ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ; ಕೃಷಿ ಚುರುಕು

Team Udayavani, Apr 21, 2019, 3:00 AM IST

ಮೈಸೂರು: ಲೋಕಸಭಾ ಚುನಾವಣೆಯ ಕಾವು ಇಳಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಹರ್ಷ ಚಿತ್ತದಿಂದ ಜಮೀನಿನತ್ತ ಮುಖ ಮಾಡಿದ್ದು, ಕೃಷಿ ಚಟುವಟಿಕೆ ಚುರುಕುಗೊಳ್ಳುತ್ತಿದೆ.

ಅಲ್ಲಲ್ಲಿ ಮುಂಗಾರು ಪೂರ್ವ ಮಳೆ ಬಿದ್ದ ಪರಿಣಾಮ ಜಮೀನು ಹದಗೊಳಿಸಿ ದ್ವಿದಳ ಧಾನ್ಯಗಳಾದ ಹೆಸರು ಕಾಳು, ಉದ್ದು, ಅಲಸಂದೆ, ನೆಲಗಡಲೆ, ರಾಗಿ, ಹತ್ತಿ, ಮುಸುಕಿನ ಜೋಳ ಬಿತ್ತನೆಗೆ ಸಿದ್ಧತೆ ನಡೆಸಲಾಗಿದ್ದು, ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ವರ್ಜೀನಿಯಾ ತಂಬಾಕು ಸಸಿ ಮಡಿ ಮಾಡುವ, ಶುಂಠಿ ಮಡಿಯಲ್ಲಿ ಕಳೆ ಕೀಳುವ ಕಾಯಕದಲ್ಲಿ ರೈತರು ನಿರತರಾಗಿದ್ದಾರೆ.

ಪ್ರಸ್ತಕ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ 4.32 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಜಿಲ್ಲೆಯ ಏಳು ತಾಲೂಕುಗಳಲ್ಲೂ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಹೆಚ್ಚಾಗಿ ಬಿದ್ದು ಭೂಮಿ ಚೆನ್ನಾಗಿ ಹದಗೊಂಡಿರುವುದರಿಂದ ಹೆಚ್ಚಿನ ರೈತರು ಅಲಸಂದೆ, ಹೆಸರು ಕಾಳು, ಉದ್ದು ಮೊದಲಾದ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಲು ಸಿದ್ಧತೆ ನಡೆಸಿದ್ದರೆ, ಎಚ್‌.ಡಿ.ಕೋಟೆ ಹಾಗೂ ಪಿರಿಯಾಪಟ್ಟಣ ತಾಲೂಕುಗಳಲ್ಲಿ ಮುಸುಕಿನ ಜೋಳ, ಹೈಬ್ರಿಡ್‌ ಜೋಳ ಹಾಗೂ ಹತ್ತಿ ಬಿತ್ತನೆಗೆ ಭೂಮಿ ಹದಗೊಳಿಸಲಾಗುತ್ತಿದೆ.

ಇನ್ನು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ವರ್ಜೀನಿಯಾ ತಂಬಾಕು ಬೆಳೆಯಲಾಗುವ ಹುಣಸೂರು, ಪಿರಿಯಾಣಪಟ್ಟಣ ಹಾಗೂ ಎಚ್‌.ಡಿ.ಕೋಟೆ ತಾಲೂಕುಗಳಲ್ಲಿ ಸಸಿ ಮಡಿ ಹಾಗೂ ಟ್ರೇಗಳಲ್ಲಿ ತಂಬಾಕು ಸಸಿ ಬೆಳೆಸುವ ಕಾರ್ಯ ಪ್ರಗತಿಯಲ್ಲಿದೆ. ಹುಣಸೂರು, ಪಿರಿಯಾಪಟ್ಟಣ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ತಂಬಾಕು ಸಸಿ ನಾಟಿ ಮಾಡಲಾಗುತ್ತಿದೆ.

ಬಿತ್ತನೆ ಬೀಜಕ್ಕೆ ಪ್ರಸ್ತಾವನೆ: ಕೃಷಿ ಇಲಾಖೆ ವತಿಯಿಂದ ರೈತಸಂಪರ್ಕ ಕೇಂದ್ರಗಳ ಮೂಲಕ ಸಹಾಯಧನ ಯೋಜನೆಯಡಿ ನೀಡಲಾಗುವ ಬಿತ್ತನೆ ಬೀಜಗಳ ಸರಬರಾಜಿಗೆ ಈಗಾಗಲೇ ಕರ್ನಾಟಕ ರಾಜ್ಯ ಬೀಜ ನಿಗಮ ಹಾಗೂ ರಾಷ್ಟ್ರೀಯ ಬೀಜ ನಿಗಮಕ್ಕೂ ದ್ವಿದಳ ಧಾನ್ಯಗಳಾದ ಅಲಸಂದೆ, ಉದ್ದು, ನೆಲಗಡೆಲೆ, ರಾಗಿ, ಹೆಸರು, ತೊಗರಿ, ಹೈಬ್ರಿಡ್‌ ಜೋಳ, ಬಿತ್ತನೆ ಭತ್ತಕ್ಕೆ ಜಿಲ್ಲೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ.

ರಸಗೊಬ್ಬರ: ತಂಬಾಕು ಬೆಳೆಗೆ ಬೇಕಾದ ಎಸ್‌ಒಪಿ, ಅಮೋನಿಯಂ ಸಲ್ಫೆಟ್‌ ರಸಗೊಬ್ಬರವನ್ನು ತಂಬಾಕು ಮಂಡಳಿಯೇ ಬೆಳೆಗಾರರಿಗೆ ವಿತರಿಸುತ್ತದೆ. ಉಳಿದ ರೈತರಿಗೆ ಬೇಕಾದ ಯೂರಿಯಾ, ಡಿಎಪಿ, ಎಂಒಪಿ, ಕಾಂಪ್ಲೆಕ್ಸ್‌ ಗೊಬ್ಬರಗಳನ್ನು ಖಾಸಗಿ ಮಾರಾಟಗಾರರು ವಿವಿಧ ರಸಗೊಬ್ಬರ ತಯಾರಿಕಾ ಕಂಪನಿಗಳಿಂದ ತರಿಸಿಕೊಂಡು ರೈತರಿಗೆ ಮಾರಾಟ ಮಾಡುತ್ತಾರೆ. ಒಟ್ಟಾರೆ ಜಿಲ್ಲೆಗೆ ಖಾರೀಫ್ ಹಂಗಾಮಿಗೆ ಒಟ್ಟಾರೆ 94,000 ಟನ್‌ ರಸಗೊಬ್ಬರ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರೈತರು ಪ್ರಮಾಣೀಕರಿಸಿದ ಬಿತ್ತನೆ ಬೀಜಗಳನ್ನು ಅಧಿಕೃತ ಮಾರಾಟಗಾರರಿಂದಲೇ ಖರೀದಿಸಬೇಕು. ಬಿಸಿಲು ಹೆಚ್ಚಾಗಿರುವುದರಿಂದ ಹಸಿರು ಹುಲ್ಲಿನ ಅಭಾವ ಕಂಡುಬರುತ್ತದೆ. ಆದ್ದರಿಂದ ಹಗೇವಿನಲ್ಲಿ ರಸಮೇವನ್ನು ತಯಾರಿಸಿ ಮತ್ತು ಒಣಹುಲ್ಲು ಮತ್ತು ಬೆಳೆಯ ಉಳಿಕೆಗಳನ್ನು ದನಕರುಗಳಿಗೆ ಕೊಡಿ.

ಮಾವು ಬೆಳೆಯಲ್ಲಿ ಕಾಯಿ ಉದುರುವುದು ಕಂಡು ಬಂದಿದ್ದು, ಮಾವಿನ ಬೆಳೆ ಕಾಯಿಕಟ್ಟುವ ಹಂತದಲ್ಲಿ ರೈತರು ತಪ್ಪದೇ ನೀರುಣಿಸಬೇಕು. ನೀರಿನ ಅನುಕೂಲತೆ ಹೆಚ್ಚಿರುವ ರೈತರು ಕಾಯಿ ಕಟ್ಟುವ ಹಂತದಿಂದ ಮಾಗುವ ಹಂತದವರೆಗೆ ಪ್ರತಿ 15 ರಿಂದ 20ದಿನಗಳಿಗೊಮ್ಮೆ ಮಾವಿನ ಗಿಡಗಳಿಗೆ ನೀರುಣಿಸಬೇಕು ಎಂದು ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಅಧೀಕ್ಷಕ ಡಾ.ಪಿ.ಪ್ರಕಾಶ್‌ ಸಲಹೆ ನೀಡಿದ್ದಾರೆ.

ಈ ಬಾರಿ ಉತ್ತಮ ಮಳೆ: ಈ ಬಾರಿ ಮುಂಗಾರು ಮಾರುತಗಳು ಸಾಮಾನ್ಯ-ಉತ್ತಮ ಮಳೆ ಸುರಿಸಬಹುದಾಗಿದ್ದು, ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಶೇ. 96 ರಷ್ಟು ಮಳೆಯು ಮುಂಗಾರು ಹಂಗಾಮಿನಲ್ಲಿ ಬೀಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈಗಾಗಲೇ ಮಳೆ ಬಂದಿರುವ ಕಡೆ ರೈತರು ಇಳಿಜಾರಿಗೆ ಅಡ್ಡಲಾಗಿ ಮಾಗಿ ಉಳುಮೆ ಮಾಡಬೇಕು. ಇದರಿಂದ ಜಮೀನಿನಲ್ಲಿ ನೀರು ಇಂಗುವಿಕೆ ಹೆಚ್ಚಾಗುತ್ತದೆ ಮತ್ತು ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ. ಬೇಸಿಗೆ, ಮಾಗಿ ಉಳುಮೆ ಮಾಡುವುದರಿಂದ ಹುಳುಗಳ ವಿವಿಧ ಹಂತಗಳನ್ನು ನಾಶಪಡಿಸಬಹುದು ಮತ್ತು ಕಳೆಗಳನ್ನು ನಿಯಂತ್ರಿಸಬಹುದು.

ಪೂರ್ವ ಮುಂಗಾರಿಗೆ ರೈತರು ಬಿತ್ತನೆ ಬೀಜಗಳನ್ನು ಸಿದ್ಧತೆ ಮಾಡಿಕೊಂಡು, ನೀರು ಬರಿದಾಗಿರುವ ಕೆರೆಗಳಲ್ಲಿನ ಗೋಡು ಮಣ್ಣನ್ನು ತಂದು ಜಮೀನಿಗೆ ಸೇರಿಸುವುದರಿಂದ ಭೂಮಿಯ ಫ‌ಲವತ್ತತೆಯನ್ನು ಹೆಚ್ಚಿಸಬಹುದು ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಈ ಬಾರಿ ಮುಂಗಾರು ಮಾರುತಗಳು ಸಾಮಾನ್ಯ-ಉತ್ತಮ ಮಳೆ ಸುರಿಸಬಹುದಾಗಿದ್ದು, ಜೂನ್‌ ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಶೇ. 96 ರಷ್ಟು ಮಳೆಯು ಮುಂಗಾರು ಹಂಗಾಮಿನಲ್ಲಿ ಬೀಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
-ಡಾ.ಪಿ.ಪ್ರಕಾಶ್‌, ಹಿರಿಯ ಅಧೀಕ್ಷಕರು, ಕೃಷಿ ಹವಾಮಾನ ಕ್ಷೇತ್ರ ವಿಭಾಗ

ರಾತ್ರಿ ಒಳ್ಳೇ ಮಳೆ ಬೀಳ್ತು ಅಂತ ಹಾರು ಕಟ್ಕೊಂಡು ಹೋದ್ರೆ, ಭೂಮಿ ಹರಿತಾನೇ ಇಲ್ಲ. ದರ್ಗಾಕ್ಕೆ ಒಳ್ಳೇ ಮಳೆ ಉಯ್ತು, ಕೊಯಮತ್ತೂರು ಕಾಲೋನಿಗೆ ಮಳೇನೆ ಇಲ್ಲ. ಉಳುಮೆ ಮಾಡಲು ಇನ್ನೊಂದು ಹದ ಮಳೆ ಬೀಳಬೇಕು.
-ಪ್ರಕಾಶ್‌, ರೈತ

* ಗಿರೀಶ್‌ ಹುಣಸೂರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ