ಸೈಕಲ್ ಏರಿ ಪರಿಸರ ಮಹತ್ವ ಸಾರಿದ ಮಕ್ಕಳು

ನಾನಾ ಸಂಘ, ಸಂಸ್ಥೆ, ಸಂಘಟನೆ ಹಾಗೂ ಶಾಲಾ ಕಾಲೇಜುಗಳಿಂದ ವಿಶ್ವ ಪರಿಸರ ದಿನಾಚರಣೆ

Team Udayavani, Jun 6, 2019, 11:54 AM IST

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ನಾನಾ ಶಾಲೆಗಳ ವಿದ್ಯಾರ್ಥಿಗಳು ಸೈಕಲ್ ಜಾಥಾದಲ್ಲಿ ಪಾಲ್ಗೊಂಡು ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.

ಮೈಸೂರು: ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ, ನಗರಪಾಲಿಕೆ ಸೇರಿದಂತೆ ವಿವಿಧ ಸಂಘ ಟನೆಗಳು, ಸಂಘ ಸಂಸ್ಥೆ, ಶಾಲಾ ಕಾಲೇಜುಗಳ ವತಿ ಯಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

ಸೈಕಲ್ ಜಾಥಾ: ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎನ್‌ಸಿಸಿ, ಎನ್‌ಎಸ್‌ಎಸ್‌, ಐಪಿಎಂಒ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸೈಕಲ್ ಜಾಥಾ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಬಳಿ ಆಯೋಜಿಸಿದ್ದ ಜಾಥಾಗೆ ಹಿರಿಯ ಸಿವಿಲ ನ್ಯಾಯಾಧೀಶ ಹಾಗೂ ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರವನ್ನು ಇಂದು ನಾವು ಉಳಿಸಿದರೆ ಮುಂದಿನ ಪೀಳಿಗೆ ಸುಖವಾಗಿ ಜೀವಿಸಬಹುದು ಎಂದರು. ಹೀಗಾಗಿ ಪ್ರತಿಯೊಬ್ಬರೂ ಪರಿಸರ ರಕ್ಷಣೆ ಮಾಡಬೇಕು ಎಂದರು.

ಕೇವಲ ಒಂದು ದಿನ ಪರಿಸರ ದಿನಾಚರಣೆ ಮಾಡಿ ದರೆ ಸಾಲದು. ವರ್ಷಪೂರ್ತಿ ಪರಿಸರ ದಿನಾಚರಣೆ ನಡೆಯಬೇಕು. ಪರಿಸರ ನಾಶದಿಂದ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಕುಡಿಯುವ ನೀರಿಗೂ ಪರಿತಪಿಸಬೇಕಾದ ದಿನಗಳು ಎದುರಾಗು ತ್ತಿವೆ. ಮರಗಿಡಗಳನ್ನು ಕಡಿದು ಕಾಡನ್ನು ಬರಿದಾಗಿಸು ತ್ತಿರುವುದರಿಂದ ಮಳೆ ಕೊರತೆಯಾಗಿದೆ. ಪರಿಸರ ಸಂರಕ್ಷಣೆ ಹಾಗೂ ಉತ್ತಮ ಮಳೆಗಾಗಿ ಪ್ರತಿದಿನವೂ ಸಸಿ ನೆಟ್ಟು ಅವುಗಳನ್ನು ಬೆಳೆಸಲು ಪಣತೊಡಬೇಕು. ಪರಿಸರವನ್ನು ಸಂರಕ್ಷಿಸಿ, ನೆಲ ಜಲವನ್ನು ಉಳಿಸಬೇಕು ಎಂದರು.

ನಗರದ ನಾನಾ ಶಾಲೆಗಳ ವಿದ್ಯಾರ್ಥಿಗಳು ಸೈಕಲ್ ಜಾಥಾದಲ್ಲಿ ಪಾಲ್ಗೊಂಡು ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ಸಸಿ ಬೆಳೆಸಿ ಶಿಶು ಉಳಿಸಿ, ಜೀವಜಲ ಸಂರಕ್ಷಣೆಗೆ ನಾವೆಲ್ಲರೂ ಕೈಜೋಡಿಸೋಣ, ಕಾಡಿದ್ದರೆ ನಾಡು, ನಾಡಿದ್ದರೆ ನಾವು ಮುಂತಾದ ಫ‌ಲಕಗಳನ್ನು ಪ್ರದರ್ಶಿಸಿದರು. ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಸೇರಿದಂತೆ ಜಾಥಾದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.

ಪರಿಸರ ರಕ್ಷಣೆ ಅವಶ್ಯವಲ್ಲ, ಅನಿವಾರ್ಯ: ಮೈಸೂರು ಮಹಾನಗರ ಪಾಲಿಕೆ ಹಾಗೂ ಐಟಿಸಿಯಿಂದ ನಗರ ದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ಗಿಡನೆಡುವ ಕಾರ್ಯ ಕ್ರಮ ಮತ್ತು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.

ಮೇಯರ್‌ ಪುಷ್ಪಲತಾ ಜಗನ್ನಾಥ್‌ ಅವರು ಡಾ. ರಾಜ್‌ಕುಮಾರ್‌ ಉದ್ಯಾನದಲ್ಲಿ 50 ಗಿಡಗಳ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಪರಿಸರ ಮತ್ತು ಮನುಷ್ಯ ಆರೋಗ್ಯಕ್ಕೆ ಸಮೀಪವಿದೆ. ಪರಿಸರವನ್ನು ಮನುಷ್ಯ ಹಾಳು ಮಾಡಿದಷ್ಟು ಅವನ ಆರೋಗ್ಯವೇ ಹಾಳಾಗುತ್ತದೆ. ಇದರಿಂದ ಪರಿಸರ ಸಂರಕ್ಷಣೆ ಅವಶ್ಯವಲ್ಲ, ಅನಿವಾರ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಪ್ರಕೃತಿ ಸಂರಕ್ಷಣೆ ಮತ್ತು ಗಿಡ ನೆಡಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಪಾಲಿಕೆ ಆಯುಕ್ತೆ ಶಿಲ್ಪನಾಗ್‌ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಮೈಸೂರು ಅರಮನೆ ಮುಂಭಾಗದಿಂದ ಆರಂಭವಾದ ಜಾಗೃತಿ ಜಾಥಾವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರಿಸಿ ಪುನಃ ಅಲ್ಲಿಯೇ ಮುಕ್ತಯವಾಯಿತು. ಪಾಲಿಕೆ ಆರೋಗ್ಯಾಧಿಕಾರಿಗಳಾದ ಡಾ. ಡಿ.ಜಿ. ನಾಗರಾಜು, ಜಯಂತ್‌, ಪಾಲಿಕೆ ಪರಿಸರ ಎಂಜಿನಿಯರ್‌ ಮೈತ್ರಿ, ಐಟಿಸಿಯ ಚಂದ್ರಶೇಖರ್‌ ಮತ್ತಿತರು ಇದ್ದರು.

ನಗರದ ಚಿಕ್ಕಗಡಿಯಾರದ ಬಳಿ ಆಯೋಜಿಸಿದ್ದ ಜಾಥಾಗೆ ಮಹಾನಗರ ಪಾಲಿಕೆಯ ಪರಿಸರ ಅಭಿಯಂತರೆ ಮೈತ್ರಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪರಿಸರವನ್ನು ಯಾವ ರೀತಿ ಸಂರಕ್ಷಿಸಬೇಕು, ಮರಗಿಡಗಳನ್ನು ಯಾಕೆ ಬೆಳೆಸಬೇಕು, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಯಾವ ರೀತಿ ಸ್ವಚ್ಛವಾಗಿಸಿರಿಸಿಕೊಳ್ಳಬೇಕೆನ್ನುವುದರ ಕುರಿತು ಮಾಹಿತಿ ನೀಡಿದರು. ಅಲ್ಲೇ ಅಕ್ಕಪಕ್ಕದಲ್ಲಿರುವ ಹೂ, ಹಣ್ಣು, ತರಕಾರಿಗಳ ವ್ಯಾಪಾರಸ್ಥರಿಗೆ ಸ್ಥಳದಲ್ಲಿ ಕಸ ಬಿಸಾಡದೇ ಸ್ವಚ್ಛತೆ ಕಾಯ್ದುಕೊಳ್ಳುವಂತೆ ತಿಳಿಸಿದರು.

ಮರಬೆಳೆಸಿ, ಕಾಡು ಉಳಿಸಿ, ಮರುಬಳಕೆ ವಸ್ತುಗಳ ಬಳಕೆ ಭೂಮಿಗೆ ಮರುಜೀವ, ಇದು ನನ್ನ ನಗರ, ಇದರ ಸ್ವಚ್ಛತೆ ಕಾಪಾಡುವುದು ನನ್ನ ಕರ್ತವ್ಯ, ಸ್ವಚ್ಛತೆಯ ಹಾದಿ ದೇಶದ ಬುನಾದಿ, ವಾಯುಮಾಲಿನ್ಯ ತಡೆಗಟ್ಟಿ ಎಂಬಿತ್ಯಾದಿ ಫ‌ಲಕಗಳನ್ನು ಪ್ರದರ್ಶಿಸಿ ಸಾರ್ವ ಜನಿಕರಲ್ಲಿ ಪರಿಸರ ಕುರಿತು ಜಾಗೃತಿ ಮೂಡಿಸಿದರು. ಐಟಿಸಿ ಗ್ರೂಪ್‌ನ ಸಿಬ್ಬಂದಿ ಸೇರಿದಂತೆ ಹಲವರು ಹಾಜರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ