ಮೇಕೆದಾಟು ಯೋಜನೆ: ತಮಿಳುನಾಡು ಕ್ಯಾತೆಗೆ ಬಿಜೆಪಿಯೇ ಕುಮ್ಮಕ್ಕು
ಸದಸ್ಯತ್ವ ನೋಂದಣಿ ಅಭಿಯಾನ; ಜನಾಂದೋಲನ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರ ವಾಗ್ಧಾಳಿ
Team Udayavani, Jan 4, 2022, 6:20 AM IST
ಮೈಸೂರು: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಗೆ ಬಿಜೆಪಿ ಸರಕಾರ ತಡೆಯೊಡ್ಡುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕರು, ನಾವು ರಾಜಕಾರಣಕ್ಕಾಗಿ ಪಾದಯಾತ್ರೆ ಮಾಡುತ್ತಿಲ್ಲ. ಆದರೆ ನಮ್ಮ ಪಾದಯಾತ್ರೆಯಿಂದಾಗಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ನಡುಕ ಶುರುವಾಗಿದೆ ಎಂದು ಟೀಕಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಮೇಕೆದಾಟು ಯೋಜನೆಗಾಗಿ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಮೇಕೆದಾಟು ಯೋಜನೆ ಸಂಬಂಧ ಕ್ಯಾತೆ ತೆಗೆಯುತ್ತಿರುವ ತಮಿಳುನಾಡಿಗೆ ಬಿಜೆಪಿಯೇ ಕುಮ್ಮಕ್ಕು ನೀಡುತ್ತಿದೆ ಎಂದು ದೂರಿದರು.
ಜೆಡಿಎಸ್‌ನವರು ನಾವೇ ಇಲ್ಲಿಗೆ ವಾರಸುದಾರರು ಎಂದುಕೊಂಡಿದ್ದರು. ಆದರೆ ಮಂಡ್ಯ, ತುಮಕೂರು, ರಾಮನಗರದಲ್ಲಿ ಕಾಂಗ್ರೆಸ್ ಗೆದ್ದ ಮೇಲೆ ಜೆಡಿಎಸ್ ಬುಡ ಅÇÉಾಡುತ್ತಿದೆ. ಕುಮಾರಸ್ವಾಮಿಗೆ ಹತಾಶೆ ಶುರುವಾಗಿದೆ ಎಂದು ಲೇವಡಿ ಮಾಡಿದರು. ನಮ್ಮ ಹೋರಾಟ ಹೈಜಾಕ್ ಮಾಡಿದ್ದಾರೆಂಬ ಕುಮಾರಸ್ವಾಮಿ ಮಾತು ಸತ್ಯಕ್ಕೆ ದೂರ ಎಂದರು.
ಜೈಲಿಗೋಗಲು ಸಿದ್ಧರಾಗಿ: ಸಿದ್ದು
ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಹೋರಾಟಕ್ಕಿಳಿದಿದೆ. ಈ ಹೋರಾಟವನ್ನು ಯಾರಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ. ರಾಜ್ಯ ಸರಕಾರ ಶೀಘ್ರವೇ ಯೋಜನೆ ಪ್ರಾರಂಭ ಮಾಡದಿದ್ದರೆ, ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ. ನಮ್ಮ ಹೋರಾಟವನ್ನು ತಡೆಯಲು ಸರಕಾರ ಪ್ರಯತ್ನಿಸಿದರೆ ಜೈಲಿಗೆ ಹೋಗಲು ಸಿದ್ಧರಾಗಿರಿ ಎಂದು ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕರೆ ನೀಡಿದರು.
ಇದನ್ನೂ ಓದಿ:ಪ್ಯಾಂಗಾಂಗ್ ಸರೋವರಕ್ಕೆ ಸೇತುವೆ ನಿರ್ಮಿಸುತ್ತಿದೆ ಚೀನಾ! ಉಪಗ್ರಹ ಚಿತ್ರದಿಂದ ಸ್ಪಷ್ಟ
ಸರಕಾರದ ಪಿತೂರಿ: ಡಿಕೆಶಿ
ಕೋವಿಡ್ ಪ್ರಕರಣಗಳನ್ನು ಹೆಚ್ಚಾಗಿ ಸೃಷ್ಟಿಸಿ ಮೇಕೆದಾಟು ಪಾದಯಾತ್ರೆಯನ್ನು ತಡೆಯುವ ಬಹುದೊಡ್ಡ ಪಿತೂರಿಯನ್ನು ರಾಜ್ಯ ಸರಕಾರ ನಡೆಸಿದೆ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಲಾಕ್‌ಡೌನ್ ಪರಿಸ್ಥಿತಿಯಿದೆ ಎಂದು ಬಿಂಬಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ನಾವು ನಡೆಯುತ್ತೇವೆ. ನಮ್ಮ ನಡಿಗೆಯನ್ನು ತಡೆಯಲು ಸಾಧ್ಯವಿಲ್ಲ ಎಂದರು.