ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕಲಾ ವಿಷಯ ಕಡೆಗಣನೆ

Team Udayavani, Jun 17, 2019, 3:00 AM IST

ಮೈಸೂರು: ಬಂಡವಾಳಶಾಹಿ ಹಾಗೂ ಖಾಸಗೀಕರಣಕ್ಕೆ ಹೆಚ್ಚು ಉದಾರತೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ ಕರಡಿನಲ್ಲಿ ಸೇರಿಸಲಾಗಿದೆ ಎಂದು ಶಿಕ್ಷಣ ಚಿಂತಕ ಬಿ.ಶ್ರೀಪಾದ ಭಟ್‌ ಹೇಳಿದರು.

ನಗರದ ಕಲಾಮಂದಿರದ ಮನೆಯಂಗಳದಲ್ಲಿ ಭಾನುವಾರ ಅಖೀಲ ಭಾರತ ಪ್ರಜಾ ವೇದಿಕೆ, ಫ್ರೈಡೇ ಪೋರಂ, ಮೈಸೂರು ನಾಗರಿಕ ಹಕ್ಕುಗಳಿಗಾಗಿ ಜನರ ಒಕ್ಕೂಟ (ಪಿಯುಸಿಎಲ್‌) ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ 2019 (ಕರಡು) ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೃತ್ತಿಪರ ಕೋರ್ಸ್‌ಗಳಿಗೆ ಬೇಡಿಕೆ: ಬಂಡವಾಳಶಾಹಿ ಹಾಗೂ ಖಾಸಗೀಕರಣಕ್ಕೆ ಹೆಚ್ಚು ಉದಾರತೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ ಕರಡಿನಲ್ಲಿ ಸೇರಿಸಲಾಗಿದೆ. ಆದರೆ, ಸಾರ್ವಜನಿಕ ಸಬಲೀಕರಣದ ಹಿನ್ನೆಲೆಯಲ್ಲಿ ಕರಡು ರಚನೆಗೊಂಡಿಲ್ಲ.

ವೃತ್ತಿಪರ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಮಾನವಿಕ ವಿಷಯಗಳನ್ನು ಓದುವವರ ಸಂಖ್ಯೆಯೇ ಕಡಿಮೆಯಾಗಿದೆ. 21ನೇ ಶತಮಾನ ತಂತ್ರಜ್ಞಾನದ ವಿಷಯಗಳನ್ನು ಪೋಷಿಸುತ್ತಿದೆ. ಕಲಾ ವಿಷಯಗಳನ್ನು ಕಡೆಗಣಿಸುತ್ತಿದೆ. ಹಾಗಾಗಿ ಈ ಕರಡು ಯಾವುದೇ ಗೈಡ್‌ ಇಲ್ಲದೆ ಮಂಡಿಸಿರುವ ಸಾಧಾರಣ ಪ್ರಬಂಧದಂತಿದೆ ಎಂದರು.

ವಿಸ್ತೃತ ಚರ್ಚೆ ನಡೆಯಬೇಕಿದೆ: ಕಡ್ಡಾಯ ಶಿಕ್ಷಣದ ಅಡಿ ರಾಜ್ಯ ಸರ್ಕಾರ ಒದಗಿಸಿರುವ ಆರ್‌ಟಿಇ ಕಾಯ್ದೆಯನ್ನು ಕರಡಿನಲ್ಲಿ ಕೈ ಬಿಡಲಾಗಿದೆ. ಅಲ್ಲದೆ, ಹೀಗಿರುವ 10 ಮತ್ತು 12ನೇ ತರಗತಿಯ ಪಬ್ಲಿಕ್‌ ಪರೀಕ್ಷೆಯನ್ನು 5 ಮತ್ತು 8ನೇ ತರಗತಿಗೆ ಸೇರಿಸುವ ಪ್ರಸ್ತಾವನೆಯೂ ಇದೆ.

ಹೀಗೆ ಮಾಡಿದರೆ ಶಿಕ್ಷಣದಿಂದ ಮಕ್ಕಳನ್ನು ಮೊಟಕುಗೊಳಿಸಿದಂತೆ ಆಗುತ್ತದೆ. ತ್ರಿಭಾಷಾ ನೀತಿ ಸೂತ್ರ ಕೂಡ ಕರಡಿನಲ್ಲಿ ಇದೆ. ತೀವ್ರ ವಿವಾದ ಸೃಷ್ಟಿಸಿದ ಈ ಅಂಶವನ್ನು ಕೇಂದ್ರ ಇದೀಗ ತೆಗೆದು ಹಾಕಿದೆ. ಆದರೂ ಇದರ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕಿದೆ ಎಂದು ಹೇಳಿದರು.

ಕರಡಿನಲ್ಲಿ ತಿಳಿಸಿರುವ ಎಷ್ಟೋ ವಿಚಾರವನ್ನು ಹೇಗೆ ಕಾರ್ಯರೂಪಕ್ಕೆ ತರಬೇಕೆಂಬ ಗೊಂದಲವಿದೆ. 5ನೇ ತರಗತಿಯವರೆಗೆ ಮಕ್ಕಳು ಬರೆಯುವ ಅಭ್ಯಾಸ ಮಾಡುವಂತಿಲ್ಲ. ಬರೀ ಆಟದಿಂದ ಪಾಠ ಎಂಬ ವಿವರಣೆ ಇದೆ.

ಆದರೆ, ಇದನ್ನು ಶಿಕ್ಷಕರು ಹೇಗೆ ಅನುಷ್ಠಾನಕ್ಕೆ ತರಬೇಕೆಂಬ ವಿವರಣೆ ಇಲ್ಲ. ಆಶಯ ಮತ್ತು ಶಿಫಾರಸಿಗೂ ಬಹಳ ವ್ಯತ್ಯಾಸ ಇದೆ. ಯೋಜನೆ ಹೇಗೆ ಜಾರಿಗೆ ಬರಬೇಕೆಂಬ ಟಿಪ್ಪಣಿ ಇಲ್ಲ ಎಂದರು.

ಉನ್ನತ ಶಿಕ್ಷಣದಲ್ಲಿ ಸ್ಪಷ್ಟ ಗುರಿ: ಹಾಸನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಎಂ.ಶಂಕರ್‌ ಮಾತನಾಡಿ, ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಸ್ಪಷ್ಟ ಗುರಿಯನ್ನು ಕಾಯ್ದೆ ಹೊಂದಿದೆ. ಪರಿಪೂರ್ಣ ಮನುಷ್ಯನಾಗಿ ವಿದ್ಯಾರ್ಥಿ ಹೊರ ಬರಬೇಕೆಂಬ ಆಶಯವನ್ನು ಕಾಯ್ದೆಯಲ್ಲಿ ಇರಿಸಲಾಗಿದೆ. ಹಾಗಾಗಿ ಇದೊಂದು ಆಶಾದಾಯಕ ಕರಡು.

ಕೆಲವೊಂದು ವಿಷಯಗಳು ಪದೇ ಪದೇ ರಿಪೀಟ್‌ ಆಗಿವೆ. ಇದನ್ನು ಸಂಕ್ಷಿಪ್ತವಾಗಿ ಹೇಳಬಹುದಿತ್ತು. 2035ರೊಳಗೆ ಉನ್ನತ ಶಿಕ್ಷಣದಲ್ಲಿ ಭಾರತವು ಶೇ.50ರಷ್ಟು ಸಾಧನೆಯನ್ನು ಮಾಡಬೇಕೆಂಬ ಗುರಿಯನ್ನು ಕರಡು ಹೊಂದಿದೆ. ದೇಶದಲ್ಲಿ ಬೃಹತ್‌ ಕೈಗಾರಿಕಾ ಸಂಸ್ಥೆಗಳು ಹುಟ್ಟುವಂತೆ ಬೃಹತ್‌ ಶಿಕ್ಷಣ ಸಂಸ್ಥೆಗಳು ಅಸ್ತಿತ್ವಕ್ಕೆ ಬರಬೇಕೆಂಬ ಆಶಯವನ್ನು ಕರಡು ವ್ಯಕ್ತಪಡಿಸುತ್ತದೆ ಎಂದು ತಿಳಿಸಿದರು.

ಪರ-ವಿರೋಧ ಚರ್ಚೆ: ರಾಷ್ಟ್ರೀಯ ಶಿಕ್ಷಣ ನೀತಿ-2019ರ ಕರಡು ಮಾರ್ಗದರ್ಶಕರೇ ಇಲ್ಲದೇ ರೂಪಿಸುವ ಪ್ರಬಂಧವಾಗಿದೆ ಎಂಬ ಕೂಗಿನ ನಡುವೆಯೇ ಇದು ವಿದ್ಯಾರ್ಥಿ ಕೇಂದ್ರಿತ ಹೊಸ ಶಿಕ್ಷಣ ನೀತಿ. 21ನೇ ಶತಮಾನಕ್ಕೆ ಅನುಗುಣವಾಗಿ ಸ್ಪರ್ಧಾತ್ಮಕವಾಗಿ ಕೂಡಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದವು. ಜೊತೆಗೆ ಪರ-ವಿರೋಧ ಚರ್ಚೆಯೂ ಏರ್ಪಟ್ಟವು.

ಡಾ.ವಿ.ಲಕ್ಷ್ಮೀನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಸ.ರ.ಸುದರ್ಶನ, ವೆಂಕಟರಾಜು ಹಾಜರಿದ್ದರು.

ಸಂಶೋಧನೆ, ಬೋಧನೆ ಹಾಗೂ ಕಾಲೇಜು ಎಂಬ ಮೂರು ಅಂಶಗಳಿಗೆ ಆದ್ಯತೆ ನೀಡಲಾಗಿದೆ. ಜಿಲ್ಲೆಗೊಂದು ಉನ್ನತ ಶಿಕ್ಷಣ ಸಂಸ್ಥೆ ಬರಬೇಕೆಂಬ ಸದಾಶಯವನ್ನೂ ಕರಡು ಬಿತ್ತರಿಸುತ್ತದೆ. ಏಕ ಕೋರ್ಸ್‌ ನೀಡುವ ಪದ್ಧತಿ ನಿಲ್ಲಬೇಕೆಂಬ ಅಂಶವನ್ನೂ ಕಾಯ್ದೆ ಹೇಳುತ್ತದೆ.
-ಪ್ರೊ.ಎಂ.ಶಂಕರ್‌, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ, ಹಾಸನ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ