ಪಿಯು: ರಾಜ್ಯದಲ್ಲೇ ಜಿಲ್ಲೆಗೆ 15ನೇ ಸ್ಥಾನ

Team Udayavani, Apr 16, 2019, 3:00 AM IST

ಮೈಸೂರು: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.68.55 ಫ‌ಲಿತಾಂಶದೊಂದಿಗೆ ಮೈಸೂರು ಜಿಲ್ಲೆ ರಾಜ್ಯದಲ್ಲಿ 15ನೇ ಸ್ಥಾನ ಸಂಪಾದಿಸಿದೆ. ಕಳೆದ ಮಾರ್ಚ್‌ನಲ್ಲಿ ನಡೆದ 2018-19 ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಜಿಲ್ಲೆಯ ಒಟ್ಟು 28,595 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 19, 601 ಮಂದಿ ಉತ್ತೀರ್ಣರಾಗಿದ್ದಾರೆ.

ಶೇ.2ರಷ್ಟು ಏರಿಕೆ: ಮೈಸೂರು ಜಿಲ್ಲೆ 2017-18ನೇ ಸಾಲಿನಲ್ಲಿ ಶೇ.66.77 ಫ‌ಲಿತಾಂಶ ಪಡೆದು ಜಿಲ್ಲಾವಾರು ಸ್ಥಾನದಲ್ಲಿ 17ನೇ ಸ್ಥಾನ ಪಡೆದಿತ್ತು. ಆದರೆ 2018-19ನೇ ಸಾಲಿನಲ್ಲಿ ಶೇ.68.55 ಫ‌ಲಿತಾಂಶ ಪಡೆಯುವ ಮೂಲಕ ಜಿಲ್ಲಾವಾರು 15ನೇ ಸ್ಥಾನ ಪಡೆದು ಶೇ.2ರಷ್ಟು ಏರಿಕೆ ಕಂಡಿದೆ.

28595 ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆ ಬರೆದಿದ್ದು ಅವರಲ್ಲಿ 19601 ಮಂದಿ ತೇರ್ಗಡೆಯಾಗಿದ್ದಾರೆ. ಖಾಸಗಿಯಾಗಿ 1413 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 372 ಮಂದಿ ಉತ್ತೀರ್ಣರಾಗಿದ್ದಾರೆ.

ಜೊತೆಗೆ 4497 ಪುನಾರಾವರ್ತಿತ ಪರೀಕ್ಷಾರ್ಥಿಗಳಲ್ಲಿ 1287 ಮಂದಿ ಉತ್ತೀರ್ಣರಾಗುವ ಮೂಲಕ ಒಟ್ಟು 34505 ಮಂದಿಯಲ್ಲಿ 21260 ಮಂದಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಒಟ್ಟು 9563 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 1972 ಬಾಲಕರು ಹಾಗೂ 2776 ಬಾಲಕಿಯರು ಸೇರಿ 4748 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಒಟ್ಟು 12881 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 3529 ಬಾಲಕರು ಹಾಗೂ 5167 ಬಾಲಕಿಯರು ಸೇರಿದಂತೆ 8696 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಒಟ್ಟು 12061 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 3417 ಬಾಲಕರು, 4399 ಬಾಲಕಿಯರು ಸೇರಿ 7816 ಮಂದಿ ತೇರ್ಗಡೆಯಾಗಿದ್ದಾರೆ.

18508 ನಗರ, 5053 ಗ್ರಾಮೀಣರು ತೇರ್ಗಡೆ: ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ನಗರ ಪ್ರದೇಶದ ಒಟ್ಟು 29452 ಪರೀಕ್ಷಾರ್ಥಿಗಳ ಪೈಕಿ 18508 ಮಂದಿ ತೇರ್ಗಡೆಯಾಗಿದ್ದು, ಗ್ರಾಮಾಂತರ ಪ್ರದೇಶದ 5053 ಪರೀಕ್ಷಾರ್ಥಿಗಳ ಪೈಕಿ 2752 ಮಂದಿ ಉತ್ತೀರ್ಣರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ದಯಾನಂದ್‌ ತಿಳಿಸಿದ್ದಾರೆ.

2016ರಲ್ಲಿ ಜಿಲ್ಲಾವಾರು ಸ್ಥಾನದಲ್ಲಿ 11ನೇ ಸ್ಥಾನ ಪಡೆದಿದ್ದ ಮೈಸೂರು ಜಿಲ್ಲೆ 2017ರಲ್ಲಿ 14ನೇ ಸ್ಥಾನಕ್ಕೆ ಕುಸಿದಿತ್ತು. ಆನಂತರ 2018ನೇ ಸಾಲಿನಲ್ಲಿ 17ನೇ ಸ್ಥಾನಕ್ಕೆ ಕುಸಿದಿತ್ತು. 2018-19ನೇ ಸಾಲಿನಲ್ಲಿ 15ನೇ ಸ್ಥಾನ ಪಡೆದಿದೆ.

ಕಲಾ ವಿಭಾಗಕ್ಕೆ ಹೆಚ್ಚಿನ ಫ‌ಲಿತಾಂಶ ಬಂದಿಲ್ಲ: ಕಲಾ ವಿಭಾಗದಲ್ಲಿ ಫ‌ಲಿತಾಂಶ ಕಡಿಮೆ ಬಂದಿರುವುದೇ ಜಿಲ್ಲಾವಾರು ಫ‌ಲಿತಾಂಶ ಕುಸಿತಕ್ಕೆ ಕಾರಣ, ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಲ್ಲಿ ಕೆಲವರಿಗೆ ಓದಲು, ಬರೆಯಲು ಬರುವುದಿಲ್ಲ. ಅಲ್ಲದೇ ರಾಜ್ಯದ ಒಟ್ಟಾರೆ ಫ‌ಲಿತಾಂಶ ಗಮನಿಸಿದರೆ ಕಲಾ ವಿಭಾಗಕ್ಕೆ ಶೇ.50ಕ್ಕಿಂತ ಹೆಚ್ಚಿನ ಫ‌ಲಿತಾಂಶ ಲಭಿಸಿಲ್ಲ ಎಂದು ಡಾ.ದಯಾನಂದ್‌ ವಿವರಿಸಿದರು.

ವಾಣಿಜ್ಯದಲ್ಲಿ ಸ್ನೇಹಾ ರಾಜ್ಯಕ್ಕೆ 4ನೇ ಸ್ಥಾನ – ವಿಜ್ಞಾನದಲ್ಲಿ ಅನನ್ಯ ಜಿಲ್ಲೆಗೆ ಮೊದಲು: ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಮರಿಮಲ್ಲಪ್ಪ ಪಿಯು ಕಾಲೇಜಿನ ಸ್ನೇಹಾ ಕೆ. 593 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಮೊದಲ ಸ್ಥಾನ ಹಾಗೂ ರಾಜ್ಯಕ್ಕೆ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸದ್ವಿದ್ಯಾ ಸೆಮಿ ರೆಸಿಡೆನ್ಷಿಯಲ್‌ ಕಾಲೇಜಿನ ಅನನ್ಯ 590 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ನಿರೀಕ್ಷಿತ ಫ‌ಲಿತಾಂಶ ಬಂದಿಲ್ಲ: ಈ ಬಾರಿ ಮೈಸೂರು ಜಿಲ್ಲೆ ರಾಜ್ಯದ ಜಿಲ್ಲಾವಾರು ಸ್ಥಾನದಲ್ಲಿ 10ರಿಂದ 12ನೇ ಸ್ಥಾನದೊಳಗೆ ಬರುವ ನಿರೀಕ್ಷೆ ಇತ್ತು. ಶೇಕಡವಾರು ಫ‌ಲಿತಾಂಶ ಹೆಚ್ಚಿಸುವ ಸಲುವಾಗಿಯೇ ರಜಾ ದಿನಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಲಾಗಿತ್ತು. ವಿಶ್ವಾಸ ಕಿರಣ ಯೋಜನೆಯಡಿ ವಿದ್ಯಾರ್ಥಿಗಳಿಗೆ ನ್ಪೋಕನ್‌ ಇಂಗ್ಲಿಷ್‌, ವ್ಯಾಕರಣ ತರಬೇತಿ ನೀಡಲಾಗಿತ್ತು.

ತಾಂತ್ರಿಕ ಸಹಾಯಕರಿಂದ ಕಲಿಕಾ ಕಾರ್ಯಕ್ರಮದ ಮೂಲಕ ನುರಿತ ವಿಜ್ಞಾನ ಉಪನ್ಯಾಸಕರಿಂದ ವಿಜ್ಞಾನ ವಿಷಯವನ್ನು ವೀಡಿಯೋ ಕಾನ್ಫರೆನ್ಸ್‌ ಮೂಲಕ ಬೋಧಿಸಲಾಗಿತ್ತು. ಜೊತೆಗೆ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಲಾಗಿತ್ತು.

ನುರಿತ ಉಪನ್ಯಾಸಕ ವರ್ಗದವರಿಂದ ವಿಶೇಷ ಬೋಧನೆ, ವಾಣಿಜ್ಯಶಾಸ್ತ್ರ ವಿಷಯಕ್ಕೆ ಎನ್‌ಸಿಇಆರ್‌ಟಿ ಪಠ್ಯಕ್ರಮವನ್ನು ಮೊದಲ ಬಾರಿಗೆ ಅಳವಡಿಸಿದ್ದರಿಂದ ಉಪನ್ಯಾಸಕರಿಗೆ ವಿಶೇಷ ತರಬೇತಿ ನೀಡಲಾಗಿತ್ತು. ಜೊತೆಗೆ ಶೇ.75 ಕಡ್ಡಾಯ ಹಾಜರಾತಿ ನಿಗದಿಪಡಿಸಲಾಗಿತ್ತು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ದಯಾನಂದ್‌ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ