ಬೇಡಿಕೆ ಈಡೇರಿಕೆಗೆ ಸಾಮೂಹಿಕ ರಜೆ ಹಾಕಿ ಪ್ರತಿಭಟಿಸಿದ ಶಿಕ್ಷಕರು

Team Udayavani, Jul 10, 2019, 3:00 AM IST

ಮೈಸೂರು: ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿರುವ ಲೋಪಗಳನ್ನು ತಿದ್ದುಪಡಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕರೆಯ ಮೇರೆಗೆ ಮಂಗಳವಾರ ಒಂದು ದಿನದ ಸಾಮೂಹಿಕ ರಜೆ ಹಾಕಿ ಶಾಲೆಗಳನ್ನು ಮುಚ್ಚಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

2014ರ ಮೊದಲು ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಒಂದರಿಂದ ಐದನೇ ತರಗತಿಗೆ ಸೀಮಿತಗೊಳಿಸಿರುವುದನ್ನು ಕೂಡಲೇ ರದ್ದುಪಡಿಸಬೇಕು. ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರುಗಳೆಂದು ಪರಿಗಣಿಸಿ ವಿಲೀನಗೊಳಿಸುವುದು ಹಾಗೂ ಪದವೀಧರ ವೇತನ ಶ್ರೇಣಿ ನಿಗದಿಪಡಿಸಬೇಕು.

ಹೊಸ ಪಿಂಚಣಿ (ಎನ್‌ಪಿಎಸ್‌) ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ (ಓಪಿಎಸ್‌) ಯೋಜನೆಯನ್ನು ಜಾರಿಗೊಳಿಸಬೇಕು. ಮೂರು ವರ್ಷದ ಒಟ್ಟು ಶೇಕಡಾವಾರು ಪರಿಗಣಿಸಿ ವರ್ಗಾವಣೆ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಬೇಕು. ಆರನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ಬಡ್ತಿ ಮುಖ್ಯ ಶಿಕ್ಷಕರುಗಳಿಗೆ 10,15,20, 25, 30 ವರ್ಷದ ಆರ್ಥಿಕ ಬಡ್ತಿ ನೀಡಬೇಕು.

ಹೆಚ್ಚುವರಿ ಶಿಕ್ಷಕರನ್ನು ಪರಿಗಣಿಸುವಾಗ ಮುಖ್ಯ ಶಿಕ್ಷಕ ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನು ಹೊರತುಪಡಿಸಿ ವಿಷಯವಾರು, ಪ್ರಾದೇಶಿಕವಾರು, ಮಾಧ್ಯಮವಾರು, ವಿಶೇಷ ನಿಯಮಗಳನ್ನು ರೂಪಿಸಿ ಹೆಚ್ಚುವರಿ ಮಾಡುವುದು. ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವುದು, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಬೇಕು

ಹಾಗೂ ಶಿಕ್ಷಣ ಇಲಾಖೆಯು ರಜೆ ಸಹಿತ ಇಲಾಖೆಯಾಗಿರುವುದರಿಂದ ಶಿಕ್ಷಕರಿಗೆ ಅನೇಕ ಅನಾನುಕೂಲಗಳು ಆಗುತ್ತಿದ್ದು, ಶಿಕ್ಷಣ ಇಲಾಖೆಯನ್ನು ರಜೆ ರಹಿತ ಇಲಾಖೆಯನ್ನಾಗಿ ಮಾರ್ಪಡಿಸಿ ಇತರೆ ನೌಕರರಂತೆ ಶಿಕ್ಷಕರಿಗೂ ಎಲ್ಲಾ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಲಾಯಿತು.

ಬಹಿಷ್ಕಾರದ ಎಚ್ಚರಿಕೆ: ಡಿಡಿಪಿಐ ಕಚೇರಿ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ಶಿಕ್ಷಕರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು. ನಮ್ಮ ಬೇಡಿಕೆಗೆ ಸರ್ಕಾರ ಕೂಡಲೇ ಸ್ಪಂದಿಸದಿದ್ದರೆ ಶಿಕ್ಷಕರ ದಿನಾಚರಣೆಯನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಬಿ.ಸೋಮೇಗೌಡ, ಉಪಾಧ್ಯಕ್ಷರಾದ ಎಚ್‌.ಎಸ್‌.ಮಹೇಶ್‌, ಮೀನಾಕುಮಾರಿ, ಖಜಾಂಚಿ ಸಿ.ಎಸ್‌.ಮಮತ, ಪದಾಧಿಕಾರಿಗಳಾದ ಎಚ್‌.ಡಿ.ಮಾದಪ್ಪ, ಬಬಿತಾರಾಣಿ, ಎಂ.ವಿ.ಶಿವಶಂಕರ ಮೂರ್ತಿ, ಎಸ್‌.ಕೌಶಲ್ಯ ಸೇರಿದಂತೆ ನೂರಾರು ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ