ನೆರೆ ಹಾನಿ ಪರಿಶೀಲಿಸಿದ ಕಾಂಗ್ರೆಸ್ ನಿಯೋಗ
Team Udayavani, Aug 20, 2019, 3:00 AM IST
ಎಚ್.ಡಿ.ಕೋಟೆ: ತಾಲೂಕಿನಲ್ಲಿ ನೆರೆ ಹಾನಿ ಪ್ರದೇಶ ಹಾಗೂ ಪರಿಹಾರ ಕೇಂದ್ರಗಳಿಗೆ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದ ಕಾಂಗ್ರೆಸ್ ಪಕ್ಷದ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿತು.
ತಾಲೂಕಿನ ಬಿದರಹಳ್ಳಿ ವೃತ್ತದಲ್ಲಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ರಾಜ್ಯದ 22 ಜಿಲ್ಲೆಗಳಲ್ಲಿ ಮಳೆ ಮತ್ತು ಪ್ರವಾಹದ ಹಾನಿ ಬಗ್ಗೆ ಸಮಗ್ರ ವರದಿಯನ್ನು ಕೆಪಿಸಿಸಿಗೆ ಒದಗಿಸುತ್ತೇವೆ. ಇದಕ್ಕಾಗಿ ಕೆಪಿಸಿಸಿ 5 ತಂಡ ರಚಿಸಿದ್ದು, ಮೈಸೂರು ಮತ್ತು ಕೊಡಗು ಜಿಲ್ಲೆಗೆ ತಂಡದ ಅಧ್ಯಕ್ಷರನ್ನಾಗಿ ತಮ್ಮನ್ನು ಆಯ್ಕೆ ಮಾಡಲಾಗಿದೆ ಎಂದರು.
ಕ್ಷೇತ್ರದ ಶಾಸಕ ಸಿ.ಅನಿಲ್ ಚಿಕ್ಕಮಾದು ಅವರು ಕಳೆದ 10 ದಿನಗಳಿಂದ ಇಲ್ಲೇ ಇದ್ದು, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಶ್ಲಾಘಿಸಿದರು.ಇದಕ್ಕೂ ಮುನ್ನ ಇವರು, ಸರಗೂರು ಪಟ್ಟಣಕ್ಕೆ ಭೇಟಿ ನೀಡಿ ಮನೆ ಕುಸಿದ ಸ್ಥಳ, ನಂತರ ತುಂಬಸೋಗೆ ಸೇತುವೆ ಹಾಗೂ ಅಂಕನಾಥಪುರ ಮತ್ತಿತರ ಪ್ರದೇಶಗಳಿಗೆ ನಿಯೋಗ ಭೇಟಿ ನೀಡಿತು.
ಇದೆ ವೇಳೆ, ಶಾಸಕ ಸಿ.ಅನಿಲ್‌ಚಿಕ್ಕಮಾದು, ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿದರು. ಈ ವೇಳೆ ವರುಣಾ ಶಾಸಕ ಯತೀಂದ್ರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಡಾ.ಬಿ.ಜೆ.ವಿಜಯಕುಮಾರ್, ಜಿಪಂ ಸದಸ್ಯೆ ನಂದಿನಿ, ಮುಖಂಡರಾದ ಸಿದ್ದೇಗೌಡ, ಪರಶಿವಮೂರ್ತಿ, ತಹಶೀಲ್ದಾರ್ ಆರ್. ಮಂಜುನಾಥ್, ಸರಗೂರು ತಹಸೀಲ್ದಾರ್ ಬಸವರಾಜ್ ಚಿಗರಿ, ತಾಪಂ ಇಒ ರಾಮಲಿಂಗಯ್ಯ ಇತರರಿದ್ದರು.