ಜಮೀನು ಕೊಡಲು ರೈತರ ವಿರೋಧ: ಸಭೆ ವಿಫ‌ಲ

Team Udayavani, Jun 23, 2019, 3:00 AM IST

ಮೈಸೂರು: ನಂಜನಗೂಡು ತಾಲೂಕಿನ ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿ ಐಲ್ಯಾಂಡ್‌ ಕಂಟೇನರ್‌ ಡಿಪೋ ಸ್ಥಾಪನೆಗೆ ಜಮೀನು ನೀಡಿಲು ನಿರಾಕರಿಸಿದ್ದ ರೈತರೊಂದಿಗೆ ಸಂಸದ ಪ್ರತಾಪಸಿಂಹ ನೇತೃತ್ವದಲ್ಲಿ ಜಿಲ್ಲಾಡಳಿತ ನಡೆಸಿದ ಸಭೆ ವಿಫ‌ಲವಾಯಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಕೇಂದ್ರ ಸರ್ಕಾರದ ಕಂಟೇನರ್‌ ಕಾರ್ಪೋರೇಷನ್‌ ಆಫ್ ಇಂಡಿಯಾ ವತಿಯಿಂದ ಕಂಟೇನರ್‌ ಡಿಪೋ ಸ್ಥಾಪನೆ ಸಂಬಂಧ ಜಮೀನು ಕಳೆದುಕೊಳ್ಳಲಿರುವ ರೈತರೊಂದಿಗೆ ಜಿಲ್ಲಾಡಳಿತ ಏರ್ಪಡಿಸಿದ್ದ ಸಭೆಯಲ್ಲಿ ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ.

ಉದ್ಯೋಗ ಬೇಡಿಕೆ: ಸಭೆಯಲ್ಲಿ ಭಾಗವಹಿಸಿದ್ದ ರೈತರು, ಸ್ವಾಧೀನಪಡಿಸಿಕೊಳ್ಳಲಿರುವ ಜಮೀನಿಗೆ ನಿಗದಿಪಡಿಸಿರುವ ಬೆಲೆಯಲ್ಲಿನ ತಾರತಮ್ಯ ಸರಿಪಡಿಸಿ, ಇಲ್ಲಿ ಸ್ಥಾಪನೆಯಾಗಲಿರುವ ಕಂಟೇನರ್‌ ಡಿಪೋದಲ್ಲಿ ಭೂಮಿ ನೀಡಿದ ರೈತ ಕುಟುಂಬದವರೊಬ್ಬರಿಗೆ ಉದ್ಯೋಗ ನೀಡಬೇಕು ಎಂದು ಬೇಡಿಕೆ ಮುಂದಿಟ್ಟರು.

ಸಭೆ ಬಹಿಷ್ಕಾರ: ಆದರೆ, ಭೂಮಿ ನೀಡುವ ಎಲ್ಲಾ ರೈತ ಕುಟುಂಬದವರಿಗೂ ಇಲ್ಲಿ ಉದ್ಯೋಗ ನೀಡಲು ಸಾಧ್ಯವಾಗುವುದಿಲ್ಲ ಎಂದು ಸಂಸದ ಪ್ರತಾಪಸಿಂಹ, ಕಾನೂನು ವಿಚಾರಗಳನ್ನು ಮನವರಿಕೆ ಮಾಡಿಕೊಡಲು ಮುಂದಾದಾಗ ಕಾನೂನು ಹೋರಾಟದ ಮೂಲಕವೇ ಸೂಕ್ತ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿ ಕೆಲ ರೈತರು ಸಭೆ ಬಹಿಷ್ಕರಿಸಿ ಹೊರ ನಡೆದರೆ, ಇನ್ನೂ ಕೆಲ ರೈತರು ಮತ್ತೂಮ್ಮೆ ಸಭೆ ಕರೆದು ಮಾತುಕತೆ ಮೂಲಕ ಇತ್ಯರ್ಥ ಪಡಿಸುವಂತೆ ಮನವಿ ಮಾಡಿದರು.

ಕಳೆದ ಸಭೆಯಲ್ಲಿ ರೈತರು ಮಂಡಿಸಿದ್ದ ಬೇಡಿಕೆಗಳ ಬಗ್ಗೆ ಪ್ರಸ್ತಾಪ ಮಾಡಿದ ಸಂಸಪ ಪ್ರತಾಪ ಸಿಂಹ, ಕೇಂದ್ರ ಸರ್ಕಾರದ ಕಂಟೇನರ್‌ ಕಾರ್ಪೋರೇಷನ್‌ ಆಫ್ ಇಂಡಿಯಾಗೆ ಕಂಟೇನರ್‌ ಡಿಪೋ ಸ್ಥಾಪನೆಗಾಗಿ ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿ 54 ಮಂದಿ ರೈತರಿಂದ ಸ್ವಾಧೀನಪಡಿಸಿಕೊಂಡಿರುವ 55 ಎಕರೆ ಪ್ರದೇಶದಲ್ಲಿ 102 ಕೋಟಿ ರೂ. ವೆಚ್ಚದಲ್ಲಿ ಕಂಟೇನರ್‌ ಡಿಪೋ ನಿರ್ಮಿಸಲಾಗುತ್ತದೆ ಎಂದರು.

ರೈತರ ಬೇಡಿಕೆಯಂತೆ ಇಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಸಾಧ್ಯವಾಗುವುದಿಲ್ಲ. ಸ್ವಾಧೀನ ಪಡಿಸಿಕೊಂಡ ಭೂಮಿಯ ರೈತರಿಗೆ ಸಮಾನವಾಗಿ ಪರಿಹಾರ ನೀಡಲು ಈ ಹಂತದಲ್ಲಿ ಸಾಧ್ಯವಿಲ್ಲ. ಆದರೆ, ಜಿಲ್ಲಾಧಿಕಾರಿಗಳು, ನಂಜನಗೂಡು ಸುತ್ತಮುತ್ತಲಿನ ಬೇರೆ ಬೇರೆ ಕೈಗಾರಿಕೆಗಳಲ್ಲಿ 54 ರೈತ ಕುಟುಂಬದವರಿಗೂ ಉದ್ಯೋಗ ಕಲ್ಪಿಸಲು ವ್ಯವಸ್ಥೆ ಮಾಡಿದ್ದಾರೆ.

ನಾನು ಕೂಡ ಕೇಂದ್ರ ಸಚಿವರೊಂದಿಗೆ ಮಾತನಾಡಿ, ಡಿಪೋ ಆವರಣದಲ್ಲಿನ ವಾಣಿಜ್ಯ ಸಂಕೀರ್ಣಗಳಲ್ಲಿ ವ್ಯಾಪಾರ ವಹಿವಾಟಿಗೆ ಭೂಮಿ ಕಳೆದುಕೊಂಡ ರೈತರ ಕುಟುಂಬದರಿಗೆ ಆದ್ಯತೆ ನೀಡುವಂತೆ ಮನವಿ ಮಾಡಿದ್ದು, ಅವರು ಒಪ್ಪಿದ್ದಾರೆ. ಮೈಸೂರು ಸೇರಿದಂತೆ ಈ ಭಾಗದ ಅಭಿವೃದ್ಧಿಯ ದೃಷ್ಟಿಯಿಂದ ರೈತರು ಡಿಪೋ ಸ್ಥಾಪನೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಪ್ರಾಣ ಬಿಟ್ಟರೂ ಭೂಮಿ ಬಿಡಲ್ಲ: ಈ ಸಂದರ್ಭದಲ್ಲಿ ಮಾತನಾಡಿದ ರೈತ ಎಂ.ಮಹಾದೇವು, ನಮ್ಮ ಬೇಡಿಕೆಗೆ ಸ್ಪಂದಿಸಿದರೆ ಸರಿ. ಇಲ್ಲದಿದ್ದರೆ ಪ್ರಾಣ ಬಿಟ್ಟರೂ ಭೂಮಿ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಭೂ ಸ್ವಾಧೀನ ಕಾಯಿದೆಯಲ್ಲೇ ನಿಗದಿತ ಕಾಲಾವಧಿಯಲ್ಲಿ ಜಮೀನು ಬಳಕೆ ಮಾಡದೇ ಇದ್ದರೆ ವಶಕ್ಕೆ ಪಡೆಯುವ ಅವಕಾಶ ಇದೆ. ಆದ್ದರಿಂದ ನಮ್ಮ ಜಮೀನು ನಮಗೆ ಕೊಡಿ, ನಾವು ನಮಗೆ ಇಷ್ಟ ಬಂದವರಿಗೆ ಮಾರಾಟ ಮಾಡುತ್ತೇವೆ ಎಂದರು.

ಜಮೀನು ಕಳೆದುಕೊಂಡ ರೈತರ ಕುಟಂಬದವರಿಗೆ ಉದ್ಯೋಗ ನೀಡಲು ಕಾನೂನು ಅಡ್ಡಿಯಾಗಲಿದೆ ಎಂದರೆ, ಅಂತಹ ಕಾನೂನಿಗೆ ತಿದ್ದುಪಡಿ ತಂದು ರೈತರ ಹಿತ ಕಾಪಾಡಬೇಕು ಎಂದು ರೈತ ರಾಜು ಗೌಡ ಆಗ್ರಹಿಸಿದರು.

ಶಾಸಕ ಡಾ.ಯತೀಂದ್ರ, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಕಂಟೇನರ್‌ ಕಾರ್ಪೋರೇಷನ್‌ ಆಫ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ಅನೂಪ್‌ ದಯಾನಂದ್‌ ಸಾಧು, ಕೆಐಎಡಿಬಿಯ ಜಂಟಿ ನಿರ್ದೇಶಕ ಸುರೇಶ್‌ ಸಭೆಯಲ್ಲಿ ಹಾಜರಿದ್ದರು.

ಕಂಟೇನರ್‌ ಕಾರ್ಪೋರೇಷನ್‌ ಆಫ್ ಇಂಡಿಯಾದ ಐಲ್ಯಾಂಡ್‌ ಕಂಟೇನರ್‌ ಡಿಪೋ ಸ್ಥಾಪನೆಗೆ ಜಮೀನು ನೀಡಲು ಬಹುತೇಕ ಮಂದಿ ಒಪ್ಪಿಗೆ ನೀಡಿದ್ದು, ಉಳಿದವರನ್ನೂ ಸಹ ಒಪ್ಪಿಸಿ, ಡಿಪೋ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಇದರಿಂದ ಈ ಭಾಗದ ಅಭಿವೃದ್ಧಿಯಾಗಲಿದೆ.
-ಪ್ರತಾಪಸಿಂಹ, ಸಂಸದ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ