ಅಹಿಂಸೆಯೇ ನಾಗರಿಕ ಸಮಾಜದ ಸ್ವತ್ತು

Team Udayavani, Apr 18, 2019, 3:00 AM IST

ಮೈಸೂರು: ಹಿಂಸೆ ಮತ್ತು ಯುದ್ಧವೇ ಎಲ್ಲದಕ್ಕೂ ಕೊನೆಯಲ್ಲ, ಅಹಿಂಸೆಯೇ ನಾಗರಿಕ ಸಮಾಜದ ಸ್ವತ್ತು ಎಂಬುದು ಭಗವಾನ್‌ ಮಹಾವೀರರ ತತ್ವ ಎಂದು ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.

ಮಹಾವೀರ ಜಯಂತಿ ಅಂಗವಾಗಿ ಮೈಸೂರಿನ ಮಹಾವೀರ ಸೇವಾ ಸಂಸ್ಥಾನ್‌ ವತಿಯಿಂದ ಎಂ.ಎಲ್‌.ವರ್ಧಮಾನಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಮಹಾವೀರ ಅಹಿಂಸಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಹಾವೀರರು ಶಾಂತಿಯ ಸಂಕೇತ ಮತ್ತು ರೂವಾರಿ. ಜಗತ್ತಿನಲ್ಲಿ ಎಲ್ಲಾ ಪ್ರವಾದಿಗಳು ಹುಟ್ಟಿದ್ದಾರೆ. ಆದರೆ, ಅಹಿಂಸೆಗಾಗಿ ಹುಟ್ಟಿದ ಪ್ರವಾದಿ ಎಂದರೆ ಅದು ಮಹಾವೀರ ಮಾತ್ರ. ಶಾಂತಿ ಮತ್ತು ಅಹಿಂಸೆ ಸಾರಿದವರು ಮಹಾವೀರ ಮತ್ತು ಬುದ್ಧ.

ಈ ಜಗತ್ತಿನಲ್ಲಿ ವಿಷಮ ಸ್ಥಿತಿ ಎದುರಾಗಿದೆ, ಎಲ್ಲಾ ರಾಷ್ಟ್ರಗಳಲ್ಲಿಯೂ ಭೂಮಿಯನ್ನು ಕ್ಷಣಾರ್ಧದಲ್ಲಿ ನಾಶ ಪಡಿಸುವ ಅಣ್ವಸ್ತ್ರಗಳಿವೆ. ಇದಕ್ಕೆಲ್ಲ ಒಂದೇ ಪರಿಹಾರ ಮಾರ್ಗ ಅದು ಮಹಾವೀರರ ಅಹಿಂಸಾ ತತ್ವ ಎಂದು ತಿಳಿಸಿದರು.

ಉರಿಯುವ ಬೆಂಕಿ ಮುಟ್ಟಿದರೆ ಅದು ಹಿಂಸೆ. ಅದೇ ಬೆಂಕಿಯ ಬೆಳಕಲ್ಲಿ ಪುಸ್ತಕ ಓದಿ ಜ್ಞಾನ ಸಂಪಾದಿಸಿದರೆ ಅಹಿಂಸೆಯಾಗುತ್ತದೆ ಎಂದ ಅವರು, ಮಹಾವೀರ, ಬುದ್ಧ, ಬಸವಣ್ಣ ಸಾರಿದ ಅಹಿಂಸಾ ತತ್ವವನ್ನು ಗಾಂಧಿ ಮತ್ತು ಅಂಬೇಡ್ಕರ್‌ ಅನುಸರಿಸಿದರು.

ಮುಂದೆ ನಾವುಗಳು ಮಹಾವೀರರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದು ಅವರು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ. ನಂಜಪ್ಪ ವೆಂಕೋಬರಾವ್‌ ಅವರಿಗೆ ಮಹಾವೀರ ಅಹಿಂಸಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಂ.ಆರ್‌.ಸುನೀಲ್‌ ಕುಮಾರ್‌, ಜೈನ ಮಹಿಳಾ ಸಮಾಜದ ಅಧ್ಯಕ್ಷೆ ಶೀಲಾ ಅನಂತರಾಜ್‌, ಮಹಾವೀರ ಭವನ ನಿರ್ಮಾಣ ಅಧ್ಯಕ್ಷ ಸುಧೀರ್‌ ಕುಮಾರ್‌, ಎಂ.ಎಲ್‌.ಜೈನ್‌ ಬೋರ್ಡಿಂಗ್‌ ಹೋಮ್‌ನ ಕಾರ್ಯದರ್ಶಿ ಶ್ಯಾಮಲಾ ಮದನ್‌ಕುಮಾರ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ