ಬೆಂಕಿ ಅನಾಹುತ ತಡೆ ಫೈರ್‌ಲೈನ್‌

Team Udayavani, Jan 18, 2020, 3:00 AM IST

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಂಕಿಯಿಂದಾಗುವ ಅನಾಹುತಗಳನ್ನು ತಡೆಗಟ್ಟಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಶೂನ್ಯ ಬೆಂಕಿ ಅರಣ್ಯವಾಗಿಸಲು ಈಗಾಗಲೇ ಎಲ್ಲ ವಲಯಗಳಲ್ಲೂ ಫೈರ್‌ಲೈನ್‌ ನಿರ್ಮಾಣ ಕಾರ್ಯ ಮುಕ್ತಾಯ ಹಂತಕ್ಕೆ ಬಂದಿದ್ದು, ಅರಣ್ಯ ಇಲಾಖೆ ಮುಂಜಾಗ್ರತೆಗಾಗಿ ಕ್ಯಾಮರಾ, ವಿಡಿಯೋ ಜೊತೆಗೆ ಈ ಬಾರಿ ಅತ್ಯಾಧುನಿಕ ಡ್ರೋಣ್‌ ಕ್ಯಾಮರಾ ಸಹ ಬಳಸಿಕೊಳ್ಳಲಾಗುತ್ತಿದೆ.

ಕೆರೆ-ಕಟ್ಟೆಗಳಲ್ಲಿ ಸಮೃದ್ಧ ನೀರು: ಕಳೆದ ಮಳೆಗಾಲದಲ್ಲಿ ಉತ್ತಮ ಮಳೆಯಿಂದ ಕಾಡು ಹಸಿರಿನಿಂದ ಕೂಡಿದೆ. ಉದ್ಯಾನದೊಳಗಿನ ಕೆರೆ-ಕಟ್ಟೆಗಳಲ್ಲಿ ಸಮೃದ್ಧಿ ನೀರಿದ್ದು, ಇನ್ನೂ ಹಸಿರು ನಳನಳಿಸುತ್ತಿದೆ. ಇದು ಬೆಂಕಿ ನಿಯಂತ್ರಣಕ್ಕೆ ಪೂರಕವಾಗಿದೆ. ಅಲ್ಲದೇ ಅರಣ್ಯದೊಳಗಿನ 20 ಸೋಲಾರ್‌ಪಂಪ್‌ನಿಂದಾಗಿ ಕೆರೆ-ಕಟ್ಟೆಗಳಿಗೆ ನೀರು ತುಂಬುತ್ತಿರುವುದು ಹಾಗೂ ಈ ವರ್ಷ ಕೋರ್‌ ಏರಿಯಾದಲ್ಲಿ 11 ಹಾಗೂ ಬಫರ್‌ ಝೋನ್‌ನಲ್ಲಿ 9 ಕೆರೆಗಳನ್ನು ಅಭಿವೃದ್ಧಿಪಡಿಸಿರುವ ಪರಿಣಾಮ ಸಾಕಷ್ಟು ನೀರು ಸಂಗ್ರಹವಾಗಿರುವುದು ಹಾಗೂ ಉದ್ಯಾನದೊಳಗೆ ಹರಿಯುವ ನಾಗರಹೊಳೆ, ಸಾರಥಿ, ತಾಕರ, ಕಪಿಲಾ, ಲಕ್ಷಣತೀರ್ಥ ನದಿಗಳಲ್ಲಿ ನೀರಿನ ಹರಿವಿರುವುದರ ಪರಿಣಾಮ ಅರಣ್ಯ ಬೆಂಕಿ ರಕ್ಷಣೆಗೆ ಹಾಗೂ ವನ್ಯಜೀವಿಗಳ ನೀರಿನ ದಾಹ ಇಂಗಿಸಲು ವರದಾನವಾಗಿದೆ.

ವಾಚ್‌ ಟವರ್‌-ಅಟ್ಟಣೆ, ಕ್ಯಾಮರ ಕಣ್ಗಾವಲು: ಉದ್ಯಾನದ ಹಲವೆಡೆ ಇರುವ ದೊಡ್ಡದಾದ 25 ವಾಚ್‌ ಟವರ್‌ ಮೂಲಕ ಹಾಗೂ ಉದ್ಯಾನದಂಚಿನ ಪ್ರದೇಶದ ಅಲ್ಲಲ್ಲಿ ಮರದ ಮೇಲೆ ಅಟ್ಟಣೆ ನಿರ್ಮಿಸಲಾಗಿದ್ದು, ಸಿಬ್ಬಂದಿ ದಿನವಿಡೀ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. ಅರಣ್ಯದಂಚಿನ ಪ್ರದೇಶಗಳಲ್ಲಿ ಅಕ್ರಮವಾಗಿ ಒಳನುಸುಳುವವರ ಪತ್ತೆಗಾಗಿ ಅಲ್ಲಲ್ಲಿ ಕ್ಯಾಮರ ಅಳವಡಿಸಲಾಗಿದೆ.

ಕ್ವಿಕ್‌ ರೆಪ್‌ ವಾಹನ: ಪ್ರತಿ ವಲಯಕ್ಕೆ ಒಂದರಂತೆ ಕ್ವಿಕ್‌ ರೆಪ್‌ ವಾಹನ ನಿಯೋಜಿಸಿದ್ದು, ಇದರಲ್ಲಿ ಚಿಕ್ಕ ನೀರಿನ ಟ್ಯಾಂಕ್‌, ನೀರು ಸ್ಪ್ರೆ ಮಾಡುವ ಯಂತ್ರದೊಂದಿಗೆ ಬೆಂಕಿ ಬಿದ್ದವೇಳೆ ತಕ್ಷಣವೇ ಆರಿಸಲು ನೆರವಾಗಲು ವಾಹನಗಳಲ್ಲಿ ಟ್ಯಾಂಕ್‌ ಮೂಲಕ ನೀರು ಕೊಂಡೊಯ್ಯುವ ವಾಹನಗಳಲ್ಲಿ ಸಣ್ಣ ಸಬ್‌ಮರ್ಸಿಬಲ್‌ ಪಂಪ್‌ ಅಳವಡಿಸಲಾಗಿದೆ. ಪ್ರತಿವಲಯಕ್ಕೆ ಒಂದು ಹೆಚ್ಚುವರಿ ಬಾಡಿಗೆ ವಾಹನ, ಅಲ್ಲದೆ ನಾಗರಹೊಳೆ, ವೀರನಹೊಸಳ್ಳಿ, ಅಂತರಸಂತೆಗಳಲ್ಲಿ ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ. ಸಿಬ್ಬಂದಿ ವಲಯದ ವ್ಯಾಪ್ತಿಯಲ್ಲಿ ಸುತ್ತುವ ಮೂಲಕ ಕಣ್ಗಾವಲು ಇಡುವರು.

843.47 ಚ.ಕಿ.ಮೀ.ಗೆ ಅರಣ್ಯ ಹೆಚ್ಚಳ: 643 ಚ.ಕಿ.ಮೀ. ವಿಸ್ತೀರ್ಣವಿದ್ದ ನಾಗರಹೊಳೆ ಉದ್ಯಾನಕ್ಕೆ ಈ ವರ್ಷ ಹುಣಸೂರು, ಪಿರಿಯಾಪಟ್ಟಣ, ವೀರರಾಜಪೇಟೆ ತಾಲೂಕುಗಳ ಉದ್ಯಾನದಂಚಿನ ಭ‌ಫರ್‌ ಝೋನ್‌ನ 200.47 ಚ.ಕಿ.ಮೀ ಪ್ರದೇಶ ಸೇರಿಕೊಂಡಿದ್ದು, ಪ್ರಸ್ತುತ 843.47 ಚ.ಕಿ.ಮೀ.ಗೆ ಉದ್ಯಾನದ ಅರಣ್ಯ ಪ್ರದೇಶ ಹೆಚ್ಚಳವಾಗಿದ್ದು, ಅರಣ್ಯದ ಬೆಂಕಿ ರಕ್ಷಣೆಗೆ ಮತ್ತಷ್ಟು ಹೆಚ್ಚಿನ ನಿಗಾವಹಿಸಬೇಕಿದೆ.

2677 ಕಿ.ಮೀ. ಫೈರ್‌ಲೈನ್‌: ಉದ್ಯಾನದ ನಾಗರಹೊಳೆ, ಕಲ್ಲಳ್ಳ, ವೀರನಹೊಸಹಳ್ಳಿ, ಹುಣಸೂರು, ಮತ್ತಿಗೋಡು, ಅಂತರಸಂತೆ, ಮೇಟಿಕುಪ್ಪೆ, ಡಿ.ಬಿ.ಕುಪ್ಪೆ. ವಲಯಗಳು ಸೇರಿದಂತೆ ಉದ್ಯಾನದ 8 ವಲಯಗಳಲ್ಲಿನ 1800 ಕಿ.ಮೀ ಫೈರ್‌ಲೈನ್‌ ಈಗ ಬಫ‌ರ್‌ ಝೋನ್‌ ಸೇರ್ಪಡೆಯಿಂದ 2677 ಕಿ.ಮೀ.ಗೆ ಹೆಚ್ಚಳವಾಗಿದ್ದು, ಬೆಂಕಿರೇಖೆ ನಿರ್ಮಿಸುವ ಸಲುವಾಗಿ ಗಿಡಗಂಟಿಗಳನ್ನು ತೆಗೆಯಲಾಗಿದೆ. ಇನ್ನೂ ಹಸಿರಿರುವುದರಿಂದ ಆನೆಚೌಕೂರು, ಮೇಟಿಕುಪ್ಪೆವಲಯದಲ್ಲಿ ಸ್ವಲ್ಪ ತಡವಾಗುತ್ತಿದೆ.

ಬೆಂಕಿ ತಡೆಗೆ ಗುತ್ತಿಗೆ ಸಿಬ್ಬಂದಿ: ಪ್ರತಿ ವಲಯದಲ್ಲೂ ಅಗತ್ಯಕ್ಕೆ ತಕ್ಕಂತೆ ಬೆಂಕಿ ನಂದಿಸುವ ಕಾರ್ಯದಲ್ಲಿ ನುರಿತ ಸುಮಾರು 400 ಮಂದಿ ಕಾಡಂಚಿನ ಆದಿವಾಸಿಗಳನ್ನು ಪ್ರತಿ ವಲಯಕ್ಕೆ 40-65 ಮಂದಿಯಂತೆ ಜನವರಿ ಒಂದರಿಂದಲೇ ಮಾರ್ಚ್‌ ಅಂತ್ಯದವರೆಗೆ ನೇಮಿಸಿಕೊಳ್ಳ ಲಾಗಿದ್ದು, ಇವರಿಗೆ ನಿತ್ಯ ಮಧ್ಯಾಹ್ನ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಅಗತ್ಯ ಪರಿಕರಗಳ ಸೌಲಭ್ಯ ಕಲ್ಪಿಸಲಾಗಿದೆ.

ಬೀದಿ ನಾಟಕ-ಜಾಥಾ ಅರಿವು: ನಾಗರಹೊಳೆ ಉದ್ಯಾದಂಚಿನ ಗ್ರಾಮಗಳಲ್ಲಿ ನುರಿತ ಕಲಾತಂಡಗಳಿಂದ ಅರಣ್ಯದ ಮಹತ್ವ, ಬೆಂಕಿ ಹಾಕಿದ್ದಲ್ಲಿ ಪರಿಸರದ ಮೇಲಾಗುವ ಪರಿಣಾಮ ಹಾಗೂ ಅರಣ್ಯ ನಮ್ಮದೆನ್ನುವ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ಬೀದಿ ನಾಟಕದ ಮೂಲಕ, ಜೊತೆಗೆ ಆಸಕ್ತ ಯುವಕರ ಬೆಂಕಿ ತಡೆಗಟ್ಟುವ ಪಡೆಯನ್ನು ಸಹ ರಚಿಸಲಾಗಿದೆ ಅಲ್ಲದೆ ಅರಣ್ಯದಂಚಿನಲ್ಲಿ ರಚಿಸಿರುವ ಪರಿಸರ ಅಭಿವೃದ್ಧಿ ಹಾಗೂ ಗ್ರಾಮ ಅರಣ್ಯ ಸಮಿತಿ ಸದಸ್ಯರನ್ನೂ ಬಳಸಿಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ.

2016-106,2018-16 ಎಕರೆ ಅರಣ್ಯ ನಾಶ: ನಾಹರಹೊಳೆ ಉದ್ಯಾನದಲ್ಲಿ 2016-17ರಲ್ಲಿ 106 ಹೆಕ್ಟರ್‌ ಬೆಂಕಿಗಾಹುತಿಯಾಗಿದ್ದರೆ, ಹೆಚ್ಚಿನ ಮಂಜಾಗ್ರತೆ ವಹಿಸಿದ್ಧತೆರಿಂದಾಗಿ 18-19 ರಲ್ಲಿ 16 ಹೆಕ್ಟೇರ್‌. ಹೆಕ್ಟೇರ್‌ ಪ್ರದೇಶ ಮಾತ್ರ ಬೆಂಕಿಗಾಹುತಿಯಾಗಿತ್ತು.

ಸಾರ್ವಜನಿಕರ ಸಹಕಾರವು ಅತ್ಯಗತ್ಯ: ಈ ಬಗ್ಗೆ ಉದಯವಾಣಿ ಜತೆ ನಾಗರಹೊಳೆ ಹುಲಿಯೋಜನೆ ಕ್ಷೇತ್ರ ನಿದೇರ್ಶಕ ನಾರಾಯಣಸ್ವಾಮಿ ಮಾತನಾಡಿ, ಬೆಂಕಿಯಿಂದ ಅರಣ್ಯ ರಕ್ಷಿಸುವುದು, ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ, ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸಾರ್ವಜನಿಕರ ಸಹಕಾರವು ಅಗತ್ಯವಾಗಿದೆ. ಮುನ್ನೆಚ್ಚರಿಕೆಯಾಗಿ ಹಲವಾರು ಸುರಕ್ಷಿತ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅತ್ಯಾಧುನಿಕ ಪರಿಕರ ಕೊಳ್ಳಲು ಆಯಾ ರೇಂಜರ್‌ಗಳಿಗೆ ಅಧಿಕಾರ ನೀಡಲಾಗಿದೆ. ಅರಣ್ಯಕ್ಕೂ ತಾನಾಗಿಯೇ ಬೆಂಕಿ ಬೀಳುವುದಿಲ್ಲ.

ಅರಣ್ಯ ನಾಶವಾದಲ್ಲಿ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಬೆಂಕಿ ಹಚ್ಚಿ ಅರಣ್ಯ ನಾಶ ಮಾಡುವ ಕಿಡಿಗೇಡಿಗಳ ಹಾಗೂ ಸಂಶಯ ವ್ಯಕ್ತಿಗಳ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಬೇಕು, ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ. ಅರಣ್ಯದ ಮಹತ್ವದ ಬಗ್ಗೆ ಅರಿವು ಮೂಡಿಸಲೂ ಉದ್ಯಾನದಂಚಿನ ಗ್ರಾಮಸ್ಥರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ನಾಗರಹೊಳೆ ಉದ್ಯಾನ ದರ್ಶನ ಮಾಡಿಸಲಾಗುವುದು. ಅರಣ್ಯದಂಚಿನ ಗ್ರಾಮಗಳ ರೈತರು, ಯುವಕರು, ವಿದ್ಯಾರ್ಥಿಗಳು ಬೆಂಕಿ ತಡೆಗಟ್ಟುವಲ್ಲಿ ಇಲಾಖೆಗೆ ಸಹಕಾರ ಅತ್ಯಗತ್ಯ ಎಂದರು.

ಮುನ್ನೆಚ್ಚೆರಿಕೆಯಾಗಿ ಅಗತ್ಯ ಬಿದ್ದಲ್ಲಿ ಹೆಲಿಕಾಫ್ಟರ್‌ ಬಳಕೆಗೂ ಆಲೋಚಿಸಲಾಗಿದೆ. ಈಗಾಗಲೇ ರಾಜ್ಯ ಸರಕಾÃವು ಕೇಂದ್ರಕ್ಕೆ ಪತ್ರ ಬರೆದಿದೆ. ಇದೇ ಪ್ರಥಮ ಬಾರಿಗೆ ಎಲ್ಲ ವಲಯಗಳಲ್ಲೂ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ 4 ಕಿ.ಮೀ ಎತ್ತರ ಮತ್ತು ದೂರದಿಂದಲೇ ಫೋಟೋ, ವಿಡಿಯೋ ಚಿತ್ರೀಕರಿಸುವ ಡ್ರೋಣ್‌ ಬಳಸಿಕೊಳ್ಳಲಾಗುತ್ತಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಟ್ರಾಪಿಂಗ್‌ ಕ್ಯಾಮರಾ ಮತ್ತು ವಿಡಿಯೋ ಕ್ಯಾಮರಾ ಸಹ ಅಳವಡಿಸಲಾಗುವುದು.
-ಪ್ರಸನ್ನಕುಮಾರ್‌,ಎ.ಸಿ.ಎಫ್‌

ಕಾಡಂಚಿನಜನತೆ ಸಹಕಾರ ನೀಡುತ್ತಾರೆ, ಆದರೆ ವನ್ಯಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಇಲಾಖೆ ಮುಂದಾಗಿದ್ದರಿಂದ ಕೆಲವೆಡೆ ನಮಗ್ಯಾಕೆ ಈ ಉಸಾಬಾರಿ ಎಂಬ ಬೇಸರವೂ ಇದೆ, ಆದರೂ ನಮ್ಮ ಜವಾಬ್ದಾರಿಯನ್ನು ಪ್ರತಿವರ್ಷ ನಿರ್ವಹಿಸಿಕೊಂಡು ಬರುತ್ತಿದ್ದೇವೆ, ವನ್ಯಪ್ರಾಣಿಗಳ ಹಾವಳಿ ಬಗ್ಗೆ ಚಿತ್ತಹರಿಸಿದಲ್ಲಿ ಮತ್ತಷ್ಟು ಸಹಕಾರ ನೀಡಲು ಕಾಡಂಚಿನ ಜನರು ಸದಾ ಸಿದ್ಧ.
-ಮಹದೇವ, ನೇರಳಕುಪ್ಪೆ

* ಸಂಪತ್‌ ಹುಣಸೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ