ಹಣೆಗೆ ಕುಂಕುಮವಿಟ್ಟು, ದೇವಿ ಪೂಜಿಸಿದ್ದ ಕಾರ್ನಾಡ್‌

Team Udayavani, Jun 11, 2019, 3:00 AM IST

ಮೈಸೂರು: ಹಿಂದುತ್ವ, ಹಿಂದೂ ಸಂಸ್ಕೃತಿಯನ್ನು ವಿರೋಧಿಸುತ್ತಾ ನಾಸ್ತಿಕವಾದವನ್ನು ಪ್ರತಿಪಾದಿಸುವವರಿಂದ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಮಾಡಿಸುವುದು ಬೇಡ ಎಂಬ ಪ್ರಬಲ ವಿರೋಧದ ನಡುವೆಯೂ ಸರ್ಕಾರದ ಆಹ್ವಾನವನ್ನು ಒಪ್ಪಿ ಚಾಮುಂಡಿಬೆಟ್ಟಕ್ಕೆ ಬಂದ ನಾಟಕಕಾರ ಗಿರೀಶ್‌ ಕಾರ್ನಾಡ್‌ ಅವರು ಹಣೆಗೆ ತಿಲಕವಿಟ್ಟು, ದೇವಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಅಚ್ಚರಿ ಮೂಡಿಸಿದ್ದರು.

ರಾಜಪರಂಪರೆಯ ದ್ಯೋತಕವಾದ ವಿಜಯದಶಮಿ ಮೆರವಣಿಗೆಯನ್ನು ಪ್ರಜಾಪ್ರಭುತ್ವದ ನಂತರ ಆಳುವ ಸರ್ಕಾರ ನಾಡಹಬ್ಬವಾಗಿ ಆಚರಿಸುತ್ತಾ ಬಂದ ನಂತರ ಪ್ರತಿ ವರ್ಷ ಸಮಾಜದ ಬೇರೆ ಬೇರೆ ಕ್ಷೇತ್ರದ ಸಾಧಕರೊಬ್ಬರಿಂದ ದಸರಾ ಮಹೋತ್ಸವಕ್ಕೆ ಚಾಲನೆ ಕೊಡಿಸುವುದು ವಾಡಿಕೆಯಾಗಿ ಬೆಳೆದು ಬಂದಿದೆ.

ದಶಮಿಯ ಮೊದಲ ದಿನ ನಾಡದೇವತೆ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿ, ಬಳಿಕ ಬೆಳ್ಳಿಯ ರಥದಲ್ಲಿ ಪ್ರತಿಷ್ಠಾಪಿಸಲಾಗಿರುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ, ಜ್ಯೋತಿ ಬೆಳೆಗಿಸುವ ಮೂಲಕ ಪ್ರತಿ ವರ್ಷ ದಸರೆಗೆ ಚಾಲನೆ ಕೊಡಲಾಗುತ್ತದೆ.

ಈ ಹಿಂದೆಲ್ಲಾ ಚಾಮುಂಡಿಬೆಟ್ಟದಲ್ಲಿನ ದಸರಾ ಉದ್ಘಾಟನಾ ಸಮಾರಂಭಕ್ಕೆ ಸರ್ಕಾರ ಆಯ್ಕೆ ಮಾಡಿದ ಗಣ್ಯರು, ಮಂತ್ರಿಗಳು, ಶಾಸಕರೊಂದಿಗೆ ದಸರೆಗೆ ಚಾಲನೆ ಕೊಡುತ್ತಿದ್ದರು. ಮುಖ್ಯಮಂತ್ರಿಯವರು ಜಂಬೂಸವಾರಿಯ ದಿನ ಆಗಮಿಸಿ ಚಿನ್ನದ ಅಂಬಾರಿಯಲ್ಲಿ ಆನೆ ಹೊತ್ತು ತರುವ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುತ್ತಿದ್ದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಚಾಮುಂಡಿಬೆಟ್ಟದಲ್ಲಿನ ದಸರಾ ಉದ್ಘಾಟನಾ ಸಮಾರಂಭಕ್ಕೂ ಆಗಮಿಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.  ಹೀಗಾಗಿ ಅವರ ನಂತರ ಎಲ್ಲಾ ಮುಖ್ಯಮಂತ್ರಿಗಳೂ ದಸರಾ ಉದ್ಘಾಟನಾ ಸಮಾರಂಭಕ್ಕೆ ಬರ ತೊಡಗಿದ್ದಾರೆ.

2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾಗಿ ಮೈಸೂರಿನವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ದಸರೆ ಆಯೋಜನೆ ಬಗ್ಗೆ ಹೆಚ್ಚಿನ ಆಸ್ಥೆವಹಿಸಿ ಅನುದಾನ ಬಿಡುಗಡೆ ಮಾಡಿದ್ದರು.

ಪಟ್ಟು ಬಿಡದ ಕಾರ್ನಾಡ್‌: ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಎರಡನೇ ವರ್ಷ 2014ರ ದಸರಾ ಮಹೋತ್ಸವ ಸಿದ್ಧತೆ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ದಸರಾ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಸಂಸದ ಪ್ರತಾಪ್‌ ಸಿಂಹ, ಮೈಸೂರಿನವರೇ ಆದ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಅವರನ್ನು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡುವಂತೆ ಒತ್ತಾಯ ಮಾಡಿದ್ದರು.

ಬಿಜೆಪಿಯ ವಿರೋಧದ ನಡುವೆ ದಸರಾ ಉದ್ಘಾಟನೆಗೆ ನಾಟಕಕಾರ ಡಾ.ಗಿರೀಶ್‌ ಕಾರ್ನಾಡರನ್ನು ಸರ್ಕಾರ ಆಯ್ಕೆ ಮಾಡಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲೂ ವಿರೋಧ ವ್ಯಕ್ತವಾಗಿ ಅಲ್ಲಲ್ಲಿ ಪ್ರತಿಭಟನೆಗಳೂ ನಡೆದಿದ್ದವು. ಆದರೂ ಪಟ್ಟು ಬಿಡದ ಸರ್ಕಾರ ಗಿರೀಶ್‌ ಕಾರ್ನಾಡರಿಗೆ ದಸರಾ ಉದ್ಘಾಟನೆಗೆ ಆಗಮಿಸುವಂತೆ ಆಮಂತ್ರಣ ನೀಡಿತ್ತು.

ಆಗಮಿಕರಿಂದ ಸನ್ಮಾನ: ಸರ್ಕಾರದ ಆಮಂತ್ರಣವನ್ನು ಒಪ್ಪಿ ಮೈಸೂರಿಗೆ ಆಗಮಿಸಿದ ಗಿರೀಶ್‌ ಕಾರ್ನಾಡರು, ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಹಣೆಗೆ ಕುಂಕಮವಿಟ್ಟುಕೊಂಡು, ದೇವಿಯ ದರ್ಶನ ಪಡೆದು, ಆಗಮಿಕರಿಂದ ಸನ್ಮಾನ ಸ್ವೀಕರಿಸಿ, ಸಭಾ ಕಾರ್ಯಕ್ರಮದ ವೇದಿಕೆಗೆ ಬಂದು ಬೆಳ್ಳಿಯ ರಥದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ದಸರೆಗೆ ವಿಧ್ಯುಕ್ತ ಚಾಲನೆ ನೀಡುವ ಮೂಲಕ ವಿರೋಧಿಗಳ ಬಾಯಿ ಮುಚ್ಚಿಸಿದ್ದರು.

ಮೂಗಿಗೆ ನಳಿಕೆ ಸಿಕ್ಕಿಸಿಕೊಂಡೇ ನಾಟಕಕೋತ್ಸವ ಉದ್ಘಾಟನೆ!: ಮೈಸೂರಿನ ರಂಗಾಯಣದೊಂದಿಗೂ ಅವಿನಾಭಾವ ಸಂಬಂಧ ಹೊಂದಿದ್ದ ಗಿರೀಶ್‌ ಕಾರ್ನಾಡರು 2018ರ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ವೇಳೆ ಅನಾರೋಗ್ಯ ಪೀಡಿತರಾಗಿದ್ದರೂ ಆಮ್ಲಜನಕದ ನಳಿಕೆಯನ್ನು ಮೂಗಿನಲ್ಲಿ ಸಿಕ್ಕಿಸಿಕೊಂಡೇ ರಂಗಾಯಣದ ಅಂಗಳದಲ್ಲಿ ಅಡ್ಡಾಡಿ ಬಹುರೂಪಿ ನಾಟಕೋತ್ಸವವನ್ನು ಉದ್ಘಾಟಿಸಿ ಕೊಟ್ಟು ಹೋಗಿದ್ದರು.

* ಗಿರೀಶ್‌ ಹುಣಸೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ