ಮೈಸೂರಿಗೆ ಬಂದು ಪಕ್ಷದಿಂದ ಹೊರಗೆ ಹಾಕುತ್ತೇನೆಂದು ಕುಮಾರಸ್ವಾಮಿ ಹೇಳಿದ್ದರು: ಜಿ.ಟಿ.ದೇವೇಗೌಡ
Team Udayavani, Jan 19, 2021, 2:30 PM IST
ಮೈಸೂರು: ಮೈಸೂರಿಗೆ ಬಂದು ಪಕ್ಷದಿಂದ ಹೊರಗೆ ಹಾಕುತ್ತೇನೆ ಅಂತ ಖುದ್ದು ಕುಮಾರಸ್ವಾಮಿ ಹೇಳಿದ್ದಾರೆ. ಅಂದರೆ ಎಲ್ಲವೂ ಮುಗಿಯಿತು ಎಂದರ್ಥ ಅಲ್ಲವೇ? ಈಗ ಸಂಘಟಕರ ಪಟ್ಟಿಯಬಗ್ಗೆ ಹೇಳುವುದಕ್ಕೆ ಏನಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಜೆಡಿಎಸ್ ಸಂಘಟಕರ ಪಟ್ಟಿಯಿಂದ ತಮಗೆ ಕೊಕ್ ನೀಡಿದ ವಿಚಾರವಾಗಿ ಮಾತನಾಡಿ, ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ಏನೂ ನಡೆಯಲಿಲ್ಲ. ಈಗ ಕೇವಲ ಶಾಸಕ. ನನ್ನ ಮಾತು ಯಾರು ಕೇಳುತ್ತಾರೆ. ಎಲ್ಲವನ್ನೂ ಮೈಸೂರು ಹೈಕಮಾಂಡ್ ಹೇಳಿದಂತೆ ಮಾಡಿದ್ದಾರೆ ಎಂದು ಸಾ.ರಾ.ಮಹೇಶ್ ಗೆ ಟಾಂಗ್ ನೀಡಿದರು.
ಇದನ್ನೂ ಓದಿ:ಮಂಗಳೂರು ಗೋಲಿಬಾರ್ ಗೆ ಪ್ರತೀಕಾರ: ಪೊಲೀಸ್ ಸಿಬ್ಬಂದಿ ಕೊಲೆ ಯತ್ನದ ಹಿಂದೆ ‘ಮಾಯಾ ಗ್ಯಾಂಗ್’
ಕುಮಾರಸ್ವಾಮಿ ಮೈಸೂರಿಗೆ ಬರಲಿ, ಬಂದು ನನ್ನನ್ನು ಹೊರಗೆ ಹಾಕಲಿ. ಆ ಮೇಲೆ ಏನು ಮಾಡಬೇಕೆಂದು ನೋಡಿದರೆ ಆಯ್ತು ಎಂದರು.
ಸಾ.ರಾ.ಮಹೇಶ್ ಜಲದರ್ಶಿನಿ ಅತಿಥಿ ಗೃಹದಲ್ಲಿ ನನ್ನನ್ನು ಭೇಟಿ ಮಾಡಿದ್ದರು. ಜಿ.ಟಿ.ದೇವೇಗೌಡರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ದರು. ಆದರೆ ಮೇಯರ್ ಚುನಾವಣೆ ಸಂಬಂಧ ಸಭೆ ನಡೆಸಿದಾಗ ನನ್ನನ್ನು ಒಂದು ಮಾತು ಕರೆಯಲಿಲ್ಲ. ಅವರವರೇ ಸಭೆ ಮಾಡಿಕೊಂಡರು ಎಂದು ಆರೋಪಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಅವರು ಜ್ಯೋತಿಷ್ಯ ಕಲಿಯುತ್ತಿರಬೇಕು: ವ್ಯಂಗ್ಯವಾಡಿದ ಸಚಿವ ಸೋಮಶೇಖರ್
ನನ್ನನ್ನು ಜೆಡಿಎಸ್ ನಿಂದ ದೂರ ಮಾಡಬೇಕು ಎಂಬ ಪಿತೂರಿ ಮೊದಲಿನಿಂದ ನಡೆಯುತ್ತಿದೆ. ಈಗ ರಾಜಕಾರಣ ಕಷ್ಟ. ನನಗೂ 75 ವರ್ಷ ವಯಸ್ಸಾಯ್ತು. ಇನ್ನೆರಡು ವರ್ಷ ಶಾಸಕನಾಗಿ ಇರುತ್ತೇನೆ. ಆ ಮೇಲೆ ಚುನಾವಣೆಗೆ ಸ್ಪರ್ಧಿಸಬೇಕೋ, ಬೇಡವೋ ಅಂತ ತೀರ್ಮಾನ ಮಾಡುತ್ತೇನೆ ಎಂದು ಜಿ.ಟಿ.ದೇವೇಗೌಡ ಹೇಳಿದರು.