ಭಿಕ್ಷುಕಿ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ: ಐವರ ಬಂಧನ
Team Udayavani, Feb 18, 2021, 3:34 PM IST
ಮೈಸೂರು: ಭಿಕ್ಷುಕಿಯೊಬ್ಬರಿಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ಸೋಮವಾರ ತಡರಾತ್ರಿ ನಡೆದಿದ್ದು, ಘಟನೆ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ರಫಿಕ್ ಅಹಮ್ಮದ್, ಆರ್. ಮಂಜುನಾಥ್, ಮನು, ರೇವಣ್ಣ ಹಾಗೂ ಕೃಷ್ಣ ಬಂಧಿತರು. ಇವರು, ನಗರದ ಹೃದಯ ಭಾಗವಾದ ಕೆ.ಟಿ.ಸ್ಟ್ರೀಟ್ ಸುತ್ತುಮುತ್ತ ಓಡಾಡಿಕೊಂಡು, ಭಿಕ್ಷೆ ಬೇಡಿಕೊಂಡು ಕೆ.ಟಿ.ಸ್ಟ್ರೀಟ್ ಬಳಿಯ ರಸ್ತೆ ಬದಿಯಲ್ಲಿ ಮಲಗುತ್ತಿದ್ದ ಭಿಕ್ಷುಕಿಗೆ ಸೋಮವಾರ ತಡರಾತ್ರಿ ಮದ್ಯ ಕುಡಿಸಿ ಮತ್ತು ತಾವು ಮದ್ಯ ಸೇವಿಸಿ ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದರು.
ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಲಷ್ಕರ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಹತ್ತಿರದ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಫುಟೇಜ್‌ಗಳನ್ನು ಪರಿಶೀಲನೆ ನಡೆಸಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬಿಸಿ, ಐದು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಕೂಲಿ ಕೆಲಸ, ಚಿಂದಿ ಆಯುವ ಕೆಲಸ ಮಾಡಿಕೊಂಡಿದ್ದು, ರಫಿಕ್ ಎಂಬಾತ ಮನೆಯಲ್ಲಿ ವಾಸವಿದ್ದರೆ, ಉಳಿದ ನಾಲ್ವರು ರಸ್ತೆ ಬದಿಯ ಅಂಗಡಿ ಮುಂಗಟ್ಟಿನಲ್ಲಿ ಮಲಗುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.