ರೈತರಿಗೆ ಕೃಷಿ ಮಾಹಿತಿ, ವಸ್ತು ಪ್ರದರ್ಶನ

Team Udayavani, Jun 11, 2019, 3:00 AM IST

ಎಚ್‌.ಡಿ.ಕೋಟೆ: ಪಟ್ಟಣದ ಅಂಬೇಡ್ಕರ್‌ ಸಮುದಾಯ ಭವನದ ಆವರಣದಲ್ಲಿ ಕೃಷಿ ಇಲಾಖೆ ಹಾಗೂ ಕೃಷಿಯೇತರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮನ್ನು ಹಿರಿಯ ಸಾಹಿತಿ ಗಿರೀಶ್‌ ಕಾರ್ನಾಡ್‌ ನಿಧನದ ಹಿನ್ನಲೆಯಲ್ಲಿ ಅರ್ಧಕ್ಕೆ ಮೊಟಕು ಗೊಳಿಸಿ ಎರಡು ನಿಮಿಷಗಳ ಕಾಲ ಶ್ರದ್ಧಾಂಜಲಿ ಸಲ್ಲಿಸಿ ವೇದಿಕೆ ಕಾರ್ಯಕ್ರಮವನ್ನು ರದ್ದು ಪಡಿಸಲಾಯಿತು. ಬಳಿಕ ರೈತರಿಗೆ ಕೃಷಿ ಮಾಹಿತಿ ನೀಡಲಾಯಿತು.

ವಸ್ತು ಪ್ರದರ್ಶನ: ಪ್ರತಿ ವರ್ಷದಂತೆ ಈ ವರ್ಷ ಕೃಷಿ ಅಭಿಯಾನ ವೇದಿಕೆ ಕಾರ್ಯಕ್ರಮ ಹಿನ್ನಲೆಯಲ್ಲಿ ಕೃಷಿ ಮತ್ತು ಕೃಷಿಯೇತರ ಇಲಾಖೆಗಳು ಕೃಷಿ ಸಂಬಂಧಿಸಿದ ಹಾಗೂ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತ ಏರ್ಪಡಿಸಿದ್ದ ವಸ್ತು ಪ್ರದರ್ಶನವನ್ನು ಶಾಸಕ ಅನಿಲ್‌ ಚಿಕ್ಕಮಾದು ಉದ್ಘಾಟಿಸಿದರು.

ಯೋಜನೆ ತಲುಪಿಸಿ: ಬಳಿಕ ಮಾತನಾಡಿದ ಶಾಸಕ‌ರು, 2019-20 ಸಾಲಿನ ಸರ್ಕಾರದ ಯೋಜನೆಗಳ ಬಗ್ಗೆ ರೈತರಿಗೆ ತಿಳಿಸಿ ಮಾರ್ಗದರ್ಶನ ನೀಡಿ ಸರ್ಕಾರದ ಯೋಜನೆಗಳ ಯಶಸ್ಸಿಗೆ ಅಧಿಕಾರಿಗಳು ಶ್ರಮಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರಿಗೆ ಸೂಚಿಸಿದರು.

ಮಾತಿನ ಚಕಮಕಿ: ಶಾಸಕರು ಫಲಾನುಭವಿಯೊಬ್ಬರಿಗೆ ಕೃಷಿ ಪರಿಕರ ವಿತರಣೆ ವೇಳೆ ಇತರ ಜನಪ್ರತಿನಿಧಿಗಳನ್ನು ಕಡೆಗಣಿಸಿದ್ದರಿಂದ ಸಿಟ್ಟಾದ ತಾಲೂಕು ಪಂಚಾಯ್ತಿ ಸದಸ್ಯ ಟಿ.ವೆಂಕಟೇಶ್‌ ಅವರು ಶಾಸಕರ ಎದುರೇ ಸಹಾಯಕ ಕೃಷಿ ನಿರ್ದೇಶಕ ಜಯರಾಮಯ್ಯ ಅವರನ್ನು ತರಾಟೆ ತಗೆದುಕೊಂಡರು.

ಶಾಸಕರಿಗಾದರೂ ತಿಳಿಯದಿರಬಹುದು ನಿಮಗೆ ಗೊತ್ತಿಲ್ವಾ ಎಂದು ಅಧಿಕಾರಿಯನ್ನು ಪ್ರಶ್ನಿಸಿದರು ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಅನಿಲ್‌ ಚಿಕ್ಕಮಾದು, ನನಗೆ ನಿಮ್ಮ ಅವಶ್ಯಕತೆ ಇಲ್ಲ, ನಾನೇಕೆ ಕರೆಯಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಸದಸ್ಯ ಟಿ.ವೆಂಕಟೇಶ್‌ ಕೂಡ ನಿಮ್ಮ ಅವಶ್ಯಕತೆನೂ ನನಗಿಲ್ಲ. ನಾನು ಕೂಡ ನಿಮ್ಮ ಹಾಗೆ ಓರ್ವ ಜನಪ್ರತಿನಿಧಿ ಎಂಬುದನ್ನು ಮರೆತು ಮಾತನಾಡುತ್ತಿದ್ದೀರಾ ಎಂದರು.

ರೈತರ ತರಾಟೆ: ಹಿರಿಯ ಸಾಹಿತಿ ಗಿರೀಶ್‌ ಕಾರ್ನಾಡ್‌ ನಿಧನ ಹಿನ್ನಲೆಯಲ್ಲಿ ಕಾರ್ಯಕ್ರಮ ಮೊಟಕುಗೊಳಿಸಿ ಶಾಸಕರು ಅತ್ತ ಹೊರಡುತ್ತಿದ್ದಂತೆ ಇತ್ತ ರೈತ ಸಂಘದ ಪದಾಧಿಕಾರಿಗಳು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಯರಾಮಯ್ಯ ಅವರನ್ನು ಹಿಗ್ಗಾಮುಗ್ಗಾ ತರಾಟೆ ತಗೆದುಕೊಂಡರು.

ನಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಿ ಕರೆದ ಮೇಲೆ ಗೌರವವಾಗಿ ನಡೆಸಿಕೊಳ್ಳಬೇಕು, ಇಂತಹ ಕಾರ್ಯಕ್ರಮಕ್ಕೆ ನಮ್ಮನ್ನು ಏಕೆ ಕರೆಯುತ್ತೀರಿ, ಶಾಸಕರೊಬ್ಬರನ್ನೇ ಕರೆಸಿಕೊಂಡು ಕಾರ್ಯಕ್ರಮ ಮಾಡಿಕೊಳ್ಳಬಹುದಿತ್ತಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್‌, ತಾಪಂ ಸದಸ್ಯ ಟಿ.ವೆಂಕಟೇಶ್‌, ಪ್ರಗತಿಪರ ರೈತ ಮಲಾರ ಪುಟ್ಟಯ್ಯ, ಹಿರಿಯ ಮುಖಂಡ ಚಾ.ನಂಜುಂಡಮೂರ್ತಿ, ಪುರಸಭಾ ಸದಸ್ಯ ನರಸಿಂಹಮೂರ್ತಿ, ಟಿಎಪಿಸಿಎಂಎಸ್‌ ಅಧ್ಯಕ್ಷ ಕೃಷ್ಣ, ಪುರಸಭೆ ಮಾಜಿ ಸದಸ್ಯ ಅನಿಲ್‌,

ಮುಖಂಡರಾದ ವನಸಿರಿ ಶಂಕರ್‌, ಆದಿವಾಸಿ ಮುಖಂಡ ಕಾವೇರ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮಹದೇವನಾಯ್ಕ, ತಾಲೂಕು ಅಧ್ಯಕ್ಷ ರವಿಕುಮಾರ್‌, ದೇವಲಾಪುರ ಶಿವಣ್ಣ, ಕೃಷಿ ಅಧಿಕಾರಿಗಳಾದ ಪ್ರದೀಪ್‌, ಗಂಗಾಧರ್‌, ಗುರುಪ್ರಸಾದ್‌, ಹರೀಶ್‌ ಇತರರು ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ