ಕೆಎಸ್‌ಎನ್‌ ಕವಿತೆ ಅರಿತರೆ ವಿಚ್ಛೇದನಕ್ಕೆ ತಡೆ

Team Udayavani, Jun 10, 2019, 3:00 AM IST

ಮೈಸೂರು: ಮನುಷ್ಯನಲ್ಲಿರುವ ಅಂಧಕಾರವನ್ನು ಅಳಿಸಿ, ಬೆಳಕು ಮೂಡಿಸುವಲ್ಲಿ ಕವಿಗಳು ನಿರಂತರವಾಗಿ ಪ್ರಯತ್ನಿಸಿದ್ದು, ಅವರಲ್ಲಿ ಕೆ.ಎಸ್‌. ನರಸಿಂಹಸ್ವಾಮಿ ಮೊದಲಿಗರು ಎಂದು ಕವಯತ್ರಿ ಡಾ.ಲತಾ ರಾಜಶೇಖರ್‌ ಬಣ್ಣಿಸಿದರು.

ಗ್ರಾಮಾಂತರ ಬುದ್ಧಿಜೀವಿಗಳ ಬಳಗ, ರಾಜ್ಯಮಟ್ಟದ ಸಾಹಿತ್ಯಾತ್ಮಕ, ಜಾನಪದ ಹಾಗೂ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಗರದ ಜೆಎಲ್‌ಬಿ ರಸ್ತೆಯಲ್ಲಿನ ರೋಟರಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರೇಮಕವಿ ಕವಿ ಕೆ.ಎಸ್‌. ನರಸಿಂಹಸ್ವಾಮಿ ಸ್ಮರಣಾರ್ಥ ಸಾಹಿತ್ಯೋತ್ಸವ, ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರದಾನ, ಕವಿಗೋಷ್ಠಿ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾಕವಿ: ಕೆಎಸ್‌ಎನ್‌ ನವೋದಯ ಕಾಲದ ಮಹಾಕವಿಯಾಗಿದ್ದು, ಅವರು ಜನಮುಖೀ, ಸಮಾಜಮುಖೀ ಕೃತಿಗಳನ್ನು ರಚಿಸಿದ್ದಾರೆ. ಇವರ ಕವಿತೆಗಳಲ್ಲಿ ಹೆಚ್ಚು ಪ್ರೇಮ ಭಾವನೆಗಳು ತುಂಬಿರುತ್ತಿದ್ದರಿಂದ ಪ್ರೇಮಕವಿ ಎಂದು ಗುರುತಿಸಲಾಯಿತು ಎಂದರು.

ವ್ಯಂಗ್ಯ ಚಿತ್ರಕಾರರು ಗಂಡ-ಹೆಂಡತಿ ಚಿತ್ರಗಳನ್ನು ಬಿಡಿಸುವಾಗ, ಹೆಂಡತಿಯ ಚಿತ್ರವನ್ನು ರೌದ್ರ ರೂಪದಲ್ಲಿ, ಲಟ್ಟಣಿಗೆ ಹಿಡಿದು ಗಂಡನಿಗೆ ಹೊಡೆಯುವಂತೆ ಮತ್ತು ಗಂಡನನ್ನು ಎದುರಿಸುವ ರೀತಿಯಲ್ಲೇ ಚಿತ್ರಿಸುತ್ತಾರೆ. ಆದರೆ, ಕೆ.ಎಸ್‌. ನರಸಿಂಹಸ್ವಾಮಿ ಅವರು ಮದುವೆಯಾದ ನಂತರವೂ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!, ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನೂ ಒಬ್ಬ ಸಿಪಾಯಿ’ ಎಂದು ಸತಿಯ ಮೇಲಿನ ಪ್ರೇಮವನ್ನು ಹೇಳಿಕೊಂಡಿದ್ದಾರೆ.

ಇವರ ಕವಿತೆಗಳನ್ನು ಓದಿ ಅಥೆಸಿಕೊಂಡರೆ ಯಾವ ಸಂಸಾರದಲ್ಲೂ ವಿಚ್ಛೇದನ ಎಂಬ ಮಾತು ಬರುವುದಿಲ್ಲ’ ಎಂದು ಹೇಳಿದರು. ಆದರೆ, ಇತ್ತೀಚಿನ ದಿನಗಳಲ್ಲಿ ಪರಸ್ಪರ ದ್ವೇಷ ಅಸೂಯೇ ತಾಂಡವವಾಡುತ್ತಿದೆ. ದ್ವೇಷವನ್ನು ಪ್ರೀತಿಯ ಜಲದಿಂದ ಅಳಿಸುವ ಕೆಲಸವಾಗಬೇಕಿದೆ. ಇದಕ್ಕೆ ಸಾಹಿತ್ಯ ಪೂರಕವಾಗಿದ್ದು, ಎಲ್ಲರೂ ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಕೃತಿ ಬಿಡುಗಡೆ: ಈ ಸಂದರ್ಭದಲ್ಲಿ ಭೇರ್ಯ ರಾಮಕುಮಾರ್‌ ಸಂಪಾದಕತ್ವದ ಪ್ರೇಮಕವಿ ಕೆ.ಎಸ್‌.ಎನ್‌.-105 ಡಾ.ಜಿ.ಡಿ.ಜೋಷಿ ಅವರ ದಾರಿಕಾಣದಾಗಿದೆ, ವಿದ್ವಾಂಸ ಎಂ.ಡಿ.ಅಯ್ಯಪ್ಪನವರ ಕರ್ನಾಟಕದ ಪಕ್ಷಿಧಾಮಗಳು, ಕವಿ ಗಂಗಾಲಹರಿ ಅವರ ಕಾವ್ಯ ಲಹರಿ ಮತ್ತು ಭಾವ ಲಹರಿ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಹೊರನಾಡು ಕನ್ನಡಿಗರು ಸೇರಿದಂತೆ ರಾಜ್ಯದ ನಾನಾ ಜಿಲ್ಲೆಯ 16 ಮಂದಿಗೆ ಕೆ.ಎಸ್‌.ಎನ್‌. ಕಾವ್ಯ ಪುರಸ್ಕಾರ ನೀಡಿಲಾಯಿತು.  ಪ್ರೇಮಿ ಕವಿ ಕೆಎಸ್‌ಎನ್‌ ನೆನಪಿನಲ್ಲಿ ನಡೆದ ಕಾವ್ಯ ಸ್ಪರ್ಧೆಯಲ್ಲಿ ಹೊರನಾಡು ಕನ್ನಡಿಗರ ವಿಭಾಗದಲ್ಲಿ ತಮಿಳುನಾಡಿನ ಶ್ರೀನಿವಾಸ ಪಣಕಹಳ್ಳಿ, ಕಾಸರಗೋಡಿನ ಏತ್ಕಡ ನರಸಿಂಹ ಭಟ್‌, ಮುಂಬೈನ ಲಕ್ಷ್ಮೀ ಸತೀಶ್‌ ಶೆಟ್ಟಿ, ಕಾಸರಗೋಡಿನ ಸುಗಂಧಿ ಮರದೆ ಮೂಲೆ, ಕವಯತ್ರಿಯರ ವಿಭಾಗದಲ್ಲಿ ಮೈಸೂರಿನ ಎಸ್‌.ಶಿವರಂಜನಿ, ಮಂಡ್ಯದ ಶುಭಶ್ರೀ ಪ್ರಸಾದ್‌, ದಕ್ಷಿಣ ಕನ್ನಡದ ಅಶ್ವಿ‌ನಿಕೋಡಿಬೈಲು,

ಬೆಂಗಳೂರಿನ ವಿಜಯ ಲಕ್ಷ್ಮೀ, ಮಂಡ್ಯದ ಭಾಗ್ಯಲಕ್ಷ್ಮೀ, ಕವಿಗಳ ವಿಭಾಗದಲ್ಲಿ ಶಿವಮೊಗದ ದಿವಾಕರ್‌ ನಾಡಿಗರ್‌, ವಿಜಯಪುರದ ಪ್ರಕಾಶ್‌ ಜಹಗೀರ್‌ದಾರ್‌, ಮೈಸೂರಿನ ಟಿ.ಎಸ್‌.ರಾಜೇಂದ್ರ ಪ್ರಸಾದ್‌, ಬೆಂಗಳೂರಿನ ಮಂಜುನಾಥ್‌ ಹಾಲುವಾಗಿಲು, ದಕ್ಷಿಣ ಕನ್ನಡದ ಕೊಡತ್ತೂರು ಬಾಲಕೃಷ್ಣ ಉಡುಪ, ವಿಶೇಷ ಚೇತನರ ವಿಭಾಗದಲ್ಲಿ ಮೈಸೂರಿನ ಬೆಮಲ್‌ ರಮೇಶ ಶೆಟ್ಟಿ, ಕೊಡಗಿನ ಎಸ್‌.ಕೆ.ಈಶ್ವರಿ ಅವರು ಕೆಎಸ್‌ಎನ್‌ ಕಾವ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದರು.

ಸಾಹಿತಿಗಳಾದ ಡಾ.ಜಿ.ಡಿ.ಜೋಷಿ, ಡಾ.ಎ.ಪುಷ್ಪಾ ಅಯ್ಯಂಗಾರ್‌, ಚಂಪಾವತಿ ಶಿವಣ್ಣ, ಎ.ಹೇಮಗಂಗಾ ಅವರಿಗೆ ಕೆಎಸ್‌ಎನ್‌ ಕಾವ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಾಹಿತಿ ರೇವಣ್ಣ ಬಳ್ಳಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ನ್ಯಾಯಮೂರ್ತಿ ಅರಳಿ ನಾಗರಾಜ್‌, ಡಾ.ವೈ.ಎಂ.ರೆಡ್ಡಿ, ಡಾ.ಎಲ….ಆರ್‌.ರಮೇಶ್‌ ಬಾಬು, ಸಾಹಿತಿಗಳಾದ ಭೇರ್ಯ ರಾಮಕುಮಾರ್‌, ಕೆ.ಎನ್‌. ಮಹಾಬಲ, ಪುಷ್ಪಾ ಅಯ್ಯಂಗಾರ್‌, ಪ್ರೊ.ಕೆ.ಭೈರವಮೂರ್ತಿ, ಡಾ.ಎಚ್‌.ಬಿ.ರಾಜಶೇಖರ್‌, ವಕೀಲರಾದ ಬಿ.ವೇದಾವತಿ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ