ಕೆಆರ್‌ಎಸ್‌, ಕಬಿನಿ ತುಂಬಿದ್ರೂ ನೀರಿನ ಸಮಸ್ಯೆ ನೀಗಿಲ್ಲ

Team Udayavani, Oct 23, 2019, 3:00 AM IST

ಮೈಸೂರು: ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯ ಭರ್ತಿಯಾಗಿದ್ದರೂ, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ ಎಂದು ಪಾಲಿಕೆಯ ಎಲ್ಲಾ ಸದಸ್ಯರು ಪಕ್ಷಾತೀತವಾಗಿ ಮೇಯರ್‌ ಮತ್ತು ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಗುಂಡಿ ಬಿದ್ದ ರಸ್ತೆಗಳು ಹಾಗೂ ಟೆಂಡರ್‌ ಪ್ರಕ್ರಿಯೆಗೆ ತಡೆಯೊಡ್ಡಿದ ಸಮಸ್ಯೆಗಳ ಕುರಿತು ಎಲ್ಲಾ ಸದಸ್ಯರು ಮೇಯರ್‌ ಪುಷ್ಪಲತಾ ಹಾಗೂ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.

ಬಿಂದಿಗೆ ಹಿಡಿದು ಪ್ರತಿಭಟನೆ: ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಯ ಪಾಲಿಕೆ ಆಡಳಿತಾವಧಿಯ ಕೊನೆಯ ಕೌನ್ಸಿಲ್‌ ಸಭೆಯಲ್ಲಿ ಮೇಯರ್‌ ಪುಷ್ಪಲತಾ ಕಾರ್ಯಸೂಚಿ ಮಂಡಿಸಲು ಸೂಚಿಸಿದರು. ತಕ್ಷಣ ಎದ್ದುನಿಂತ ಪಕ್ಷೇತರ ಸದಸ್ಯ ಮಾ.ವಿ. ರಾಮಪ್ರಸಾದ್‌ ನೀರಿನ ಸಮಸ್ಯೆ ಬಗ್ಗೆ ಗಮನ ಸೆಳೆಯಲು ವೇಷ ಧರಿಸಿ, ಬಿಂದಿಗೆಯೊಂದಿಗೆ ಆಗಮಿಸಿ ಸದನದ ಬಾವಿಯೊಳಗೆ ನಿಂತು ಪ್ರತಿಭಟಿಸಿದರು. ಬಳಿಕ ಮಾತನಾಡಿದ ಅವರು, ನೀರಿನ ಸಮಸ್ಯೆ ಬಗ್ಗೆ ವಾಣಿವಿಲಾಸ ನೀರು ಸರಬರಾಜು ಅಧಿಕಾರಿಗಳಾಗಲಿ, ಆಯುಕ್ತರಾಗಲಿ ಗಮನ ನೀಡುತ್ತಿಲ್ಲ ಎಂದು ದೂರಿದರು.

ಇವರ ಮಾತಿಗೆ ಬೆಂಬಲಿಸಿದ ಆಡಳಿತ ಪಕ್ಷದ ನಾಯಕಿ ಶಾಂತಕುಮಾರಿ, ಜೆಡಿಎಸ್‌ನ ಪ್ರೇಮಾ, ವಿಪಕ್ಷ ನಾಯಕ ಬಿ.ವಿ. ಮಂಜುನಾಥ್‌, ಜೆ. ಗೋಪಿ ಮತ್ತಿತರರು ನೀರಿನ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವಂತೆ ಆಗ್ರಹಿಸಿದರು. ಸದಸ್ಯ ಅಯೂಬ್‌ ಖಾನ್‌ “ಮೇಯರ್‌ ನೀಡಿದ ಸೂಚನೆ ಪಾಲಿಸದ ಅಧಿಕಾರಿಗಳು ಏಕಿರಬೇಕು ಅಥವಾ ಮೇಯರ್‌ ತಮ್ಮ ಕೆಲಸ ಮಾಡದಿದ್ದಲ್ಲಿ ಆ ಪೀಠದಲ್ಲಿ ಯಾಕಿದ್ದೀರಿ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಎಂಜಿನಿಯರ್‌ ನಾಗರಾಜಮೂರ್ತಿ, ಕಬಿನಿಯಿಂದ 60 ಎಂಎಲ್‌ಡಿ ನೀರನ್ನಷ್ಟೇ ತರಲು ಸಾಧ್ಯವಿದೆ. ಆದರೆ ನಾವು 64 ಎಂಎಲ್‌ಡಿ ತರುತ್ತಿದ್ದೇವೆ. ಹೊಂಗಳ್ಳಿ, ಇಂಡುವಾಳುವಿನಿಂದಲೂ ನೀರು ಪೂರೈಕೆಯಾಗುತ್ತಿದ್ದು, ಕೆಪಿಟಿಸಿಎಲ್‌ ಅಡಚಣೆಯಿಂದ ತೊಂದರೆಯಾಗಿದೆ. ಆದಷ್ಟು ಬೇಗ ಪರಿಹರಿಸಲಾಗುವುದು ಎಂದರು. ಬಳಿಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರತ್ಯೇಕವಾಗಿ ಅಕ್ಟೋಬರ್‌ 23ರಂದು ಬುಧವಾರ ಸಭೆ ನಡೆಸಲು ಮೇಯರ್‌ ತೀರ್ಮಾನಿಸಿದರು.

ಆನ್‌ಲೈನ್‌ ಅಳವಡಿಸುವಲ್ಲಿ ವೈಫ‌ಲ್ಯ: ಸದಸ್ಯ ಆರೀಫ್ ಹುಸೇನ್‌ ಮಾತನಾಡಿ, ನೀರಿನ ಕರ ಸಂಗ್ರಹ, ಆಸ್ತಿ ತೆರಿಗೆ, ಬಾಡಿಗೆ, ವ್ಯಾಪಾರ ಮತ್ತು ವಾಣಿಜ್ಯ ಪರವಾನಗಿಗೆ ಸಂಬಂಧಿಸಿದ ಕೆಲಸಗಳನ್ನು ಆನ್‌ಲೈನ್‌ ಮೂಲಕ ಮಾಡಲು ಹಿಂದಿನಿಂದಲೂ ಪಾಲಿಕೆಗೆ ಒತ್ತಾಯಿಸಲಾಗುತ್ತಿದೆ. ಆದರೆ, ಈವರೆಗೆ ಆ ಪ್ರಯತ್ನ ಮಾಡಿಲ್ಲ. ಮೊನ್ನೆ ರಚನೆಯಾದ ತುಮಕೂರು ಪಾಲಿಕೆಯು ಆನ್‌ಲೈನ್‌ ವ್ಯವಸ್ಥೆ ಮಾಡಿದೆ. ಹಳೆಯದಾದ ಮೈಸೂರು ಪಾಲಿಕೆ ಇನ್ನೂ ಯಾಕೆ ಆನ್‌ಲೈನ್‌ ವ್ಯವಸ್ಥೆಗೆ ಒಳಪಡಿಸಿಕೊಂಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಡಿಮೆ ಅನುದಾನಕ್ಕೆ ಆಕ್ರೋಶ: ಈ ಹಿಂದಿನ ಎಲ್ಲಾ ಮೇಯರ್‌ಗಳು ಪ್ರತಿ ವಾರ್ಡ್‌ಗಳಿಗೂ ಒಂದು ಕೋಟಿ ಅನುದಾನ ನೀಡುತ್ತಿದ್ದರು. ಆದರೆ ಈಗಿರುವ ಮೇಯರ್‌ ಕೇವಲ 35 ಲಕ್ಷ ರೂ. ನೀಡಿದ್ದಾರೆ. ಇಷ್ಟು ಹಣದಲ್ಲಿ ನಮ್ಮ ವಾರ್ಡ್‌ಗಳಲ್ಲಿ ಯಾವ ಕೆಲಸ ಮಾಡಿಸಲು ಸಾಧ್ಯ ಎಂದು ಬಿಜೆಪಿ ಸದಸ್ಯ ರಮೇಶ್‌ ಪ್ರಶ್ನಿಸಿದರು. ಇದಕ್ಕೆ ದ‌ನಿಗೂಡಿಸಿದ ಎಲ್ಲಾ ಸದಸ್ಯರು ಕಡಿಮೆ ಅನುದಾನ ನೀಡಿದ ಮೇಯರ್‌ ಎಂಬ ಅಪಕೀರ್ತಿಗೆ ಒಳಗಾಗದೇ ಎಲ್ಲಾ ವಾರ್ಡ್‌ಗಳಿಗೂ 85 ಲಕ್ಷ ರೂ. ನೀಡುವಂತೆ ಆಗ್ರಹಿಸಿದರು. ಈ ಸಂದರ್ಭ ಮಾತನಾಡಿದ ಆಯುಕ್ತ ಗುರುದತ್‌ ಹೆಗಡೆ, ಪಾಲಿಕೆ ಈಗಾಗಲೇ 140ರಿಂದ 150 ಕೋಟಿ ರೂ. ಸಾಲದಲ್ಲಿದೆ. ಸಂಪನ್ಮೂಲ ಕೊರತೆಯಿಂದ ಅನುದಾನ ನೀಡಲು ವಿಳಂಬವಾಗಿದೆ ಎಂದು ಉತ್ತರಿಸಿದರು.

ಖಾಲಿ ನಿವೇಶನಕ್ಕೆ ದರ ನಿಗದಿ: ಖಾಲಿ ನಿವೇಶನ ಸ್ವತ್ಛತೆಗೆ ನಗರಪಾಲಿಕೆ ನಿಗದಿ ಪಡಿಸಿದ್ದ ನಿರ್ವಹಣಾ ದರವನ್ನು ಪರಿಷ್ಕರಿಸಲಾಯಿತು. ನಗರಪಾಲಿಕೆಯಲ್ಲಿ ಇರುವ ಖಾಲಿ ನಿವೇಶನದಲ್ಲಿ ಬೆಳೆದಿದ್ದ ಗಿಡಗಳನ್ನು ತೆಗೆದು ಸ್ವತ್ಛಗೊಳಿಸುವ ವಿಷಯ ಸಭೆಯಲ್ಲಿ ಪ್ರಸ್ತಾಪವಾಗುತ್ತಿದ್ದಂತೆಯೇ ಆಡಳಿತ ಪಕ್ಷ ಕಾಂಗ್ರೆಸ್‌ ಸದಸ್ಯರಿಂದಲೇ ಪ್ರತಿ ಅಡಿಗೆ 2 ರೂ. ನಿಗದಿ ಪಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

30*40ಕ್ಕಿಂತ ಕಡಿಮೆ ಅಳತೆ ನಿವೇಶನ ಹೊಂದಿರುವವರು ಬಡವರಾಗಿದ್ದು, ಅವರಿಗೂ ಕಂದಾಯದ ಜೊತೆಗೆ ಪ್ರತಿ ಅಡಿಗೆ 2 ರೂ. ನಿರ್ವಹಣಾ ವೆಚ್ಚ ಭರಿಸಿದರೆ ಕಟ್ಟಲು ಕಷ್ಟವಾಗುತ್ತದೆ. ಆದ್ದರಿಂದ ಅವರಿಗೆ ಚದರ ಅಡಿಗೆ 1 ರೂ. ನಿಗದಿ ಪಡಿಸಬೇಕು ಎಂದು ಕಾಂಗ್ರೆಸ್‌ನ ಅರೀಫ್ ಹುಸೇನ್‌, ಅಯೂಬ್‌ಖಾನ್‌, ಪಕ್ಷೇತರ ಸದಸ್ಯ ಕೆ.ವಿ.ಶ್ರೀಧರ್‌, ಜೆಡಿಎಸ್‌ನ ಎಸ್‌ಬಿ.ಎಂ. ಮಂಜು ಒತ್ತಾಯಿಸಿದರು.

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ನಿವೇಶನ ಸ್ವತ್ಛಗೊಳಿಸದಿದ್ದರೆ ಪರಿಸರ ಹಾಳಾಗುತ್ತದೆ. ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಹೆಚ್ಚು ದರ ನಿಗದಿ ಪಡಿಸಿದರೆ ನಿವೇಶನ ಮಾಲೀಕರೇ ಸ್ವತ್ಛತೆಗೆ ಮುಂದಾಗುತ್ತಾರೆ. ಕಡಿಮೆ ದರ ನಿಗದಿ ಪಡಿಸಿದರೆ ಪಾಲಿಕೆಗೂ ಹೊರೆಯಾಗುತ್ತದೆ ಎಂದು ಸಮರ್ಥಿಸಿಕೊಂಡರು.

ಈ ಸಮಯದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ಕಾವೇರಿದ ಚರ್ಚೆಯ ಬಳಿಕ 30*40 ಅಳತೆಗಿಂತ ಕಡಿಮೆ ಇರುವ ನಿವೇಶನಕ್ಕೆ ಚದರ ಅಡಿಗೆ ಒಂದು ರೂ., 30*40 ಹಾಗೂ ಅದಕ್ಕಿಂತ ಹೆಚ್ಚಿನ ಅಳತೆಗೆ ಚದರ ಅಡಿಗೆ 2 ರೂ. ನಿಗದಿ ಪಡಿಸಲಾಗಿದೆ. ಅಲ್ಲದೇ ವರ್ಷದಲ್ಲಿ ಮೂರು ಬಾರಿ ಸ್ವತ್ಛತೆ ಕೈಗೊಳ್ಳಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಉಪ ಮೇಯರ್‌ ಶಫಿ ಅಹಮ್ಮದ್‌ ಇದ್ದರು.

ಪ್ರತಿ ವಾರ್ಡ್‌ಗೂ 50 ಲಕ್ಷ ರೂ.: ಪಾಲಿಕೆಯ ಪ್ರತಿ ವಾರ್ಡ್‌ಗೆ ತಲಾ 50 ಲಕ್ಷ ರೂ. ಹೆಚ್ಚುವರಿ ಅನುದಾನ ನಿಗದಿ ಪಡಿಸಿ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಈ ಹಿಂದೆ ತಲಾ 35 ಲಕ್ಷ ರೂ. ಅನುದಾನ ನೀಡಿದ್ದು, ಇದರಿಂದ ವಾರ್ಡ್‌ನ ಯಾವುದೇ ಅಭಿವೃದ್ಧಿ ಮಾಡಲು ಸಾಧ್ಯಾಗಿಲ್ಲ. ಹಾಗಾಗಿ ಇನ್ನು 85 ಲಕ್ಷ ರೂ. ನೀಡಬೇಕು ಎಂದು ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಸಭೆಯಲ್ಲಿ ಮೇಯರ್‌ ಹಾಗೂ ಆಯುಕ್ತರನ್ನು ಒತ್ತಾಯಿಸಿದರು. ಸುದೀರ್ಘ‌ ಚರ್ಚೆಯ ಬಳಿಕ 50 ಲಕ್ಷ ರೂ. ನಿಗದಿ ಪಡಿಸಿ ನಿರ್ಣಯ ಕೈಗೊಳ್ಳಲಾಯಿತು.

ಟೆಂಡರ್‌ ಕರೆಯುವಲ್ಲಿ ತಾರತಮ್ಯ: ಪಾಲಿಕೆಯ ಹಿಂದಿನ ಆಯುಕ್ತೆ ಶಿಲ್ಪಾನಾಗ್‌ ಕರೆದಿದ್ದ ಟೆಂಡರ್‌ಗಳಿಗೆ ಈಗಿನ ಆಯುಕ್ತ ಗುರುದತ್‌ ಹೆಗಡೆ ತಡೆಯೊಡ್ಡಿದ್ದಾರೆ ಎಂದು ಆರೋಪಿಸಿ ಎಲ್ಲಾ ಸದಸ್ಯರೂ ಸದನದ ಬಾವಿಗಿಳಿದು ಪ್ರತಿಭಟಿಸಿದರು. ಬಳಿಕ ಮೇಯರ್‌ ಮುಂದೆ ನಿಂತು ಪ್ರತಿಭಟಿಸಿದ ಬಿಜೆಪಿ ಸದಸ್ಯರು “ಪಾಲಿಕೆ ಆಯುಕ್ತರು ಬಂದು 3 ತಿಂಗಳಾದರೂ ಇನ್ನೂ ಕೆಲಸ ಆರಂಭಿಸಿಲ್ಲ. ಟೆಂಡರ್‌ ಪ್ರಕ್ರಿಯೆಗೆ ಹಿಂದಿನ ಆಯುಕ್ತರು ಚಾಲನೆ ನೀಡಿದ್ದರೂ ಇವರು ತಡೆಯೊಡ್ಡುತ್ತಿದ್ದಾರೆ. ಯಾವುದೇ ಕಾಮಗಾರಿಗಳಿಗೆ ಹಣ ಬಿಡುಗಡೆಯಾತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಪ್ರತಿಕ್ರಿಯಿಸಿದ ಆಯುಕ್ತ ಗುರುದತ್‌ ಹೆಗಡೆ, ನಾನು ಯಾವುದೇ ಟೆಂಡರ್‌ಗೆ ತಡೆ ನೀಡಿಲ್ಲ. ತಪ್ಪು ಮಾಹಿತಿ ಬಂದಿದೆ. ಸದ್ಯದಲ್ಲಿಯೇ ಎಲ್ಲಾ ಟೆಂಡರ್‌ಗೂ ಚಾಲನೆ ನೀಡಲಾಗುವುದು ಎಂದರು.

ದೀಪಾಲಂಕಾರ ತೋರಿಸಿ ಬೀಳಿಸಿದ್ದೀರಿ: ದಸರೆಗೂ ಮುನ್ನ ರಸ್ತೆ ಗುಂಡಿ ಮುಚ್ಚಲು ಆದೇಶಿಸಿದ್ದರೂ ಇದುವರೆಗೆ ಕ್ರಮ ಕೈಗೊಂಡಿಲ್ಲ. 60 ಕಿ.ಮೀ. ರಸ್ತೆಗೆ ದೀಪಾಲಂಕಾರ ಮಾಡಿದ್ದೇವೆಂದು ಜನರಿಗೆ ಆಕಾಶ ತೋರಿಸಿ, ರಸ್ತೆ ಗುಂಡಿಬಿದ್ದಿದ್ದರೂ ಜನರೂ ಬೀಳುವಂತೆ ಮಾಡಿದ್ದೀರಿ ಎಂದು ಮಾಜಿ ಮೇಯರ್‌ ಅಯೂಬ್‌ಖಾನ್‌ ಕಾಲೆಳೆದರು. ಅದಕ್ಕೆ ಉತ್ತರಿಸಿದ ಆಯುಕ್ತ ಗುರುದತ್‌ ಹೆಗಡೆ, ಮಳೆಗಾಲವಾದ್ದರಿಂದ ರಸ್ತೆ ಗುಂಡಿ ಮುಚ್ಚವ ಕಾಮಗಾರಿ ಗುಣಟ್ಟದಿಂದ ಕೂಡಿರುವುದಿಲ್ಲ. ಹಾಗಾಗಿ ಮಳೆಗಾಲ ಮುಗಿಯುತ್ತಿದ್ದಂತೆ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ