ಗ್ರಾಮದ ಪ್ರಮುಖ ಲಕ್ಷ್ಮಣ ಚಿನ್ನಣ್ಣವರ ‘ಉದಯವಾಣಿ’ಗೆ ತಿಳಿಸಿದರು.

ಉತ್ತೂರಿನ ಶಾಲೆಯಲ್ಲಿ ವಾಸ್ತವ್ಯ: ಇನ್ನು ತಾಲೂಕಿನ ಉತ್ತೂರ ಗ್ರಾಮದಲ್ಲಿ 2006, ಆ.21ರಂದು ಮತ್ತೂಂದು ಗ್ರಾಮ ವಾಸ್ತವ್ಯವನ್ನು ಸಿಎಂ ಕುಮಾರಸ್ವಾಮಿ ಮಾಡಿದ್ದರು. ಮುಧೋಳ ತಾಲೂಕಿನಲ್ಲಿಯೇ ಒಬ್ಬ ಮುಖ್ಯಮಂತ್ರಿ ಎರಡು ಬಾರಿ ಗ್ರಾಮ ವಾಸ್ತವ್ಯ ಮಾಡಿದ್ದು, ರಾಜ್ಯದ ಗಮನ ಸೆಳೆದಿತ್ತು. ಉತ್ತೂರಿನ (ಹಾಲಿ ಸಚಿವ ಆರ್‌.ಬಿ. ತಿಮ್ಮಾಪುರ ಸ್ವಗ್ರಾಮ) ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಿ, ಗ್ರಾಮಸ್ಥರ ಅಹವಾಲು ಸ್ವೀಕರಿಸಿದ್ದರು. ಆಗ ಮುಧೋಳ ಶಾಸಕ ಗೋವಿಂದ ಕಾರಜೋಳ ಸಚಿವರಾಗಿದ್ದರು. ಗ್ರಾಮದ ವತಿಯಿಂದ ಸಲ್ಲಿಸಲಾಗಿದ್ದ ಮನವಿಗೆ ಇಲ್ಲಿ ಸ್ಪಂದನೆ ಸಿಕ್ಕಿದೆ.

ಸುವರ್ಣ ಗ್ರಾಮ ಯೋಜನೆಯಡಿ ಉತ್ತೂರ ಆಯ್ಕೆ, ವಾಸ್ತವ್ಯ ಮಾಡಿದ್ದ ಸರ್ಕಾರಿ ಶಾಲೆಯ ಸುತ್ತಲೂ ಕಾಂಪೌಂಡ್‌ ನಿರ್ಮಾಣ, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣ ಮಾಡಲಾಯಿತು. ಇದರ ಜತೆಗೆ ವೃದ್ಧಾಪ್ಯ, ವಿಧವಾ ವೇತನ ಯೋಜನೆಯಡಿ ಹಲವರಿಗೆ ಸ್ಥಳದಲ್ಲೇ ಪ್ರಮಾಣ ಪತ್ರ ವಿತರಿಸಲಾಗಿತ್ತು. ಇದಷ್ಟು ಬಿಟ್ಟರೆ, ಸಿಎಂವೊಬ್ಬರು ಗ್ರಾಮ ವಾಸ್ತವ್ಯ ಮಾಡಿದರ ನೆನಪಿಗಾಗಿ ಅಥವಾ ಇಡೀ ಗ್ರಾಮವನ್ನು ಮಾದರಿ ಗ್ರಾಮ ಮಾಡುವ ಕಲ್ಪನೆಯಾಗಲಿ ಇಲ್ಲಿ ಈಡೇರಿಲ್ಲ.

ಬಿಎಸ್‌ವೈ ಕೂಡ ವಾಸ್ತವ್ಯ ಮಾಡಿದ್ದರು!
ಇನ್ನು ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ತಾಲೂಕಿನ ಶಿರೋಳ ಗ್ರಾಮದ ಸಾವಯವ ಕೃಷಿಕ ಗಣಾಚಾರಿ ಅವರ ತೋಟದಲ್ಲಿ ಒಂದು ಇಡೀ ದಿನ ವಾಸ್ತವ್ಯ ಇದ್ದರು. ಅಂದು ಸಾವಯಕ ಕೃಷಿಕರೊಂದಿಗೆ ಸಂವಾದ, ರೈತ ಬಜೆಟ್‌ಗೆ ಸಲಹೆ ಪಡೆದಿದ್ದರು. ಆಗ ಶಿರೋಳ ಗ್ರಾಮಸ್ಥರು ಸಲ್ಲಿಸಿದ್ದ ಮನವಿಗಳ ಪೈಕಿ ಸರ್ಕಾರಿ ಆಸ್ಪತ್ರೆ, ಗ್ರಾಮದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

  • ರಾಯಚೂರು: 1995ರಿಂದ ಆರಂಭಗೊಂಡ ಎಲ್ಲ ಖಾಸಗಿ ಶಾಲಾ, ಕಾಲೇಜುಗಳ ಶಿಕ್ಷಕರಿಗೆ ಹಾಗೂ ಉಪನ್ಯಾಸಕರಿಗೆ ವೇತನಾನುದಾನ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ...

  • ವಿಜಯಪುರ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಘೀ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಆರೋಗ್ಯ...

  • ಬೀದರ: ಜನಸಾಮಾನ್ಯರಲ್ಲಿ ಭಾರತದ ಸಂವಿಧಾನ ಬಗ್ಗೆ ಜಾಗೃತಿ ಮೂಡಿಸಲು ಇಬ್ಬರು ಮಹಿಳೆಯರು ರಾಜಧಾನಿ ಬೆಂಗಳೂರಿನಿಂದ ಹಮ್ಮಿಕೊಂಡಿದ್ದ ಸೈಕಲ್‌ ಯಾತ್ರೆಯು ಮಂಗಳವಾರ...

  • ಕೋಲಾರ: ದಕ್ಷಿಣ ಕಾಶಿ ಎಂದೇ ಖ್ಯಾತವಾಗಿರುವ ನಗರ ಹೊರವಲಯದ ಅಂತರಗಂಗೆಯಲ್ಲಿ ಮಂಗಳವಾರ ರಾತ್ರಿ ನಡೆದ ಶಿವ ಲಕ್ಷ ದೀಪೋತ್ಸವ ಮತ್ತು ತೆಪ್ಪೋತ್ಸವ ನೋಡಲು ಸಹಸ್ರಾರು...

  • ರಾಮನಗರ: ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷವಹಿಸುವ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಪಾರಸ್ಸು ಮಾಡುವುದಾಗಿ ಮಾಗಡಿ ಕ್ಷೇತ್ರದ ಶಾಸಕ...

ಹೊಸ ಸೇರ್ಪಡೆ