ಎತ್ತರಕ್ಕೆ ಏರುವ ಕನಸು ಕಂಡಾಗ ಸಾಧನೆ

Team Udayavani, May 12, 2019, 3:00 AM IST

ಮೈಸೂರು: ಮನುಷ್ಯನಿಗೆ ಜೀವನದಲ್ಲಿ ತನ್ನ ಕನಸಿನ ಎತ್ತರವನ್ನು ಏರಿಯೇ ತೀರಬೇಕೆಂಬ ಛಲವಿರಬೇಕು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಅಭಿನಂದನಾ ಸಮಿತಿ ಶನಿವಾರ ಮಾನಸಗಂಗೋತ್ರಿಯ ವಿಜ್ಞಾನಭವನದಲ್ಲಿ ಏರ್ಪಡಿಸಿದ್ದ ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಎತ್ತರ..ಎತ್ತರ ಏರುವ ಕನಸು ಕಾಣಬೇಕು. ಜೊತೆಗೆ ಆ ಎತ್ತರವನ್ನು ಏರುವ ಸಾಮರ್ಥ್ಯ ನಮ್ಮಲ್ಲಿದೆ ಎಂಬ ಆತ್ಮ ವಿಶ್ವಾಸವೂ ನಮಗಿರಬೇಕು. ಕನಸಿನ ಎತ್ತರವನ್ನು ಏರುವ ನಿಟ್ಟಿನಲ್ಲಿ ಅತ್ಯಂತ ಉತ್ಸಾಹದಿಂದ ನಿರಂತರವಾಗಿ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿ, ಬೌದ್ಧಿಕವಾಗಿ, ಧಾರ್ಮಿಕವಾಗಿಯೂ ಪರಿಶ್ರಮಪಟ್ಟಾಗ ಸಾಧನೆ ಮಾಡಲು ಸಾಧ್ಯವಾಗಲಿದೆ. ಬೀಳುವುದು ಮಹತ್ವವಲ್ಲ. ಎತ್ತರ ಏರಿಯೇ ತೀರಬೇಕೆಂಬ ಛಲವಿರಬೇಕು ಎಂದರು.

ಮೈಸೂರು ವಿವಿಗೆ ಕುಲಪತಿಯಾಗಿರುವ ಪ್ರೊ.ಜಿ.ಹೇಮಂತಕುಮಾರ್‌, ಎಷ್ಟು ಎತ್ತರ ಏರಿದ್ದೇನೆ ಎಂಬ ಭಾವನೆಯೇ ಇಲ್ಲದೆ ಮೊದಲಿದ್ದಂತೆಯೇ ಇದ್ದಾರೆ. ಗುರು-ಶಿಷ್ಯ ಸಂಬಂಧ ಚೆನ್ನಾಗಿದ್ದರೆ ಜ್ಞಾನ ಹರವುತ್ತೆ. ಹೇಮಂತಕುಮಾರ್‌ ಸಜ್ಜನಿಕೆಯೇ ಅವರ ಸಂಪತ್ತು. ಕುಲಪತಿ ಅವಧಿಯ ನಾಲ್ಕು ವರ್ಷಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕೀರ್ತಿಯನ್ನು ಎಲ್ಲಾ ಕಡೆಹರಡುವ ಅವರ ಕನಸು ನನಸಾಗಲಿ. ದೇಹಕ್ಕೆ ವಯಸ್ಸಾದರೂ ಮಾನಸಿಕವಾಗಿ ಕುಮಾರರಾಗಿಯೇ ಇರಲಿ ಎಂದು ಹಾರೈಸಿದರು.

ಸಿಪಿಸಿ ಪಾಲಿಟೆಕ್ನಿಕ್‌: ದಿವ್ಯಸಾನ್ನಿಧ್ಯ ವಹಿಸಿದ್ದ ಸುತ್ತೂರು ಶ್ರೀಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ದೇಶದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾಗಿರುವ ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿರುವ ಪ್ರೊ.ಜಿ.ಹೇಮಂತಕುಮಾರ್‌ ಅವರ ಕುಟುಂಬ ಮೈಸೂರಿಗೆ ಸಿಪಿಸಿ ಪಾಲಿಟೆಕ್ನಿಕ್‌ ಕಾಲೇಜಿನಂತಹ ಬಹುದೊಡ್ಡ ಕೊಡುಗೆ ನೀಡಿದೆ.

ಈ ಭಾಗದಲ್ಲಿ ಪಾಲಿಟೆಕ್ನಿಕ್‌ ಅಂದರೆ ಸಿಪಿಸಿ ಎನ್ನುವಷ್ಟರಮಟ್ಟಿಗೆ ಅದರ ಖ್ಯಾತಿ ಇದೆ. ಅಂತಹ ಕುಟುಂಬದಿಂದ ಬಂದಿರುವ ಹೇಮಂತಕುಮಾರ್‌ ಅವರು ಕುಲಪತಿಯಾಗಿ ವಿಶ್ವವಿದ್ಯಾನಿಲಯಕ್ಕೆ ಪೂರ್ಣಾವಧಿ ಕಾರ್ಯಕರ್ತರು ಸಿಕ್ಕಂತಾಗಿದ್ದು, ಅವರು ವಿಶ್ವವಿದ್ಯಾನಿಲಯವನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ ಎಂದು ಆಶಿಸಿದರು.

ಅಭಿನಂದನಾ ಭಾಷಣ ಮಾಡಿದ ತಮಿಳುನಾಡಿನ ಎಸ್‌ಆರ್‌ಎಂ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಡಾ.ಆರ್‌.ಶ್ರೀನಿವಾಸನ್‌, ಮೈಸೂರಿನಲ್ಲೇ ಹುಟ್ಟಿ-ಬೆಳೆದು, ಇಲ್ಲಿಯೇ ಕಲಿತು, ಕಲಿತ ವಿಶ್ವವಿದ್ಯಾನಿಲಯದ ಕುಲಪತಿಯಾಗಿರುವ ಪ್ರೊ.ಹೇಮಂತಕುಮಾರ್‌, ಮೈಸೂರಿನ ಮಣ್ಣಿನ ಮಗ. ನಾಲ್ವಡಿ ಕೃಷ್ಣರಾಜ ಒಡೆಯರ್‌, ಕುವೆಂಪು ಅವರಂತಹ ಮಹನೀಯರು ಕಟ್ಟಿದ ಪ್ರತಿಷ್ಠಿತ ಮೈಸೂರು ವಿವಿಗೆ ಪ್ರೊ.ಹೇಮಂತಕುಮಾರ್‌ 25ನೇ ಕುಲಪತಿಯಾಗಿರುವುದು ಹೆಮ್ಮೆಯ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು.

ಅಧ್ಯಕ್ಷತೆವಹಿಸಿದ್ದ ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಪ್ರೊ.ಬಸವರಾಜ್‌ ಎಸ್‌.ಅನಾಮಿ ಮಾತನಾಡಿ, ವಿಶ್ವವಿದ್ಯಾನಿಲಯಗಳಲ್ಲಿ ಸಮಸ್ಯೆಗಳು ಸಾಮಾನ್ಯ. ಅವುಗಳನ್ನು ಸರಳವಾಗಿ ಮತ್ತು ಸಮರ್ಪಕವಾಗಿ ನಿಭಾಯಿಸಿ ಮೈಸೂರು ವಿವಿಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿ ಎಂದು ಹೇಳಿದರು.

ಆರು ತಿಂಗಳಲ್ಲಿ ಶೇ.40ರಷ್ಟು ಕೆಲಸ: ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರೊ.ಜಿ.ಹೇಮಂತಕುಮಾರ್‌, ಕುಲಪತಿಯಾಗಿ ಆರು ತಿಂಗಳು ಕಳೆದಿದೆ. ಈ ಅವಧಿಯಲ್ಲಿ ಏನು ಮಾಡಬೇಕು ಅಂದುಕೊಂಡಿದ್ದೇನೋ ಅದರಲ್ಲಿ ಶೇ.40ರಷ್ಟು ಕೆಲಸ ಮಾಡಿದ್ದೇನೆ. ಮಾಡಬೇಕಾದ್ದು ಇನ್ನೂ ಬಹಳ ಇದೆ. ವಿಶ್ವವಿದ್ಯಾನಿಲಯ ಗೊತ್ತಿತ್ತು.

ಆದರೆ, ಕುಲಪತಿ ಏನು ಎಂಬುದು ಗೊತ್ತಿರಲಿಲ್ಲ. ಕುಲಪತಿ ಹುದ್ದೆ ಎಂದು ತಿಳಿದುಕೊಳ್ಳದೆ ಜವಾಬ್ದಾರಿ ಎಂದು ತಿಳಿದುಕೊಂಡಿದ್ದೇನೆ. ನ್ಯಾಕ್‌ ಪರೀಕ್ಷೆಯ ಜೊತೆಗೆ ವಿಶ್ವವಿದ್ಯಾನಿಲಯವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯಲು ಶ್ರಮಿಸುತ್ತೇನೆ. ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಲು ಕ್ರಮವಹಿಸುವ ಮೂಲಕ ಎಲ್ಲರ ಸಹಕಾರದಿಂದ ವಿಶ್ವವಿದ್ಯಾನಿಲಯವನ್ನು ಕಟ್ಟುವುದಾಗಿ ಹೇಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ