ಏಪ್ರಿಲ್ ಬಳಿಕ ಯಡಿಯೂರಪ್ಪರನ್ನು ಅಧಿಕಾರದಿಂದ ತೆಗೆಯುತ್ತಾರೆ: ಸಿದ್ದರಾಮಯ್ಯ
Team Udayavani, Jan 17, 2021, 1:13 PM IST
ಮೈಸೂರು: ಏಪ್ರಿಲ್ ಬಳಿಕ ಯಡಿಯೂರಪ್ಪರನ್ನು ಅಧಿಕಾರದಿಂದ ತೆಗೆಯುತ್ತಾರೆ. ನನಗೆ ಆರ್ ಎಸ್ಎಸ್ ಮೂಲಗಳಿಂದ ಮಾಹಿತಿ ಇದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಾಯಕತ್ವ ಬದಲಾವಣೆ ಬಗ್ಗೆ ಮತ್ತೆ ಮಾತನಾಡಿದ ಅವರು, ಯಡಿಯೂರಪ್ಪ ಮುಂದುವರಿಯುತ್ತಾರೆ ಎಂಬ ಅಮಿತ್ ಶಾ ಹೇಳಿದ್ದಾರೆ. ಇನ್ನೇನು ಬಂದು ತೆಗೆಯುತ್ತೇನೆಂದು ಹೇಳಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಯಾವುದೇ ಪಾರ್ಟಿಯ ಹೈಕಮಾಂಡ್ ಆದರೂ ತೆಗೆಯುತ್ತೇನೆಂದು ಹೇಳುವುದಿಲ್ಲ. ಹೈಕಮಾಂಡ್ ತೆಗೆಯುತ್ತೇನೆಂದರೆ ಸರ್ಕಾರ ನಡೆಯುತ್ತದೆಯೇ? ಕೆಲಸ ಮಾಡಲು ಆಗುತ್ತದೆಯೇ ಎಂದರು.
ಇದನ್ನೂ ಓದಿ:ಎಸ್‌ಟಿ ಹೋರಾಟಕ್ಕೆ ಸಿದ್ದರಾಮಯ್ಯ ಬರುವುದಾದರೆ ಬರಲಿ, ಗೊಂದಲ ಸೃಷ್ಟಿ ಬೇಡ: ಈಶ್ವರಪ್ಪ
ಅವರು ಆ ರೀತಿ ಹೇಳಬಹುದು, ಆದರೆ ನನಗಿರುವ ಮಾಹಿತಿ ಬೇರೆ. ನನಗೆ ಆರ್ ಎಸ್ಎಸ್ ಮೂಲಗಳಿಂದ ಮಾಹಿತಿ ಇದೆ. ಸಿಎಂ ಯಡಿಯೂರಪ್ಪ ಅವರನ್ನು ಏಪ್ರಿಲ್ ನಂತರ ಕೆಳಗಿಳಿಸುತ್ತಾರೆ ಎಂದು ಹೇಳಿದರು.
ಏನೇನ್ ಮಾಡಿದ್ದಾನೋ ಯಾರಿಗ್ ಗೊತ್ತು.?
ಸಿಎಂ ವಿರುದ್ಧ ಸಿಡಿ ಬ್ಲಾಕ್ ಮೇಲ್ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಈ ವಯಸ್ಸಿನಲ್ಲಿ ಏನೇನು ಮಾಡಿದ್ದಾನೋ ಯಾರಿಗೆ ಗೊತ್ತು? ಅದೂ ಅಸಹ್ಯವಾಗಿ ಬೇರೆ ಇದೆಯಂತಲ್ಲಪ್ಪ! ಅದು ಗೊತ್ತಾಗ ಬೇಕಲ್ವೆ. ಈ ಬಗ್ಗೆ ತನಿಖೆಯಾಗಬೇಕು ಎಂದರು.
ಸಿಡಿಯಲಿ ಏನೇನು ಮಾಡಿದ್ದಾರೆ ಎನ್ನುವುದು ಬಹಿರಂಗವಾಗಲಿ. ಎಲ್ಲವೂ ಗೊತ್ತಾಗಬೇಕು ಅಂದರೆ ತನಿಖೆಯಾಗಬೇಕು ಎಂದರು.
ಶರತ್ ಬಚ್ಚೇಗೌಡ ಕಾಂಗ್ರೆಸ್ ನಾಯಕರ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಗ್ರಾ.ಪಂ ಚುನಾವಣೆಯಲ್ಲಿ ನಮ್ಮ ಪಕ್ಷ ಮತ್ತು ಶರತ್ ಸೇರಿ ಚುನಾವಣೆ ಎದುರಿಸಿದ್ದರು. ಹೋಸಕೋಟೆ ಕ್ಷೇತ್ರದಲ್ಲಿ ಶೇ70 ರಷ್ಟು ಬೆಂಬಲಿತರು ಗೆದ್ದಿದ್ದಾರೆ. ಈ ಹಿನ್ನಲೆಯಲ್ಲಿ ನನಗೆ ಧನ್ಯವಾದ ಹೇಳಲು ಬಂದಿದ್ದರು. ಅವರನ್ನು ಪಕ್ಷಕ್ಕೆ ಸೇರಿಸುವ ಬಗ್ಗೆ ಮಾತುಕತೆ ನಡಯುತ್ತಿದೆ. ಇನ್ನೊಂದು 15 ದಿನದಲ್ಲಿ ಈ ಬಗ್ಗೆ ತೀರ್ಮಾನವಾಗುತ್ತದೆ ಎಂದರು.