ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್‌ ನೀಡಿ

Team Udayavani, Jul 17, 2018, 3:39 PM IST

ಚಾಮರಾಜನಗರ: ಉಚಿತ ಬಸ್‌ಪಾಸ್‌ ವ್ಯವಸ್ಥೆ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೂ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಬಹುಜನ ವಿದ್ಯಾರ್ಥಿ ಸಂಘದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರವಾಸಿಮಂದಿರ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾ ನಿರತರು, ಅಲ್ಲಿಂದ ಮೆರವಣಿಗೆ ಹೊರಟು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ರಸ್ತೆ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನದ ಆವರಣಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘದ ಜಿಲ್ಲಾ ಸಂಯೋಜಕ ಪರ್ವತ್‌ರಾಜ್‌ ಮಾತ ನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕಳೆದ ಸರ್ಕಾರದ ಯೋಜನೆಯಾದ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ಯೋಜನೆಯನ್ನು 2018- 19ನೇ ಸಾಲಿಗೂ ವಿಸ್ತರಿಸಿರುವುದು ಸ್ವಾಗತಾರ್ಹ. ಉಚಿತ ಬಸ್‌ಪಾಸ್‌ ಯೋಜನೆಯಲ್ಲಿ ಹಿಂದುಳಿದ ವರ್ಗಗಳ ಸಮುದಾಯ, ಧಾರ್ಮಿಕ ಅಲ್ಪ ಸಂಖ್ಯಾತ ಸಮುದಾಯ ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ಕಡೆಗಣಿಸಿರುವುದು ಖಂಡನೀಯ ಎಂದರು. 

ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಬಸ್‌ ಪಾಸ್‌ ಯೋಜನೆಯಿಂದ ಇತರೆ ಸಮುದಾಯ ವಿದ್ಯಾರ್ಥಿಗಳು ದಲಿತ ವಿದ್ಯಾರ್ಥಿಗಳನ್ನು ಅವಮಾನಿಸುವ, ಪ್ರತ್ಯೇಕಿಸುವ ಮನೋಭಾವನೆ ಮೂಡುತ್ತದೆ. ನಿಜವಾಗಿಯೂ ರಾಜ್ಯ ಸರ್ಕಾರ ದಲಿತರ ಕ್ಷೇಮಾಭಿವೃದ್ಧಿಯನ್ನು ಬಯಸುವುದಾದರೆ ಖಾಸಗಿ ಕ್ಷೇತ್ರದದಲ್ಲಿ ಮೀಸಲಾತಿ ನೀಡಲಿ, ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಲಿ, ಹಾಸ್ಟೆಲ್‌ ವಿದ್ಯಾರ್ಥಿಗಳ ಊಟದ ಭತ್ಯೆ, ವಿದ್ಯಾರ್ಥಿವೇತನ ಹೆಚ್ಚು ಮಾಡಲಿ, ಸರ್ಕಾರಿ ಶಾಲೆಗಳಲ್ಲಿ ಉದ್ಯೋಗಾಧಾರಿತ ಗುಣಮಟ್ಟದ ಶಿಕ್ಷಣ, ಪ್ರಾಥಮಿಕ ಶಾಲಾ ಹಂತದಲ್ಲಿ ಇಂಗ್ಲಿ‚ಷ್‌ ಶಿಕ್ಷಣ ನೀಡುವಂಥ ದಿಟ್ಟ ನಿರ್ಧಾರವನ್ನು ಕೈಗೊಳ್ಳಲಿ ಎಂದು ಆಗ್ರಹಿಸಿದರು.

ಕೇವಲ ಎಸ್‌ಸಿ,ಎಸ್ಟಿ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್‌ಪಾಸ್‌ ಯೋಜನೆಯಿಂದ ಅನಾನುಕೂಲಗಳೇ ಹೆಚ್ಚಿವೆ. ಆದ್ದರಿಂದ ಉಚಿತ ಬಸ್‌ಪಾಸ್‌ ಯೋಜನೆಯನ್ನು ಸರ್ಕಾರ ರಾಜ್ಯದ ಎಲ್ಲಾ ಸಮುದಾಯ ವಿದ್ಯಾರ್ಥಿಗಳಿಗೂ ವಿಸ್ತರಿಸುವಂತೆ ಪರ್ವತ್‌ ರಾಜ್‌ ಒತ್ತಾಯಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಗಾಯತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಹರೀಶ್‌, ನಂಜುಂಡಸ್ವಾಮಿ, ರಾಜೇಂದ್ರ, ವಾಸ್‌, ಸವಿತಾ, ಕೃಷ್ಣಮೂರ್ತಿ, ವೆಂಕಟೇಶ್‌, ಪದ್ಮಾವತಿ, ಮಮತಾ, ರೂಪ, ಹೀನಾ, ಪರ್ವಿನ್‌ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ