ಕೃಷಿ ಬಿಕ್ಕಟ್ಟಿಗೆ ಸರ್ಕಾರದ ನೀತಿಗಳೇ ಕಾರಣ

Team Udayavani, Jul 9, 2019, 3:00 AM IST

ಮೈಸೂರು: ದೇಶದ ಕೃಷಿ ಕ್ಷೇತ್ರ ಸಂಪೂರ್ಣವಾಗಿ ಬಿಕ್ಕಟ್ಟಿಗೆ ಸಿಲುಕಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ರೂಪಿಸಿದ ಯೋಜನೆಗಳೇ ಕಾರಣವಾಗಿದೆ ಎಂದು ಅಖೀಲ ಭಾರತ ಕ್ರಾಂತಿಕಾರಿ ಕಿಸಾನ್‌ ಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಾ. ಪ್ರದೀಪ್‌ ಸಿಂಗ್‌ ಠಾಕೋರ್‌ ಹೇಳಿದರು.

ಕರ್ನಾಟಕ ರೈತ ಸಂಘ (ಎಐಕೆಕೆಎಸ್‌) ರಾಜ್ಯ ಸಮಿತಿ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ದೇಶದ ಕೃಷಿ ಬಿಕ್ಕಟ್ಟಿಗೆ ಕಾರಣಗಳು ಮತ್ತು ಪರಿಹಾರಗಳು ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ದಶಕದಿಂದೀಚೆಗೆ ದೇಶದ ಕೃಷಿ ಬಿಕ್ಕಟ್ಟಿಗೆ ಸಿಲುಕಿದ್ದು, 4ಲಕ್ಷಕ್ಕೂ ಹೆಚ್ಚು ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶೇ.45 ರಷ್ಟು ಕೃಷಿಕರು ತಮ್ಮ ಕೃಷಿಯಿಂದ ಆದಾಯ ಗಳಿಸಲಾಗದೇ, ವ್ಯವಸಾಯದಿಂದ ವಿಮುಖರಾಗುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ನಮ್ಮನ್ನಾಳುವ ಜನಪ್ರತಿನಿಧಿಗಳು ಕೃಷಿ ಕ್ಷೇತ್ರ ಉದ್ಧಾರ ಮಾಡಲು ರೂಪಿಸಿದ ನೀತಿಗಳು ಮತ್ತು ಯೋಜನೆಗಳೇ ಮೂಲ ಕಾರಣವಾಗಿದೆ ಎಂದರು.

ರೈತ ಪರ ಬಜೆಟ್‌ ಅಲ್ಲ: ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್‌ಅನ್ನು ವಿಶ್ಲೇಷಿಸಿದರೆ, ಬಡವ ಮತ್ತು ರೈತರ ಪರವಾದ ಬಜೆಟ್‌ ಎಂದು ಹೇಳಿದ್ದಾರೆ. ಆದರೆ ಪ್ರಸ್ತುತ ಕೃಷಿ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟಿನಿಂದ ಆಚೆ ಬರುವಂತಹ ಯಾವುದೇ ನೀತಿ, ಯೋಜನೆ ರೂಪಿಸಿಲ್ಲ. ಅವರು ಜಾರಿಗೆ ತಂದಿರುವ ಎಲ್ಲಾ ನೀತಿಗಳು, ಕೃಷಿಕರಿಗೆ ಮಾರಕವಾಗಿದ್ದು, ಕಾರ್ಪೋರೇಟ್‌ ವಲಯಕ್ಕೆ ಅನುಕೂಲವಾಗಿದೆ.

ಅಷ್ಟೇ ಅಲ್ಲದೆ, ಎಂದಿನಂತೆ ಲೆದರ್‌ ಸೂಟ್‌ಕೇಸ್‌ನಲ್ಲಿ ಬಜೆಟ್‌ ತರುತ್ತಿರುವುದುನ್ನು ಬಿಟ್ಟು, ಕೆಂಪು ಬಟ್ಟೆಯಲ್ಲಿ ತಂದು, ರಾಷ್ಟ್ರೀಯತೆ, ಸ್ವಂತಿಕೆ ಹಾಗೂ ಬದಲಾವಣೆಯ ಮಾತುಗಳನ್ನಾಡಿದ್ದಾರೆ. ಆದರೆ ಈ ಮಾತುಗಳು ಕೇವಲ ಅಲಂಕಾರಿಕ ಬದಲಾವಣೆಗಳಿಗೆ ಸೀಮಿತವಾಗಿವೆ ಎಂದು ಕಿಡಿಕಾರಿದರು.

ಟ್ರಿಲಿಯನ್‌ ಲೆಕ್ಕಾಚಾರ: ಈ ಬಾರಿಯ ಬಜೆಟ್‌ನಲ್ಲಿ ಟ್ರಿಲಿಯನ್‌, ಬಿಲಿಯನ್‌ ಹಾಗೂ ಡಾಲರ್‌ಗಳ ಲೆಕ್ಕದಲ್ಲಿ ಆರ್ಥಿಕತೆಯನ್ನು ಪ್ರಸ್ತಾಪಿಸಿದ್ದಾರೆ. ಲಕ್ಷ, ಕೋಟಿಗಳ ಮಾತೆ ಇಲ್ಲ. ಕೃಷಿಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವ ಯಾವೊಂದು ಯೋಜನೆಗಳನ್ನೂ ರೂಪಿಸಿಲ್ಲ. ಬಜೆಟ್‌ ಭಾಷಣದಲ್ಲಿ ಉದ್ಯೋಗದ ಬಗ್ಗೆ ಒಂದು ಮಾತನ್ನೂ ಆಡಿಲ್ಲ. 5 ಕೋಟಿ ಟ್ರಿಲಿಯನ್‌ ಆರ್ಥಿಕತೆ ಬಡವರ ಮತ್ತು ರೈತರ ಪರವಾಗಿಲ್ಲ. ಇದು ಕಾರ್ಪೋರೇಟ್‌ ಪರವಾದುದು. ಜೊತೆಗೆ 5 ಕೋಟಿ ಟ್ರಿಲಿಯನ್‌ ಆರ್ಥಿಕತೆ ವಿದೇಶಿ ಬಂಡವಾಳವನ್ನು ನೆಚ್ಚಿಕೊಂಡಿದೆ ಎಂದು ವಿಷಾದಿಸಿದರು.

ಬೆಲೆ ನಿಗದಿಪಡಿಸಿ: ಸರ್ಕಾರಗಳು ರೈತನಿಗೆ ವರ್ಷಕ್ಕೆ 6 ಸಾವಿರ, ಪಿಂಚಣಿ ಮತ್ತಿತರ ಹಣ ನೀಡದೆ, ಅವರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಈವರೆಗೆ ಎಲ್ಲಾ ಸರ್ಕಾರಗಳು ಜಾರಿಗೆ ತಂದಿರುವ ಕೃಷಿ ನೀತಿಗಳನ್ನು ಬದಲಿಸುವುದು, ಭೂ ಸ್ವಾಧೀನ ಕಾಯಿದೆ ಹಿಂಪಡೆಯುವುದು, ಇಸ್ರೇಲ್‌ ಮಾದರಿ ಕೃಷಿಯನ್ನು ಕೈಬಿಟ್ಟು, ಬೆಳೆ ನಷ್ಟವಾದ ರೈತರಿಗೆ ಸೂಕ್ತ ಪರಿಹಾರ ನೀಡುವ ಕಾರ್ಯಗಳನ್ನು ಮಾಡಬೇಕಿದೆ ಎಂದು ತಿಳಿಸಿದರು.

ರೈತ ಸಂಘ ರಾಜ್ಯಾಧ್ಯಕ್ಷ ಕಾ.ಡಿ.ಎಚ್‌. ಪೂಜಾರ್‌, ಚಿಂತಕ ನಾ. ದಿವಾಕರ್‌, ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಜೋಗನಹಳ್ಳಿ ಗುರುಮೂರ್ತಿ, ವರ್ಗ ಸಮರ ಪತ್ರಿಕೆ ಸಂಪಾದಕ ಅಯ್ಯಪ್ಪ ಹೂಗಾರ್‌ ಇತರರಿದ್ದರು.

ರೈತರ ಜ್ವಲಂತ ಸಮಸ್ಯೆ ಬಗ್ಗೆ ಚರ್ಚೆ ನಡೆಯಲಿ: ಟಿಯುಸಿಐ ರಾಜ್ಯಾಧ್ಯಕ್ಷ ಕಾ. ಆರ್‌. ಮಾನಸಯ್ಯ ಮಾತನಾಡಿ, ಕೃಷಿ ಮತ್ತು ಕೃಷಿ ಭೂಮಿ ದೇಶದ ಎಲ್ಲಾ ಆರ್ಥಿಕತೆಯ ಒಟ್ಟಾರೆ ಮೂಲವಾಗಿದೆ. ಆಳುವ ವರ್ಗ ಕೃಷಿ ಸಮೃದ್ಧವಾಗಿದೆ ಎಂದು ಹೇಳುತ್ತಾರೆ. ಆದರೆ, ವರ್ಷದಿಂದ ವರ್ಷಕ್ಕೆ ರೈತರ ಆತ್ಮಹತ್ಯೆ, ಗುಳೆ ಹೋಗುವುದು, ಕೃಷಿಯಿಂದ ಯುವಜನರು ವಿಮುಖರಾಗುತ್ತಿದ್ದಾರೆ.

ಜೊತೆಗೆ ಕೃಷಿ ಬಿಕ್ಕಟ್ಟಿಗೆ ರೈತರೇ ಕಾರಣ ಎಂಬ ಆರೋಪವನ್ನು ಆಳುವ ವರ್ಗ ಹೇಳುತ್ತಿದೆ. ಬ್ರಿಟಿಷ್‌ ವಸಾಹತುವಿನಿಂದ ದೇಶದ ಸ್ವಾವಲಂಬಿ ಕೃಷಿ ಪದ್ಧತಿ ನಾಶವಾಯಿತು. ಇಂದು ಸರ್ಕಾರಗಳ ಧೋರಣೆಯಿಂದ ಒಕ್ಕಲುತನ ನಾಶವಾಗುತ್ತಿದೆ. ಕೃಷಿ ಉತ್ಪನ್ನ ಮತ್ತು ದರದ ಬಗ್ಗೆ ಚರ್ಚೆ ನಡೆಸುವುದರ ಜೊತೆಗೆ, ಅದರಾಚೆಗೂ ನಾವು ಚಿಂತಿಸಬೇಕಿದೆ. ರೈತಾಪಿ ವರ್ಗ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಾವುಗಳು ಚರ್ಚೆ ನಡೆಸಬೇಕಿದೆ ಎಂದು ತಿಳಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ