ಚಾಮುಂಡೇಶ್ವರಿಗೆ ಸರ್ಕಾರದಿಂದಲೇ ಸೀರೆ
Team Udayavani, Sep 25, 2019, 3:00 AM IST
ಮೈಸೂರು: ದಸರಾ ಮಹೋತ್ಸವ ಸಂದರ್ಭದಲ್ಲಿ ಚಾಮುಂಡೇಶ್ವರಿಗೆ ಜಿಲ್ಲಾಡಳಿತದಿಂದಲೇ ಸೀರೆ ಉಡಿಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿದ ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸು, ದೇವಿಯ ಸೀರೆ ವಿವಾದಕ್ಕೆ ತೆರೆ ಎಳೆದು ಒಂದೇ ಸೀರೆ ಉಡಿಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ಸಚಿವ ವಿ.ಸೋಮಣ್ಣ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿ ದಸರಾ ಮಹೋತ್ಸವ ಮಾಡುವಾಗ ದೇವಿಗೆ ಸರ್ಕಾರದಿಂದಲೇ ಸೀರೆ ಉಡಿಸಲಾಗುವುದು ಎಂದರು.
ಕಳೆದ ವರ್ಷದ ದಸರಾ ಮಹೋತ್ಸವ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಅವರ ಪತ್ನಿ ಹಾಗೂ ಮಾಜಿ ಮೇಯರ್ ಎಂ.ಜೆ.ರವಿಕುಮಾರ್ ದೇವಸ್ಥಾನ ಆಡಳಿತ ಮಂಡಳಿಗೆ ಪ್ರತ್ಯೇಕವಾಗಿ ಸೀರೆ ಕಳುಹಿಸಿದ್ದರು. ಇದರಿಂದಾಗಿ ಅರ್ಚಕರು ಒಂದರ ಮೇಲೊಂದು ಸೀರೆ ಉಡಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಈ ವರ್ಷ ಸರ್ಕಾರದಿಂದಲೇ ದೇವಿಗೆ ಸೀರಿ ಉಡಿಸಲು ನಿರ್ಧರಿಸಲಾಗಿದೆ.
ಗೊಂದಲಗಳಿಗೆ ತೆರೆ: ಈ ಹಿಂದೆ ಜಂಬೂ ಸವಾರಿ ವೇಳೆ ತಾಯಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಸೀರೆ ನೀಡುವ ಮತ್ತು ಅಲಂಕಾರ ಮಾಡಲು ಕೆಲ ವ್ಯಕ್ತಿಗಳು ಪೈಪೋಟಿ ನಡೆಸುತ್ತಿದ್ದು, ಕೆಲವು ಗೊಂದಲಗಳೂ ಉಂಟಾಗುತ್ತಿದ್ದವು. ಈ ಹಿನ್ನೆಲೆ ಉಸ್ತುವಾರಿ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ವತಿಯಿಂದಲೇ ಆ ಕೆಲಸ ಮಾಡುತ್ತಿರುವುದು ಸಂತಸದ ವಿಚಾರ. ಇದರಿಂದ ಗೊಂದಲಗಳಿಗೆ ತೆರೆ ಬೀಳಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.