ಯೋಗದಿಂದ ದೇಹ ಕ್ರೀಯಾಶೀಲತೆ, ಮನಸ್ಸು ಉಲ್ಲಾಸ

Team Udayavani, Jun 22, 2019, 3:00 AM IST

ತಿ.ನರಸೀಪುರ: ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಯೋಗ ಅಭ್ಯಾಸ ಮಾಡಿದರೆ ಸದೃಢ ಆರೋಗ್ಯ ಹೊಂದಬಹುದು ಎಂದು ಶಾಸಕ ಎಂ.ಅಶ್ವಿ‌ನ್‌ ಕುಮಾರ್‌ ತಿಳಿಸಿದರು. ಪಟ್ಟಣದ ವಿದ್ಯೋದಯ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ಸಹಯೋಗದೊಡನೆ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ 5ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶೈಕ್ಷಣಿಕ ಸಾಧನೆ: ಈ ದಿನ ತಾಲೂಕಿನಲ್ಲಿ ಐತಿಹಾಸಿಕವಾಗಿದ್ದು, ಪ್ರತಿದಿನ ಯೋಗಾಸನ ಮಾಡುವುದರಿಂದ ದೇಹ ಕ್ರಿಯಾಶೀಲವಾಗುತ್ತದೆ. ಮನಸ್ಸು ಉಲ್ಲಾಸದಿಂದ ಕಾರ್ಯ ಮಾಡಲು ಸಾಧ್ಯವಾಗುತ್ತಿದೆ. ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಶೈಕ್ಷಣಿಕ ಸಾಧನೆ ಮಾಡಲು ಅನುಕೂಲವಾಗಲಿದೆ. ಇದನ್ನು ಇಂದಿಗೆ ಮಾತ್ರ ಸೀಮಿತಗೊಳಿಸದೇ ಮುಂದುವರಿಸುವಂತೆ ಅವರು ಕಿವಿಮಾತು ಹೇಳಿದರು.

ತಾಲೂಕಿನ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಪೋಷಕರು ಈ ದಿನಾಚರಣೆಗೆ ವಿದ್ಯಾರ್ಥಿಗಳನ್ನು ಬೆಳಗ್ಗೆಯೇ ತಯಾರಿ ಮಾಡಿಕೊಂಡು ಕರೆತಂದಿರುವುದು ನಿಜಕ್ಕೂ ಅಭಿನಂದನೀಯ ಎಂದರು.

ಕಾರ್ಯಕ್ರಮದ ರೂವಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌. ಸ್ವಾಮಿ ಮಾತನಾಡಿ, ತಾಲೂಕು ಆಡಳಿತ, ಶಿಕ್ಷಣ ಇಲಾಖೆಯ ಎಲ್ಲಾ ಶಿಕ್ಷಕರ ಸಂಘಟನೆಗಳ ಸಹಕಾರದಲ್ಲಿ 5 ಸಾವಿರ ವಿದ್ಯಾರ್ಥಿಗಳನ್ನು ಸೇರಿಸಿ ಯೋಗದ ಮಹತ್ವ ಮತ್ತು ಅನುಷ್ಠಾನದ ಬಗ್ಗೆ ತಿಳಿಸುವ ಮೂಲಕ ವಿಶೇಷ ದಿನವನ್ನಾಗಿ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ತಾಲೂಕಿನ ವಿವಿಧ ಶಾಲೆಗಳಿಂದ ಸುಮಾರು 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು. ಅಭ್ಯಾಸದ ನಂತರ ಮಕ್ಕಳಿಗೆ ಲಘು ಉಪಾಹಾರ ವಿತರಿಸಲಾಯಿತು. ಕೊಳತೂರು ಮತ್ತು ವಿದ್ಯೋದಯ ಶಾಲೆಯ ವಿದ್ಯಾರ್ಥಿಗಳು ಯೋಗಾಸನದ ಪ್ರಾತ್ಯಕ್ಷಕೆ ನೀಡಿದರು

ಈ ಸಂದರ್ಭದಲ್ಲಿ ತಹಶೀಲ್ದಾರ್‌ ನಾಗಪ್ರಶಾಂತ್‌, ಶಿರಸ್ತೇದಾರ್‌ ಪ್ರಭುರಾಜ್‌, ತಾಪಂ ಅಧ್ಯಕ್ಷ ಚಲುವರಾಜು, ಸದಸ್ಯ ಎಂ.ರಮೇಶ್‌, ಇಒ ನಿಂಗಯ್ಯ, ಪುರಸಭಾ ಸದಸ್ಯರಾದ ಕೆ. ಕಿರಣ್‌, ಬಾದಾಮಿ ಮಂಜು, ಸಿದ್ದು, ಬೈರಾಪುರ ಮಂಜುನಾಥ್‌, ದೈಹಿಕ ಶಿಕ್ಷಣ ಪರೀಕ್ಷಕ ಮಹಾಂತಪ್ಪ ನಾಗೂರು, ಬಿಆರ್‌ಸಿ ಮಂಜುಳಾ, ಬಿಆರ್‌ಪಿ ಎಚ್‌.ಎಂ. ಶಂಕರ್‌,

ನೌಕರರ ಸಂಘದ ನಿರ್ದೇಶಕರಾದ ಪುಟ್ಟರಾಜು, ಎಚ್‌.ಡಿ.ಮಾದಪ್ಪ, ಸುಬ್ರಹ್ಮಣ್ಯ, ಶಿವಶಂಕರಮೂರ್ತಿ, ಗಜೇಂದ್ರ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಪುಟ್ಟಸ್ವಾಮಿ, ಮಹೇಶ್‌, ದೈಹಿಕ ಶಿಕ್ಷಕರ ಸಂಘದ ರಾಜೇಂದ್ರ ಪ್ರಸಾದ್‌, ಮಲ್ಲೇಶ್‌ ಸೇರಿದಂತೆ ವಿವಿಧ ಸಂಘಟನೆಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ