ಸಾಲು ಸಾಲು ರಜೆ; ಶ್ರೀಕಂಠನ ಸನ್ನಿಧಿಯಲ್ಲಿ ಭಕ್ತಸಾಗರ

Team Udayavani, Apr 20, 2019, 3:00 AM IST

ನಂಜನಗೂಡು: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಭಕ್ತಸಾಗರವೇ ಹರಿದು ಬಂದಿತ್ತು. ಶುಕ್ರವಾರ ಹುಣ್ಣಿಮೆ ದಿನವಾಗಿದ್ದು, ಸಹಸ್ರಾರು ಮಂದಿ ದೇವರ ದರ್ಶನ ಪಡೆದು ಧನ್ಯತೆ ಮೆರೆದರು.

ಬುಧವಾರ ಮಹಾವೀರ ಜಯಂತಿ, ಗುರುವಾರ ಮತದಾನ ಪ್ರಯುಕ್ತ ಸಾರ್ವತ್ರಿಕ ರಜೆ, ಶುಕ್ರವಾರ ಗುಡ್‌ಫ್ರೈಡೆ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ದೊರೆತ್ತಿತ್ತು. ಈ ಪ್ರಯುಕ್ತ ಪ್ರವಾಸಿ ತಾಣಗಳು, ದೇವಾಲಯಗಳಲ್ಲಿ ಪ್ರವಾಸಿಗರು ಸಂಖ್ಯೆ ಹೆಚ್ಚಾಗಿತ್ತು.

ಶುಕ್ರವಾರ ಹುಣ್ಣಿಮೆ ಪ್ರಯುಕ್ತ ಶ್ರೀ ಕಂಠೇಶ್ವರನ ಸನ್ನಿಧಿಯಲ್ಲಿ ಚಿಕ್ಕ ಜಾತ್ರೆಗಿಂತಲೂ ಹೆಚ್ಚು ಭಕ್ತರು ಸೇರಿದ್ದರು. ಗುರುವಾರ ಸಂಜೆಯಿಂದಲೇ ಇಲ್ಲಿನ ದೇವಾಲಯದಲ್ಲಿ ಭಕ್ತರ ಸಂಖ್ಯೆ ಹೆಚ್ಚತೊಡಗಿದ್ದು, ಶುಕ್ರವಾರ ಬೆಳಗಿನ ಜಾವದಿಂದಲೇ ಭಕ್ತರು ಕಪಿಲೆ ನದಿಯಲ್ಲಿ ಮಿಂದೆದ್ದು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಸುಮಾರು 50 ಸಾವಿರ ಭಕ್ತರು ದೇಗುಲಕ್ಕೆ ಆಗಮಿಸಿದ್ದರು.

ದೇವಾಲಯದಲ್ಲಿ ವಿಶೇಷ ದರ್ಶನಕ್ಕೆ 100 ರೂ.ನಿಗದಿಪಡಿಸಲಾಗಿತ್ತು. 100 ರೂ. ಹಾಗೂ 50 ರೂ. ವಿಶೇಷ ದರದಲ್ಲಿ ಸಹಸ್ರಾರು ಮಂದಿ ದರ್ಶನ ಪಡೆದರು. ಈ ಮೊತ್ತವೇ ಶುಕ್ರವಾರ ಸಂಜೆ ವೇಳೆಗೆ ಸುಮಾರು 10 ಲಕ್ಷ ರೂ. ದಾಟಿತ್ತು. ಸಂಜೆಯಾದರೂ ಸರತಿಯ ಸಾಲು ಮುಂದುವರಿದಿತ್ತು. ಭಕ್ತರು ಮುಡಿ ಸೇವೆ ಸೇರಿದಂತೆ ವಿವಿಧ ಹರಕೆ ತೀರಿಸಿ ಧನ್ಯತೆ ಮೆರೆದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ