ಸಾಲಮನ್ನಾ ಶ್ವೇತಪತ್ರ ಹೊರಡಿಸಲು ಒತ್ತಾಯ

Team Udayavani, Jun 25, 2019, 3:00 AM IST

ಮೈಸೂರು: ರಾಜ್ಯ ಸರ್ಕಾರ ಕೂಡಲೆ ಸಾಲ ಮನ್ನಾ ಕುರಿತು ಶ್ವೇತಪತ್ರ ಹೊರಡಿಸಬೇಕು, ಬರ ಸಮಸ್ಯೆಗೆ ತುರ್ತಾಗಿ ಸ್ಪಂದಿಸುವ ಜೊತೆಗೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಗನ್‌ಹೌಸ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ರೈತರು, ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಹೊಸೂರು ಕುಮಾರ್‌ ಮಾತನಾಡಿ, ರಾಜ್ಯ ಕಳೆದ 5 ವರ್ಷಗಳಿಂದಲೂ ಬರಗಾಲ ಎದುರಿಸುತ್ತಿದೆ. ಕಳೆದ ವರ್ಷ 150 ತಾಲೂಕನ್ನು ಬರ ಪ್ರದೇಶವೆಂದು ಸರಕಾರ ಘೋಷಿಸಿತ್ತು. ಈ ವರ್ಷ 164 ತಾಲೂಕುಗಳಲ್ಲಿ ಬರ ಆವರಿಸಿದೆ.

ಜಿಲ್ಲೆಯ ಹೆಚ್ಚು ಭಾಗ ಬರ ಎದುರಿಸುತ್ತಿದ್ದು, ಮುಂಗಾರು ಕೈ ಕೊಟ್ಟಿದ್ದರಿಂದ ಶೇ.80ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ. ಜೊತೆಗೆ ಕುಡಿವ ನೀರಿನ ಸಮಸ್ಯೆಯೂ ತಲೆದೋರಿದೆ. ಜಲಾಶಯಗಳಲ್ಲಿ ನೀರಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಜನರ ಕಷ್ಟಗಳಿಗೆ ಸರ್ಕಾರ ಕೂಡಲೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ರೈತರ ಸಾಲ ಮನ್ನಾ ಮಾಡಿ ಋಣಮುಕ್ತ ಪತ್ರವನ್ನು ಅವರ ಮನೆಗೆ ತಲುಪಿಸುವುದಾಗಿ ಸರ್ಕಾರ ಹೇಳುತ್ತಲೇ ಬರುತ್ತಿದೆ. ಆದರೆ, ಬ್ಯಾಂಕುಗಳು ಸಾಲ ವಸೂಲಿಗಾಗಿ ರೈತರಿಗೆ ನೋಟಿಸ್‌ ನೀಡುತ್ತಲೇ ಇವೆ. ಸಾಲ ಮನ್ನಾ ಘೋಷಣೆ ಗೊಂದಲ ಸೃಷ್ಟಿ ಮಾಡಿದ್ದು, ಸರಕಾರ ಶ್ವೇತಪತ್ರ ಹೊರಡಿಸಿ ಜಿಲ್ಲೆಯಲ್ಲಿ ಎಷ್ಟು ಜನ ರೈತರಿಗೆ ಸಾಲ ಮನ್ನಾ ಆಗಿದೆ? ಎಂದು ಘೋಷಿಸಲಿ ಎಂದು ಆಗ್ರಹಿಸಿದರು.

ಸರ್ಕಾರ ಈ ಸಾಲಿನ ಕಬ್ಬಿಗೆ ಬೆಲೆ ನಿಗದಿ ಮಾಡಿಲ್ಲ. ಚುಂಚನಕಟ್ಟೆ ಶ್ರೀರಾಮ ಕಾರ್ಖಾನೆ ಸಕ್ಕರೆ ಕಾರ್ಖಾನೆಯ ಬಗ್ಗೆ ಇದುವರೆಗೂ ತಲೆಕೊಡಿಸಿಕೊಂಡಿಲ್ಲ. ಹಿರಿಯೂರು-ಮೈಸೂರು 400 ಕೆವಿ ವಿದ್ಯುತ್‌ ಮಾರ್ಗವನ್ನು ರೈತರ ತೋಟಗಳ ಮೇಲೆ ತೆಗೆದುಕೊಂಡು ಹೋಗುತ್ತಿದ್ದು, ರೈತ ಕುಟುಂಬದ ಬದುಕನ್ನೇ ಪವರ್‌ಗ್ರೀಡ್‌ನ‌ವರು ಕಿತ್ತುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರಿ ಭೂಮಿ ಮತ್ತು ಕೆರೆಕಟ್ಟೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಚಿಲ್ಲರೆ ಅಂಗಡಿ, ಸಣ್ಣಪುಟ್ಟ ಹೋಟೆಲ್‌ಗ‌ಳಲ್ಲಿ ಲಂಗುಲಗಾಮಿಲ್ಲದೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಫ‌ಸಲು ಭೀಮಾ ವಿಮಾ ಯೋಜನೆ ವಿಸ್ತರಿಸಬೇಕು, ಉದ್ಯೋಗ ಖಾತ್ರಿ ಯೋಜನೆಯನ್ನು ಕೃಷಿ ಕ್ಷೇತ್ರಕ್ಕೂ ವಿಸ್ತರಿಸಬೇಕು ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮಹಿಳಾ ಅಧ್ಯಕ್ಷ ನೇತ್ರಾವತಿ, ಪಿ.ಮರಂಕಯ್ಯ, ಆನಂದೂರು ಪ್ರಭಾಕರ್‌, ಶಿರಮಳ್ಳಿ ಸಿದ್ದಪ್ಪ, ಹೆಜ್ಜಿಗೆ ಪ್ರಕಾಶ್‌, ಕರುಹಟ್ಟಿ ಕುಮಾರಸ್ವಾಮಿ, ಗುರುಲಿಂಗೇಗೌಡ, ಬೊಕ್ಕಳ್ಳಿ ನಂಜುಂಡಸ್ವಾಮಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ