14ಕ್ಕೆ ಭಾರತ್ ಕಿಸಾನ್ ಅಧಿಕಾರ ಯಾತ್ರೆ ಮೈಸೂರಿಗೆ
Team Udayavani, Aug 1, 2018, 4:28 PM IST
ಮೈಸೂರು: ರೈತರ ಸಂಪೂರ್ಣ ಸಾಲಮನ್ನಾ ಹಾಗೂ ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯಂತೆ ರೈತರ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಲು ಕೈಗೊಂಡಿರುವ ಭಾರತ್ ಕಿಸಾನ್ ಅಧಿಕಾರ ಯಾತ್ರೆ ಆ.14ರಂದು ಮೈಸೂರಿಗೆ ಆಗಮಿಸಲಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಯಾತ್ರೆಯ ಸ್ವಾಗತಕ್ಕೆ ಸಿದ್ಧತೆ ಸಂಬಂಧ ರೈತ ಮುಖಂಡರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಕಿಸಾನ್ ಮಹಾಸಂಘದ ವತಿಯಿಂದ ಕಾಶ್ಮೀರದಿಂದ ಕನ್ಯಾ
ಕುಮಾರಿವರೆಗೆ ಕಿಸಾನ್ ಅಧಿಕಾರ ಯಾತ್ರೆ ನಡೆಸಲಾಗುತ್ತಿದ್ದು, ಜು.26ರಂದು ಕಾಶ್ಮೀರದಿಂದ ಆರಂಭವಾಗಿ ಹಲವಾರು ರಾಜ್ಯಗಳನ್ನು ಸುತ್ತಿರುವ ಯಾತ್ರೆ ಆ.13ರಂದು ಹುಬ್ಬಳ್ಳಿ ಹಾಗೂ 14ರಂದು ಮೈಸೂರಿಗೆ ಆಗಮಿಸಲಿದೆ. ಅಂದು ಬೆಳಗ್ಗೆ 11ಗಂಟೆಗೆ ಯಾತ್ರೆಯನ್ನು ನೂರಾರು ರೈತರು ಸ್ವಾಗತಿಸಲಿದ್ದಾರೆ ಎಂದು ತಿಳಿಸಿದರು.
1500 ಕೋಟಿ ರೂ. ಬಾಕಿ: ರಾಜ್ಯದಲ್ಲಿ ಪ್ರಸಕ್ತ ಸಾಲಿನ ಕಬ್ಬು ಉತ್ಪಾದನೆ 4.60 ಕೋಟಿ ಟನ್ ಇಳುವರಿ ಬರುವ ಸಾಧ್ಯತೆ ಇದೆ. 2017-18ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ಸುಮಾರು 1500 ಕೋಟಿ ರೂ. ಕಬ್ಬಿನ ಹಣವನ್ನು ಕಾರ್ಖಾನೆಗಳು ಪಾವತಿಸಿಲ್ಲ. ಸಕ್ಕರೆ ಸಚಿವ ಕೆ.ಜೆ.ಜಾರ್ಜ್ ಅವರನ್ನು ಭೇಟಿ ಮಾಡಿ ಕೂಡಲೇ ಹಣ ಕೊಡಿಸುವಂತೆ ಒತ್ತಾಯಿಸಲಾಗಿದ್ದು, 15 ದಿನಗಳಲ್ಲಿ ರೈತರ ಹಣ ಕೊಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.
ಕಾಯ್ದೆ ತಿದ್ದುಪಡಿ: ಕಬ್ಬು ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತಂದು ರೈತರ ಹಣ ಪಾವತಿ ವಿಳಂಬ ಮಾಡುವ ಸಕ್ಕರೆ
ಕಾರ್ಖಾನೆ ಮಾಲಿಕರಿಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಲಾಗಿದೆ
ಎಂದರು. ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ರಾಜ್ಯ ಉಪಾಧ್ಯಕ್ಷ ಕೂಡನಹಳ್ಳಿ ರಾಜಣ್ಣ,
ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ಹಳ್ಳಿಕೆರೆಹುಂಡಿ ಭಾಗ್ಯ ರಾಜ್, ಕಿರಗಸೂರು ಶಂಕರ್, ಮಹಿಳಾ ಅಧ್ಯಕ್ಷೆ ಪುಷ್ಪಲತಾ,
ತಾಲೂಕು ಅಧ್ಯಕ್ಷರಾದ ಸಿದ್ದೇಶ್, ಹಾಡ್ಯ ರವಿ, ಮಾದಪ್ಪ, ರವೀಂದ್ರ, ವರಕೋಡು ಕೃಷ್ಣೇಗೌಡ, ಗಂಗಾಧರಪ್ಪ,
ಮಹದೇವಸ್ವಾಮಿ, ಚಂದ್ರಶೇಖರಮೂರ್ತಿ ಮೊದಲಾದವರು ಸಭೆಯಲ್ಲಿ ಹಾಜರಿದ್ದರು.