ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಚರ್ಚೆಯಲ್ಲಿ ಪರ-ವಿರೋಧ

Team Udayavani, Jun 23, 2019, 3:00 AM IST

ಮೈಸೂರು: ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಕುರಿತು ರಾಷ್ಟ್ರೀಯ ಶಿಕ್ಷಣ ಚರ್ಚಾ ವೇದಿಕೆ ಏರ್ಪಡಿಸಿದ್ದ ಚರ್ಚೆಯಲ್ಲಿ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಯಿತು. ಮಾನಸ ಗಂಗೋತ್ರಿಯ ಗಾಂಧಿಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜವಾದಿ ಪ. ಮಲ್ಲೇಶ್‌, ಸದ್ಯ ನಮ್ಮೆಲ್ಲರ ಮುಂದೆ ರಾಷ್ಟ್ರೀಯ ಶಿಕ್ಷಣ ನೀತಿ- 2019ರ ಕರಡು ಪ್ರಕಟವಾಗಿದೆ.

ಕೇಂದ್ರ ಸರ್ಕಾರ ಈ ಕರಡನ್ನು ಸಾರ್ವಜನಿಕರ ಅಭಿಪ್ರಾಯ ಕ್ರೋಢೀಕರಿಸಲು ಮಂಡಿಸಿದೆ. ಸಮಗ್ರವಾಗಿ ಈ ಕರಡನ್ನು ಪರಿಶೀಲಿಸಿ ಅದರ ಗುಣದೋಷ ಗುರುತಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಒಂದು ರಾಷ್ಟ್ರದ, ಜನಾಂಗದ ಭವಿಷ್ಯವನ್ನು ರೂಪಿಸುವ, ಬದುಕಿನ ಮಾರ್ಗವನ್ನು ಕಂಡುಕೊಳ್ಳುವ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಮೇಲ್ನೋಟಕ್ಕೆ ಆರ್‌ಎಸ್‌ಎಸ್‌ನ ಪ್ರತಿಪಾದಿಸುವ ಹಲವು ಅಂಶಗಳನ್ನು ಈ ಕರಡು ಒಳಗೊಂಡಿದೆ ಎಂದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರೊ.ಸಿದ್ದೇಗೌಡ, ರಾಷ್ಟ್ರೀಯ ಶಿಕ್ಷಣ ನೀತಿ ಕರಡಿನಲ್ಲಿ ಯಾವುದೇ ಹಿಡನ್‌ ಅಜೆಂಡಾ ಇಲ್ಲ. ಭಾಷೆ ಬಗ್ಗೆ ಮಡಿವಂತಿಕೆ ಬೇಡ. ಮೇಲ್ನೋಟಕ್ಕೆ ಆರ್‌ಎಸ್‌ಎಸ್‌ನ ಹಲವು ಅಂಶಗಳನ್ನು ಒಳಗೊಂಡಿದೆ ಎಂದು ಕಂಡರೂ ವೈಜ್ಞಾನಿಕವಾಗಿ ಎಲ್ಲಾ ಅಂಶಗಳನ್ನು ಹೇಳಲಾಗಿದೆ ಎಂದರು.

ಪತ್ರಕರ್ತ ಕೃಷ್ಣಪ್ರಸಾದ್‌ ಮಾತನಾಡಿ, ಅಂಗನವಾಡಿಯಿಂದ ಪಿಎಚ್‌.ಡಿ ಪದವಿಯವರೆಗಿನ ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕಿದೆ. ಶಿಕ್ಷಣ ನೀತಿ ಕರಡಿನಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಉನ್ನತ ಶಿಕ್ಷಣದ ಬಗ್ಗೆಯೂ ಹೆಚ್ಚು ಚರ್ಚೆ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ರಿಯಲ್‌ ಎಸ್ಟೇಟ್‌ ವ್ಯಾಪಾರದಂತಾಗಿದೆ. ಪ್ರಾಚೀನ ಭಾಷೆಗಳಾದ ಪಾಲಿ, ಪ್ರಾಕೃತ, ಫ‌‌ರ್ಷಿಯನ್‌ ಮತ್ತು ಸಂಸ್ಕೃತ ಭಾಷೆಗಳ ಬಗ್ಗೆ ಹೆಚ್ಚು ಒತ್ತು ನೀಡಿದ್ದಾರೆ ಎಂದರು.

ತುಮಕೂರು ವಿವಿ ಕುಲಪತಿ ಪ್ರೊ. ಸಿದ್ದೇಗೌಡ ಮಾತನಾಡಿ, ಈ ಕರಡಿನಲ್ಲಿ ಯಾವುದೇ ಹಿಡನ್‌ ಅಜೆಂಡಾ ಇಲ್ಲ. ಜಾಗತಿಕವಾಗಿ ನಮ್ಮ ಕೌಶಲ್ಯಗಳು ಹೇಗಿರಬೇಕೆಂಬ ಅಂಶಗಳನ್ನು ಕರಡಿನಲ್ಲಿ ಸೇರಿಸಲಾಗಿದೆ. ಇದು ಹೊಸ ಬದಲಾವಣೆ ತರುವಲ್ಲಿ ಸಹಕಾರಿಯಾಗಲಿದೆ. ವೈಜ್ಞಾನಿಕವಾಗಿ ಎಲ್ಲಾ ವಿಚಾರಗಳನ್ನು ಕರಡಿನಲ್ಲಿ ಚರ್ಚಿಸಲಾಗಿದೆ. ಆದರೆ, ಈಗಾಗಲೇ ಒಂದು ಶಿಕ್ಷಣಕ್ಕೆ ಹೊಂದಿರುವ ನಮ್ಮನ್ನು ಅದು ಹೇಗೆ ಬದಲಾವಣೆಗೆ ಆಗುವಂತೆ ಮಾಡುತ್ತದೆ ಎಂಬುದು ಸವಾಲಿನ ವಿಚಾರ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಡೀನ್‌ ಜಗದೀಶ್‌, ಪ್ರೊ.ಉಮಾಪತಿ ಮಾತನಾಡಿದರು. ಪ್ರೊ. ಬಸವರಾಜು, ಪ್ರೊ. ಕಾಳಚನ್ನೇಗೌಡ, ಪ್ರೊ.ಪಂಡಿತಾರಾಧ್ಯ, ಕನ್ನಡಪರ ಹೋರಾಟಗಾರ ಸ.ರ.ಸುದರ್ಶನ, ಸಾಹಿತಿ ಬಸವರಾಜು, ಸುಬ್ರಹ್ಮಣ್ಯ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನಲ್ಲಿ ಗಾಂಧಿ, ಅಂಬೇಡ್ಕರ್‌ರನ್ನು ನೆನಪಿಸಿಕೊಂಡಂತೆ ನೆಹರು ಅವರ ಹೆಸರು ಪ್ರಸ್ತಾಪಿಸುವುದಿಲ್ಲ. ಇಡೀ ಕರಡಿನಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಪದದ ಬಳಕೆ ಇಲ್ಲ ಎಂದರು.
-ಕೃಷ್ಣಪ್ರಸಾದ್‌, ಹಿರಿಯ ಪತ್ರಕರ್ತ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ