ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ

Team Udayavani, Aug 25, 2019, 3:00 AM IST

ಮೈಸೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸುವವರು ವ್ಯಾಪ್ತಿಯ ಪೊಲೀಸ್‌ ಠಾಣೆಗಳಿಂದ ನಿಗದಿತ ನಮೂನೆ ಅರ್ಜಿ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ, ಆ.31ರೊಳಗಾಗಿ ಸಲ್ಲಿಸಿ ಕಡ್ಡಾಯವಾಗಿ ಪೂರ್ವಾನುಮತಿ ಪಡೆದುಕೊಳ್ಳಬೇಕು ಎಂದು ನಗರ ಪೊಲೀಸ್‌ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.

ಅಲ್ಲದೆ ಪೇಪರ್‌ ಮೌಲ್ಡ್‌ ಮತ್ತು ಪ್ಲಾಸ್ಟರ್‌ ಆಫ್ ಪ್ಯಾರೀಸ್‌(ಪಿಒಪಿ)ನಿಂದ ತಯಾರಿಸಿದ ಮೂರ್ತಿಗೆ ನಿಷೇಧವಿದ್ದು, ಮಣ್ಣಿನ ಮತ್ತು ಸೀಸ ಮುಕ್ತ ಬಣ್ಣವಿರುವ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು. ಬಲವಂತವಾಗಿ ಚಂದಾ ವಸೂಲಿ ನಿಷೇಧಿಸಲಾಗಿದೆ. ಹಾಗೆ ಮಾಡಿದರೆ ಕಾನೂನಿನ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಗಣೇಶ ಪ್ರತಿಷ್ಠಾಪನೆ ಮತ್ತು ಇತರೇ ಕಾರ್ಯಕ್ರಮಗಳ ಸಂಬಂಧ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ಆಡಚಣೆಯಾಗದಂತೆ ಸ್ಥಳ ಆಯ್ಕೆ ಮಾಡುವುದು. ಪ್ರತಿಷ್ಠಾಪನೆಗೆ ಅನುಮತಿ ಕೋರಿ ಸಲ್ಲಿಸುವ ಅರ್ಜಿಯೊಂದಿಗೆ ಗಣೇಶ ಪ್ರತಿಷ್ಠಾಪನೆ ಮಾಡುವ ಸ್ಥಳದ ಮಾಲಿಕರ, ನಗರಪಾಲಿಕೆಯಿಂದ ಪಡೆದಿರುವ ಅನುಮತಿ ಪತ್ರ, ವಿದ್ಯುಚ್ಚಕ್ತಿ ಅಳವಡಿಸುವ ಬಗ್ಗೆ ಚೆಸ್ಕಾಂ ನಿಂದ ಅನುಮತಿ ಪತ್ರ ಕಡ್ಡಾಯವಾಗಿ ಲಗತ್ತಿಸಬೇಕು ಎಂದು ತಿಳಿಸಿದರು.

ಅಶ್ಲೀಲ ಹಾಡು, ನೃತ್ಯ ಬೇಡ: ಮನರಂಜನೆ ಕಾರ್ಯಕ್ರಮಗಳು ಹಾಗೂ ವಿಸರ್ಜನಾ ಮೆರವಣಿಗೆಗೆ ಎರಡು ದಿನಗಳ ಮುಂಚಿತವಾಗಿಯೇ ಸಂಬಂಧಪಟ್ಟ ಪೊಲೀಸ್‌ ಠಾಣೆಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯುವುದು. ಮನರಂಜನೆ ಕಾರ್ಯಕ್ರಮಗಳು ಮತ್ತು ಮೆರವಣಿಗೆ ಮತ್ತು ವಿಸರ್ಜನೆ ಕಾರ್ಯಕ್ರಮವನ್ನು ರಾತ್ರಿ 10 ಗಂಟೆ ಒಳಗೆ ಕಡ್ಡಾಯವಾಗಿ ಮುಕ್ತಾಯಗೊಳಿಸಬೇಕು. ಮನರಂಜನಾ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಡು, ನೃತ್ಯಗಳು ಇರಬಾರದು.

ಮನರಂಜನಾ ಕಾರ್ಯಕ್ರಮಗಳು ಮತ್ತು ಮೆರವಣಿಗೆ ಸಂದರ್ಭಗಳಲ್ಲಿ ಮದ್ಯಪಾನ ಮಾಡಿ ಅಸಭ್ಯ ವರ್ತನೆ ಮತ್ತು ಅಶ್ಲೀಲವಾದ ವರ್ತನೆಯನ್ನು ತೋರತಕ್ಕದ್ದಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಮನರಂಜನಾ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳ ಸಮಯದಲ್ಲಿ ಡಿ.ಜೆ. ಮತ್ತು ಇನ್ನಿತರೆ ಹೆಚ್ಚು ಶಬ್ದದ ಸ್ಪೀಕರ್‌ಗಳನ್ನು ಬಳಸಬಾರದು. ಬಾಕ್ಸ್‌ ಮಾದರಿಯ ಧ್ವನಿವರ್ಧಕವನ್ನು ಕಡಿಮೆ ಧ್ವನಿಯಲ್ಲಿ ಬೆಳಗ್ಗೆ 7 ರಿಂದ ರಾತ್ರಿ 10ಗಂಟೆಯವರೆಗೆ ಮಾತ್ರ ವ್ಯಾಪ್ತಿಯ ಪೊಲೀಸ್‌ ಠಾಣೆಯ ಪೂರ್ವಾನುಮತಿಯೊಂದಿಗೆ ಉಪಯೋಗಿಸಬೇಕು ಎಂದಿದ್ದಾರೆ.

ನಿಗದಿ ಪಡಿಸಿದ ಸ್ಥಳದಲ್ಲೇ ಗಣೇಶ ವಿಸರ್ಜನೆ: ಗಣೇಶ ವಿಸರ್ಜನೆಯನ್ನು ಬಾವಿ, ಕೆರೆ, ನದಿಯಲ್ಲಿ ಮಾಡದೆ ಸಿಂಟೆಕ್ಸ್‌, ಬಕೆಟ್‌ನಲ್ಲಿ ವಿಸರ್ಜಿಸಿ ಗಣೇಶ ಪೂರ್ಣವಾಗಿ ಕರಗಿದ ನಂತರ ಗಿಡಗಳಿಗೆ ಕರಗಿದ ನೀರನ್ನು ಹಾಕುವುದು ಅಥವಾ ಮಹಾನಗರ ಪಾಲಿಕೆಯಿಂದ ನಿಗದಿಪಡಿಸಿರುವ ಸ್ಥಳಗಳಲ್ಲಿ ವಿಸರ್ಜನೆ ಮಾಡುವುದು. ಪಶ್ಚಿಮ ವಾಹಿನಿ ಮತ್ತು ಕೆರೆಗಳಲ್ಲಿ ಗಣೇಶ ವಿಸರ್ಜನೆ ಮಾಡುವವರು ಸುರಕ್ಷತೆಯ ದೃಷ್ಟಿಯಿಂದ ಸೂರ್ಯ ಮುಳುಗುವ ಮುಂಚಿತವಾಗಿ ವಿಸರ್ಜನೆ ಮಾಡುವುದು.

ಗಣೇಶ ಪ್ರತಿಷ್ಠಾಪನೆ ಮಾಡುವವರು ಲಾಟರಿ, ಪ್ರವೇಶ ಶುಲ್ಕ ಅಥವಾ ಇನ್ನಿತರೆ ಯಾವುದೇ ಬಹುಮಾನದ ಯೋಜನೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ವ್ಯವಸ್ಥಾಪಕರು ಸ್ವಯಂ ಸೇವಕರನ್ನು ನೇಮಿಸಿಕೊಂಡು, ಅವರಿಗೆ ಗುರುತಿನ ಚೀಟಿ ನೀಡಿ, ಪ್ರತಿಷ್ಠಾಪನ ಸ್ಥಳ, ಮನರಂಜನಾ ಕಾರ್ಯಕ್ರಮ, ಮೆರವಣಿಗೆ ಮತ್ತು ವಿಸರ್ಜನೆ ಸ್ಥಳದ ಸೂಕ್ತ ಉಸ್ತುವಾರಿಯನ್ನು ನೋಡಿಕೊಳ್ಳುವಂತೆ ವ್ಯವಸ್ಥೆ ಮಾಡುವುದು.

ವಿಸರ್ಜನಾ ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ನುರಿತ ಈಜುಗಾರರು ಇರುವಂತೆ ವ್ಯವಸ್ಥೆ ಮಾಡಿಕೊಂಡು ಅಹಿತಕರ ಘಟನೆಗೆ ಅವಕಾಶವಾಗದಂತೆ ನೋಡಿಕೊಳ್ಳುವುದು ಎಂದು ಹೇಳಿದ್ದಾರೆ. ಪ್ರತಿಷ್ಠಾಪನೆ ಸ್ಥಳದಲ್ಲಿ ಮುನ್ನೆಚ್ಚರಿಕೆ ವಹಿಸಿ ಯಾವುದೇ ರೀತಿಯ ಬೆಂಕಿ ಆಕಸ್ಮಿಕಗಳು ನಡೆಯದಂತೆ ನೋಡಿಕೊಳ್ಳುವುದು ಹಾಗೂ ಬೆಂಕಿ ನಂದಿಸುವ ಉಪಕರಣಗಳಾದ ನೀರು, ಮರಳು ಮತ್ತು ಇತರೆ ಬೆಂಕಿ ನಂದಿಸುವ ಉಪಕರಣಗಳನ್ನು ಇಟ್ಟುಕೊಳ್ಳುವುದು.

ಕಂಟ್ರೋಲ್‌ ರೂಂಗೆ ಮಾಹಿತಿ ನೀಡಿ: ಪ್ಲಾಸ್ಟರ್‌ ಆಫ್ ಪ್ಯಾರೀಸ್‌ನಿಂದ ತಯಾರಿಸಿದ ಗಣಪತಿ, ಪೇಪರ್‌ ಮೌಲ್ಡ್‌, ಮತ್ತು ಸೀಸದಿಂದ ತಯಾರಿಸಿದ ಗಣಪತಿ ಮಾರಾಟ ಮತ್ತು ಪ್ರತಿಷ್ಠಾಪನೆ ಮಾಡುವುದು ಕಂಡು ಬಂದಲ್ಲಿ ಮೈಸೂರು ನಗರಪಾಲಿಕೆ ಅಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡುವುದು.

ನಿಬಂಧನೆಗಳನ್ನು ಉಲ್ಲಂ ಸಿರುವುದು ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಕೂಡಲೇ ಸಂಬಂಧಪಟ್ಟ ಪೊಲೀಸ್‌ ಠಾಣೆಗಳಿಗೆ ಅಥವಾ ಪೊಲೀಸ್‌ ಕಂಟ್ರೋಲ್‌ ರೂಂ ದೂರವಾಣಿ ಸಂಖ್ಯೆ 100, 2418139, 2418339 ಗೆ ಮಾಹಿತಿ ನೀಡುವಂತೆ ನಗರ ಪೊಲೀಸ್‌ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ