ಗಾರೆ ಕೆಲಸಗಾರನ ಪುತ್ರಿ ಪಿಎಸ್‌ಐ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಂ.2

Team Udayavani, Jul 9, 2019, 3:00 AM IST

ಕೆ.ಆರ್‌.ನಗರ: ಬಡತನವಿದ್ದರೇನು, ಛ‌ಲವೊಂದಿದ್ದರೆ ಏನು ಬೇಕಾದರೂ ಸಾಧಿಸಿಯೇ ತೀರಬಹುದು ಎಂಬುದನ್ನು ತೋರಿಸಿ ಕೊಟ್ಟಿರುವ ಗಾರೆ ಕಾರ್ಮಿಕನ ಪುತ್ರಿ, ರಾಜ್ಯದ ರಕ್ಷಣೆ ಹೊತ್ತಿರುವ ಪೊಲೀಸ್‌ ಇಲಾಖೆಯ 2018-19ನೇ ಸಾಲಿನಲ್ಲಿ ನಡೆದ ಪಿಎಸ್‌ಐ(ಸಿವಿಲ್‌) ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ್‍ಯಾಂಕ್‌ ಪಡೆದು ಮಾದರಿಯಾಗಿದ್ದಾರೆ.

ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಪದವಿ ಶಿಕ್ಷಣ ಪಡೆದುಕೊಳ್ಳುವುದೇ ದುಸ್ತರವಾಗಿದ್ದು, ಇದರ ನಡುವೆಯೂ ಪೊಲೀಸ್‌ ಸಬ್‌ ಇನ್ಸ್‌ಪೆ‌ಕ್ಟರ್‌ ಹುದ್ದೆಗೆ ಏರುವುದು ಸವಾಲಾಗಿದೆ. ಇಂತಹ ಸವಾಲನ್ನು ಕೆ.ಆರ್‌.ನಗರ ತಾಲೂಕಿನ ಕರ್ತಾಳು ಗ್ರಾಮದ, ಗಾರೆ ಕಾರ್ಮಿಕ ಮೂರ್ತಿಗೌಡ ಮತ್ತು ಶಶಿಕಲಾ ದಂಪತಿಯ ಪುತ್ರಿ ಶ್ಯಾಮಲ ಮೆಟ್ಟಿನಿಂತು ಹುದ್ದೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯಕ್ಕೆ 2ನೇ ರ್‍ಯಾಂಕ್‌ ಪಡೆದಿರುವ ಶ್ಯಾಮಲಾ ಕೆ.ಆರ್‌.ನಗರ ತಾಲೂಕಿನ ಹೊಸೂರುಕಲ್ಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕೇರಳಾಪುರದ ವಿದ್ಯಾಗಣಪತಿ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣ, ಪಟ್ಟಣದ ಸರ್ಕಾರಿ ಬಾಲಕಿಯರ ಪದಪೂರ್ವ ಕಾಲೇಜಿನಲ್ಲಿ ಪಿಯುಸಿ, ಮೈಸೂರಿನ ಜೆಎಸ್‌ಎಸ್‌ ಮಹಿಳಾ ಕಾಲೇಜಿನಲ್ಲಿ ಪದವಿ ಹಾಗೂ ಉನ್ನತ ಶಿಕ್ಷಣವನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ಪಡೆದುಕೊಂಡಿದ್ದಾರೆ.

ಪಿಎಸ್‌ಐ ಹುದ್ದೆಗೆ 60 ಸಾವಿರ ಅರ್ಜಿ: 190 ಮಹಿಳಾ ಪಿಎಸ್‌ಐ ಹುದ್ದೆ ಭರ್ತಿಗೆ ಪೊಲೀಸ್‌ ಇಲಾಖೆ ಅರ್ಜಿ ಅಹ್ವಾನಿಸಿತ್ತು. 60 ಸಾವಿರಕ್ಕೂ ಹೆಚ್ಚು ಮಂದಿ ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಕಳೆದ ನವೆಂಬರ್‌ನಲ್ಲಿ ನಡೆದ ಕ್ರೀಡಾ ಸ್ಫರ್ಧೆಯಲ್ಲಿ 35 ಸಾವಿರ ಮಂದಿ ಆಯ್ಕೆಯಾಗಿ ಮುಂದಿನ ಸುತ್ತಿನ ಆಯ್ಕೆಗೆ ಅರ್ಹತೆ ಪಡೆದಿದ್ದರು. ಬಳಿಕ ಜನವರಿ 13ರಂದು ನಡೆದ ಲಿಖೀತ ಪರೀಕ್ಷೆಯಲ್ಲಿ 380 ಮಂದಿ ಆಯ್ಕೆಯಾಗಿದ್ದರು. ಅಂತಿಮವಾಗಿ ಸಂದರ್ಶನ ನಡೆಸಿ ಪ್ರಕಟವಾದ ಫ‌ಲಿತಾಂಶದಲ್ಲಿ ಶ್ಯಾಮಲಾ ರಾಜ್ಯಕ್ಕೆ 2ನೇ ರ್‍ಯಾಂಕ್‌ ಪಡೆದು ಪಿಎಸ್‌ಐ ಆಗಿ ಆಯ್ಕೆಯಾಗಿದ್ದಾರೆ.

ಸತತ ಅಧ್ಯಯನ: ಸಿವಿಲ್‌ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ಶ್ಯಾಮಲಾ ಅವರು ಈ ಪರೀಕ್ಷೆಯನ್ನು ಎದುರಿಸಲು ಪೂರ್ವ ತಯಾರಿ ನಡೆಸಿದ್ದರು. ಜಯಪುರದ ಚಾಣಕ್ಯ ಅಕಾಡೆಮಿಯಲ್ಲಿ ತರಬೇತಿ ಪಡೆದು ಮನೆಯಲ್ಲಿ ನಿತ್ಯ 12ರಿಂದ 13 ಗಂಟೆಯವರೆಗೆ ಅಭ್ಯಾಸ ನಡೆಸುತ್ತಿದ್ದ ಇವರು ಕೆಲ ಸಮಯದಲ್ಲಿ ಗ್ರಂಥಾಲಯಗಳಿಗೆ ತೆರಳಿ ಮತ್ತು ವಿವಿಧ ಸ್ವರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಅಧ್ಯಯನ ಮಾಡುತ್ತಿದ್ದರು.

ತಂದೆ ಆಸೆ ಈಡೇರಿಕೆ: ಕಡು ಬಡತನದಲ್ಲಿ ಹುಟ್ಟಿದ ಶ್ಯಾಮಲಾ ಅವರ ತಂದೆ ಮೂರ್ತಿಗೌಡ ಅವರು ತಮ್ಮ ಕುಟುಂಬದ ಜೀವನದ ಬಂಡಿ ಎಳೆಯಲು ಗಾರೆ ಕೆಲಸ ಮಾಡುತ್ತಿದ್ದು, ಇರುವ ಇಬ್ಬರು ಪುತ್ರಿಯರಲ್ಲಿ ಒಬ್ಬಳನ್ನಾದರೂ ಪೊಲೀಸ್‌ ಕೆಲಸಕ್ಕೆ ಸೇರಿಸಬೇಕೆಂದು ದುಡಿದ ಹಣವನ್ನು ಶ್ಯಾಮಲಾ ಅವರ ಓದಿಗೆ ಮುಡಿಪಾಗಿಟ್ಟಿದ್ದು, ಬಡತದಲ್ಲಿ ಬೆಳೆದಿದ್ದ ಶ್ಯಾಮಲಾ ಪಿಎಸ್‌ಐ ಹುದ್ದೆ ಪಡೆಯುವ ಮೂಲಕ ತಂದೆಯ ಕನಸು ನನಸು ಮಾಡಿದ್ದಾರೆ.

ಪಿಎಸ್‌ಐ ಹುದ್ದೆಗೆ ತಮ್ಮ ಪುತ್ರಿ ಅರ್ಜಿ ಸಲ್ಲಿಸುವಾಗ ಆಯ್ಕೆಯಾಗುತ್ತಾಳೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆ. ಇದನ್ನು ಹುಸಿ ಮಾಡದೆ ಕಠಿಣ ಪರಿಶ್ರಮದಿಂದ ತಮ್ಮ ಪುತ್ರಿ ಶ್ಯಾಮಲಾ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ಆಯ್ಕೆಯಾಗಿರುವುದು ಸಂತಸ ತಂದಿದೆ.
-ಮೂರ್ತಿಗೌಡ, ಶ್ಯಾಮಲಾ ತಂದೆ

ನನ್ನ ತಂದೆ ಗಾರೆ ವೃತ್ತಿ ಮತ್ತು ನನ್ನ ತಾಯಿ ಹಸು ಸಾಕಾಣಿಕೆ ಮಾಡಿ ನನ್ನ ಓದಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು.ಇವರ ಶ್ರಮಕ್ಕೆ ನಾನು ಪ್ರತಿಫ‌ಲ ನೀಡಲೇಬೇಕೆಂದು ತೀರ್ಮಾನಿಸಿ ಶ್ರಮ ವಹಿಸಿ ಓದಿದ್ದು ಆಯ್ಕೆಯಾಗಲು ಸ್ಫೂರ್ತಿಯಾಗಿದೆ.
-ಶ್ಯಾಮಲಾ, ಪಿಎಸ್‌ಐ

* ಗೇರದಡ ನಾಗಣ್ಣ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ