ಜನಪ್ರತಿನಿಧಿಗಳ ಕಡೆಗಣನೆ ಖಂಡಿಸಿ ಜಿಪಂ ಮುತ್ತಿಗೆಗೆ ನಿರ್ಣಯ

Team Udayavani, Jun 20, 2019, 3:00 AM IST

ತಿ.ನರಸೀಪುರ: ತಾಲೂಕು ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿನ ನಿರ್ಣಯ, ಸಭಾ ನಡವಳಿಗಳಿಗೆ ಜಿಪಂ ಹಾಗೂ ಜಿಲ್ಲಾಡಳಿತ ಕಿಂಚಿತ್ತೂ ಗಮನವನ್ನು ನೀಡದೆ ಚುನಾಯಿತ ಜನಪ್ರತಿನಿಧಿಗಳ ಹಕ್ಕಿಗೆ ಚ್ಯುತಿಯನ್ನುಂಟುಮಾಡಿ, ಅಗೌರವ ತಂದಿರುವ ಹಿನ್ನೆಲೆಯಲ್ಲಿ ಜಿಪಂ ಕಚೇರಿಗೆ ಮುಂಭಾಗ ಧರಣಿ ಕುಳಿತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮುತ್ತಿಗೆ ಹಾಕಲು ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ನಿರ್ಧರಿಸಲಾಯಿತು.

ತಾಪಂ ಸಭಾಂಗಣದಲ್ಲಿ ಅಧ್ಯಕ್ಷ ಆರ್‌.ಚಲುವರಾಜು ಅಧ್ಯಕ್ಷತೆಯಲ್ಲಿ ನಡೆದ 2019-20ನೇ ಸಾಲಿನ ಸಮಿತಿ ಮತ್ತು ಸಮಾಲೋಚನೆ ಯೋಜನೆಯಡಿಯಲ್ಲಿ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಸದಸ್ಯ ಎಂ.ಚಂದ್ರಶೇಖರ್‌ ಪ್ರಸ್ತಾಪದಂತೆ ತಾಲೂಕು ಮಟ್ಟದ ಜನಪ್ರತಿನಿಧಿಗಳ ಸಭೆಯಲ್ಲಿನ ನಿರ್ಣಯ ಮತ್ತು ನಡವಳಿಗೆ ಕವಡೆ ಕಾಸಿನ ಕಿಮ್ಮತ್ತನ್ನು ನೀಡದ ಜಿಪಂ ಆಡಳಿತಕ್ಕೆ ಚುರುಕು ಮುಟ್ಟಿಸಲು ಧರಣಿ ನಡೆಸಿ ಸಿಇಒ ಅವರಿಗೆ ಮುತ್ತಿಗೆ ಹಾಕಲು ನಿರ್ಣಯ ಕೈಗೊಳ್ಳಲಾಯಿತು.

ಮಾದರಿ ಹೋರಾಟ: ಸದಸ್ಯ ಎಂ.ಚಂದ್ರಶೇಖರ್‌ ಮಾತನಾಡಿ, ಜಿಪಂ ಆಡಳಿತ ಜಿಲ್ಲಾ ಮಟ್ಟದ ದೊಡ್ಡ ಜನಪ್ರತಿನಿಧಿಗಳ ಸಂಸ್ಥೆಯಾಗಿದೆ. ಸಿಇಒಗೆ ಲಕ್ಷಾಂತರ ರೂ. ಸಂಬಳ, ಕಾರು ಮತ್ತಿತರ ಸವಲತ್ತು ನೀಡಲಾಗಿದೆ. ಆದರೆ, ತಾಲೂಕು ಮಟ್ಟದ ಸಭೆಗಳಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಅವರು ಕ್ಯಾರೆ ಎನ್ನುತ್ತಿಲ್ಲ. ಸಮಸ್ಯೆಗಳ ದೂರು ಕೊಟ್ಟರೆ ಮುಕ್ತಾಯದ ಹಿಂಬರಹ ನೀಡುತ್ತಾರೆ.

ಜಿಲ್ಲೆಯ ಯಾವೊಂದು ತಾಲೂಕು ಪಂಚಾಯಿತಿಗೆ ಭೇಟಿ ನೀಡಿಲ್ಲ, ಗ್ರಾಮೀಣ ಪ್ರದೇಶಗಳಿಗೆ ಬಂದೇ ಇಲ್ಲ. ಜನರಿಂದ ಆಯ್ಕೆಗೊಂಡವರು ಅರ್ಜಿ ಹಿಡಿದು ಅವರ ಮುಂದೆ ಹೋಗಬೇಕಾಗಿದೆ. ಅಂತಹವರಿಗೆ ಪ್ರತಿಭಟನೆ ಮೂಲಕ ಪಾಠ ಕಲಿಸಬೇಕು. ಜಿಲ್ಲೆಗೆ ನಮ್ಮ ಹೋರಾಟ ಮಾದರಿಯಾಗಬೇಕು ಎಂದು ತಿಳಿಸಿದರು.

ಸಭಾ ನಿರ್ಣಯ ರವಾನಿಸಿ: ಮತ್ತೋರ್ವ ಸದಸ್ಯ ಎಂ.ರಮೇಶ ಮಾತನಾಡಿ, ಕುಂಭಮೇಳದಲ್ಲೂ ಶಿಷ್ಟಾಚಾರ ನೆಪದಲ್ಲಿ ತಾಪಂ ಸದಸ್ಯರನ್ನು ಕಡೆಗಣಿಸಲಾಯಿತು. ಜನಪ್ರತಿನಿಧಿಗಳನ್ನು ಗೌರಸಿದ ತಹಶೀಲ್ದಾರ್‌ ಹಾಗೂ ಕಾರ್ಯನಿರ್ವಹಕ ಅಧಿಕಾರಿ ಇಬ್ಬರ ವಿರುದ್ಧವೂ ಕ್ರಮ ಜರುಗಿಸುವಂತೆ ಕಳೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡರೂ ಯಾವುದೇ ಪ್ರಯೋಜನವಾಗಿಲ್ಲ.

ಜಿಲ್ಲಾಡಳಿತಕ್ಕೆ ನಾವುಗಳು ಅಷ್ಟೊಂದು ಕಡೆಯಾಗಿ ಕಾಣಿಸುತ್ತಿವಾ?, ಅವರೆಲ್ಲರ ಬೇಜವಾಬ್ದಾರಿಗೆ ಮುತ್ತಿಗೆ ಪ್ರತಿಭಟನೆ ಹೋರಾಟದಿಂದಲೇ ಉತ್ತರ ನೀಡಬೇಕು. ಅದಕ್ಕೂ ಮೊದಲು ಸಭಾ ನಿರ್ಣಯ ಮತ್ತು ನಡವಳಿಯನ್ನು ಜಿಪಂ ಕಚೇರಿಗೆ ರವಾನಿಸಬೇಕು ಎಂದು ಆಗ್ರಹಿಸಿದರು.

ಸಮಾಜ ಕಲ್ಯಾಣಾಧಿಕಾರಿಗಳ ತಾತ್ಸಾರ: ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಪಾಲಕರು ಮತ್ತು ಸಹಾಯಕ ನಿಯೋಜನೆ ಮತ್ತು ವರ್ಗಾವಣೆಯಲ್ಲಿ ಸಮಾಜ ಕಲ್ಯಾಣಾಧಿಕಾರಿಗಳು ತಾತ್ಸಾರ ಮಾಡುತ್ತಿದ್ದಾರೆ ಎಂದು ಸದಸ್ಯರಾದ ಕೆಬ್ಬೆ ರಂಗಸ್ವಾಮಿ ಹಾಗೂ ಎಚ್‌.ಜವರಯ್ಯ ಆರೋಪಿಸಿದರು. ತಾಪಂ ಸದಸ್ಯರ ಸೂಚನೆ ಮತ್ತು ಸಲಹೆಗಳನ್ನು ಧಿಕ್ಕರಿಸುತ್ತಿದ್ದಾರೆ. ಹಾಗಾಗಿ ಹಲವು ವಿದ್ಯಾರ್ಥಿ ನಿಲಯಗಳ ಅವ್ಯವಸ್ಥೆಯಿಂದ ಕೂಡಿದ್ದು, ತಾಂತ್ರಿಕ ಸಮಸ್ಯೆಗಳಿಂದ ಇಲಾಖೆಯಲ್ಲಿ ಕೆಲಸ ಕಾರ್ಯಗಳೇ ಕುಂಠಿತಗೊಂಡಿವೆ ಎಂದು ದೂರಿದರು.

ಸಭೆಯಲ್ಲಿ ಪ್ರಭಾರ ಕಾರ್ಯನಿರ್ವಹಕ ಅಧಿಕಾರಿ ನಿಂಗಯ್ಯ, ಸದಸ್ಯರಾದ ಶಿವಮ್ಮ, ನಾಗಮಣಿ, ಪಲ್ಲವಿ, ಚಿನ್ನಮ್ಮ, ಶಿವಮ್ಮ, ಲೋಲಾಕ್ಷಿ, ಕೆಬ್ಬೆ ರಂಗಸ್ವಾಮಿ, ಬಿ.ಸಾಜಿದ್‌ ಅಹಮ್ಮದ್‌, ರತ್ನರಾಜ್‌, ಪುಷ್ಪಪ್ರಭುಸ್ವಾಮಿ, ಲೋಕೋಪಯೋಗಿ ಎಇಇ ಶಿವಶಂಕರಯ್ಯ, ಜಿಪಂ ಎಇಗಳಾದ ಟಿ.ಪ್ರಕಾಶ್‌, ದೇವರಾಜು, ಸಿಡಿಪಿಒ ಬಿ.ಎನ್‌.ಬಸವರಾಜು, ಬಿಇಒ ಎಸ್‌.ಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ ಸುಂದರಮ್ಮ ಇತರರಿದ್ದರು.

ಜಿಪಂ ಸಿಇಒಗೆ 15 ದಿನ ಗಡುವು: ಸದಸ್ಯರೆಲ್ಲರ ಅಹವಾಲು ಆಲಿಸಿದ ಅಧ್ಯಕ್ಷ ಆರ್‌.ಚಲುವರಾಜು ಮಾತನಾಡಿ, ಈಗಿನ ಸಭೆಯಲ್ಲಿನ ನಿರ್ಣಯವನ್ನು 10 ದಿನಗಳೊಳಗೆ ಜಿಪಂ ರವಾನಿಸಲಾಗುವುದು. ಸಿಇಒ ಬೇಜವಾಬ್ದಾರಿ ವರ್ತನೆ ಮುಂದುವರಿದರೆ 15 ದಿನದೊಳಗೆ ಧರಣಿ ಮತ್ತು ಮುತ್ತಿಗೆ ಹೋರಾಟದ ದಿನವನ್ನು ನಿಗದಿಪಡಿಸಲಾಗುವುದು. ಸದಸ್ಯರೆಲ್ಲರೂ ಒಮ್ಮತದಿಂದ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ತಾಲೂಕು ಮಟ್ಟದ ಸಭೆಗಳಿಗೆ ಅಧಿಕಾರಿಗಳು ನಿರಂತರವಾಗಿ ಗೈರಾಗಿರುವ ಬಗ್ಗೆಯೂ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ