ನಕಲಿ ಕ್ಲಿನಿಕ್‌ಗಳ ಮೇಲೆ ದಾಳಿ: ನೋಟಿಸ್‌

Team Udayavani, May 15, 2019, 3:00 AM IST

ಹುಣಸೂರು: ನಗರದಲ್ಲಿ ಪೈಲ್ಸ್‌ ಕಾಯಿಲೆಗೆ ನೀಡುತ್ತಿದ್ದ ನಕಲಿ ವೈದ್ಯರಿಗೆ ನೋಟಿಸ್‌ ನೀಡಿದ್ದಲ್ಲದೇ ಕ್ಲಿನಿಕ್‌ಗೆ ಬೀಗ ಜಡಿದಿರುವ ಘಟನೆ ಜರುಗಿದೆ.

ನಗರದ ಜನನಿಬಿಡ ಪ್ರದೇಶವಾದ ಗೋಕುಲ ರಸ್ತೆಯಲ್ಲಿ ಅನನ್ಯ ಎಂಬ ಹೆಸರಿನಲ್ಲಿ ಖಾಸಗಿ ಕ್ಲಿನಿಕ್‌ ತೆರೆದು ವಂಚಿಸುತ್ತಿದ್ದರೆನ್ನಲಾಗಿರುವ ವೈದ್ಯ ಡಾ.ಎನ್‌.ಸಿ.ರಾಯ್‌ ಚಿಕಿತ್ಸೆ ನೀಡುತ್ತಿರುವುದನ್ನು ದಾಳಿ ವೇಳೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್‌ ನೇತೃತ್ವದ ತಂಡವು ಪತ್ತೆ ಹಚ್ಚಿದ್ದು, ಇದೀಗ ಬಾಗಿಲು ಮುಚ್ಚಿಸಿದೆ.

ಖಾಸಗಿ ವೈದ್ಯರೊಬ್ಬರು ಗೋಕುಲ ರಸ್ತೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಇವರ ಬಳಿ ಯಾವುದೇ ದಾಖಲೆ ಇಲ್ಲವೆಂದು ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಮಂಗಳವಾರ ದಿಢೀರ್‌ ದಾಳಿ ನಡೆಸಿದ್ದಾರೆ.

ಡಾ.ರಾಯ್‌ ನಡೆಸುತ್ತಿರುವ ಅನನ್ಯ ಕ್ಲಿನಿಕ್‌ನಲ್ಲಿ ಕೆಪಿಎಂಎ ಕಾಯ್ದೆಯಡಿ ದಾಖಲಾತಿಗಳು, ವಿದ್ಯಾರ್ಹತೆ ದಾಖಲಾತಿ ಇನ್ನಾವುದೂ ಇರಲಿಲ್ಲ. ಕ್ಲಿನಿಕ್‌ನಿಂದ ಜೈವಿಕ ತ್ಯಾಜ್ಯಗಳ ಸಂಗ್ರಹಣೆ ಮತ್ತು ವಿತರಣೆ ಕೂಡ ಸಮರ್ಪಕವಾಗಿರ‌ದಿದ್ದರಿಂದ ಬೀಗ ಹಾಕಿಸಿದ್ದಾರೆ. 24 ಗಂಟೆಯಲ್ಲಿ ಸೂಕ್ತ ದಾಖಲಾತಿಗಳನ್ನು ಒದಗಿಸುವಂತೆ ಟಿಎಚ್‌ಒ ಡಾ.ಕೀರ್ತಿಕುಮಾರ್‌ ನೋಟಿಸ್‌ ನೀಡಿದ್ದಾರೆ.

ಅವಧಿ ಮುಗಿದ ಔಷಧ ಪತ್ತೆ: ಗೋಕುಲ ರಸ್ತೆಯ ಬಾಲಾಜಿ ಕ್ಲಿನಿಕ್‌ ಹಾಗೂ ಐಕೆ ಕಲ್ಯಾಣ ಮಂಟಪ ರಸ್ತೆಯ ಹೋಲಿ ಕ್ಲಿನಿಕ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಕ್ಲಿನಿಕ್‌ನಿಂದ ಜೈವಿಕ ತ್ಯಾಜ್ಯಗಳ ಸಂಗ್ರಹಣೆ ಮತ್ತು ವಿಲೇವಾರಿ ವ್ಯವಸ್ಥೆ ಇಲ್ಲವಿದ್ದು, ಆಲೋಪತಿ ವೈದ್ಯರಲ್ಲದಿದ್ದರೂ ಆಲೋಪತಿ ಚಿಕಿತ್ಸೆ ನೀಡುತ್ತಿರುವುದು ಹಾಗೂ ಅವಧಿ ಮುಗಿದ ಔಷಧ‌ ದಾಸ್ತಾನು ಇದ್ದುದನ್ನು ಪತ್ತೆ ಹಚ್ಚಿ ಎಚ್ಚರಿಕೆ ನೀಡಿದರು.

ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ನಿಯಂತ್ರಣಕ್ಕಾಗಿ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳ ಆದೇಶದನ್ವಯ ಇಂತಹ ದಿಢೀರ್‌ ಭೇಟಿ ಮತ್ತು ಪರಿಶೀಲನೆಗಳನ್ನು ನಡೆಸುತ್ತೇವೆ. ನಿಯಮಗಳನ್ನು ಉಲ್ಲಂಘಿಸಿ ವೈದ್ಯ ವೃತ್ತಿ ನಡೆಸುವವರನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.

ಅಮಾಯಕರ ಪ್ರಾಣದ ಜೊತೆ ಚೆಲ್ಲಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್‌ ಎಚ್ಚರಿಕೆ ನೀಡಿದ್ದಾರೆ. ದಾಳಿ ವೇಳೆ ಹಿರಿಯ ಆರೋಗ್ಯ ಸಹಾಯಕ ಶಿವನಂಜು ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ