ಎಡ-ಬಲ ಬಿಟ್ಟು ಮಧ್ಯಮ ಮಾರ್ಗದಲ್ಲಿ ನಡೆಯೋಣ

Team Udayavani, Jul 14, 2019, 3:00 AM IST

ಮೈಸೂರು: ಎಡ-ಬಲ ಎಲ್ಲವನ್ನು ಬಿಟ್ಟು ಮಧ್ಯಮ ಮಾರ್ಗದ ಧೋರಣೆಯೊಂದಿಗೆ ಬದುಕನ್ನು ನಡೆಸಿಕೊಂಡು ಹೋಗಬೇಕಿದೆ ಎಂದು ಚಲನಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣ ಹೇಳಿದರು.

ಮೈಸೂರು ಲಿಟರರಿ ಫೋರಂ ಚಾರಿಟಬಲ್‌ ಟ್ರಸ್ಟ್‌ ಮತ್ತು ಮೈಸೂರು ಬುಕ್‌ ಕ್ಲಬ್‌ ನಗರದ ಸದರನ್‌ ಸ್ಟಾರ್‌ ಹೋಟೆಲ್‌ನಲ್ಲಿ ಆಯೋಜಿಸಿರುವ ಎರಡು ದಿನಗಳ ಮೈಸೂರು ಸಾಹಿತ್ಯ ಸಂಭ್ರಮ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಹೃದಯವಂತಿಕೆ: ಸಾಹಿತಿಗಳು ಬುದ್ಧಿವಂತರಾಗುವುದಕ್ಕಿಂತ ಹೃದಯವಂತರಾಗುವುದು ಮುಖ್ಯ. ಮನುಷ್ಯನ ಬುದ್ಧಿ ಬಹಳಷ್ಟು ಕಸರತ್ತು, ಲೆಕ್ಕಾಚಾರ ಮಾಡುತ್ತದೆ. ಆದರೆ, ಹೃದಯ ಬಹಳ ಬೇಗ ಮನುಷ್ಯನನ್ನು ಮನುಷ್ಯನ ಹಾಗೆ ಕಾಣುತ್ತದೆ. ಹೀಗಾಗಿ ಬುದ್ದಿವಂತರಾಗುವುದಕ್ಕಿಂತ ಹೃದಯವಂತರಾಗಬೇಕಿದೆ ಎಂದು ತಿಳಿಸಿದರು.

ನಮ್ಮ ಭಾಷೆ, ಜನ, ಸಂಸ್ಕೃತಿಯ ಬಗ್ಗೆ ಹೇಳಿಕೊಳ್ಳುವಾಗ ನಮಗೆ ಹೆಮ್ಮೆ ಎನಿಸುತ್ತದೆ. ಆ ಹೆಮ್ಮೆಯಲ್ಲಿ ಪರರ ವಿಚಾರಗಳನ್ನೂ ನಮ್ಮದಾಗಿಸಿಕೊಂಡು ಸಾಗಿರುವುದು ವಿಶೇಷ. ನಮ್ಮ ಸಂಸ್ಕೃತಿಯೇ ಅದನ್ನು ಕಲಿಸಿಕೊಟ್ಟಿದೆ ಎಂದು ಹೇಳಿದರು.

ಅರಿವು ಮೂಡಿಸಿ: ಸಾಹಿತಿಗಳು ಮತ್ತು ಸಾಹಿತ್ಯದಲ್ಲಿ ಇತ್ತೀಚಿನ ದಿನಗಳಲ್ಲಿರುವ ಕ್ಷೊàಭೆ ಗಮನಿಸಿದಾಗ ಇಂತಹ ಸಾಹಿತ್ಯ ಸಂಭ್ರಮಗಳು ಯಾವ ರೀತಿಯ ಜವಾಬ್ದಾರಿ ಹೊತ್ತುಕೊಳ್ಳುತ್ತವೆ ಎಂಬುದನ್ನು ನೋಡಬೇಕಾಗುತ್ತದೆ. ಇಂತಹ ಕಾರ್ಯಕ್ರಮವು ತನ್ನ ಇರುವಿಕೆಯ ಜೊತೆಗೆ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಚಾಲನೆ: ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಆರಂಭಿಸಲಾಗಿರುವ ಎನೇಬಲ್‌ ಹರ್‌ ಯೋಜನೆಗೆ ಚಾಲನೆ ನೀಡಿದ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಮಾತನಾಡಿ, ಮೈಸೂರು ಲಿಟರರಿ ಫೋರಂ ಚಾರಿಟಬಲ್‌ ಟ್ರಸ್ಟ್‌ ಸಾಹಿತ್ಯ ಸಂಭ್ರಮವನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿರುವುದು ಸಂತಸದ ವಿಷಯ.

ಒಂದು ಸಂಸ್ಥೆ ಅಥವಾ ಸಂಘಟನೆಯ ಯಶಸ್ಸಿಗೆ ದೂರದೃಷ್ಟಿತ್ವ, ಮುಂದಾಲೋಚನೆ, ಕಠಿಣ ಪರಿಶ್ರಮ ಮತ್ತು ಒಗ್ಗಟ್ಟು ಮುಖ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಲೇಖಕ ಡಾ.ದೇವದತ್ತ ಪಟ್ನಾಯಕ್‌ ದಿಕ್ಸೂಚಿ ಭಾಷಣ ಮಾಡಿದರು. ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌, ಉದ್ಯಮಿ ಆರ್‌. ಗುರು ಮತ್ತಿತರರು ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ