ಒಬ್ಬರೇ ಕೋವಿಡ್ ನಿಯಂತ್ರಣ ಮಾಡಿದ್ದಾರೆಂಬ ಭ್ರಮೆ ಬೇಡ: ಮೈಸೂರು ಡಿಸಿಗೆ ಸಚಿವರ ಟಾಂಗ್
Team Udayavani, Jun 5, 2021, 12:48 PM IST
ಮೈಸೂರು: ಒಬ್ಬರೇ ಕೋವಿಡ್ ನಿಯಂತ್ರಣ ಮಾಡಿದ್ದಾರೆ ಎನ್ನುವ ಭ್ರಮೆ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಪರೋಕ್ಷವಾಗಿ ಜಿಲ್ಲಾಧಿಕಾರಿಗೆ ಟಾಂಗ್ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಟೀಂ ವರ್ಕ್, 11 ಕ್ಷೇತ್ರದ ಶಾಸಕರು ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ ಎಂದರು.
ಮೈಸೂರಿನಲ್ಲಿ ಅಧಿಕಾರಿಗಳ ಸಮರ ವಿಚಾರವಾಗಿ ಪ್ರತಿಕ್ರಿಯಿಸಿ ಸಂಜೆ ಮುಖ್ಯ ಕಾರ್ಯದರ್ಶಿಗಳನ್ನ ಭೇಟಿ ಮಾಡುತ್ತೇನೆ. ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ನಾನು ಯಾವುದೇ ಮಾಹಿತಿ ನೀಡಿಲ್ಲ. ಸಿಎಂ ಅವರದ್ದೆ ಆದ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ ಎಂದರು.
ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ ವಿಚಾರವಾಗಿ ಮಾತನಾಡಿದ ಅವರು, ನನ್ನ ರಾಜೀನಾಮೆಯಿಂದ ಮೈಸೂರಿಗೆ ಒಳ್ಳೆಯದಾದರೆ ರಾಜೀನಾಮೆ ನೀಡಲು ಸಿದ್ದ ಎಂದರು. ಎರಡು ಮೂರು ದಿನದಿಂದ ನನ್ನ ಮನಸಿಗೆ ತುಂಬಾ ನೋವಾಗಿದೆ. ಈ ವಿಚಾರವನ್ನು ಸಿಎಂ ಅವರಿಗೂ ಹೇಳಿದ್ದೇನೆ. ಆದ್ದರಿಂದ ದಯಮಾಡಿ ಇದನ್ನು ಸರಿಪಡಿಸಿ ಎಂದು ಮನವಿ ಮಾಡಿದ್ದೇನೆ, ಸಿಎಂ ಬಗ್ಗೆ ವಿಶ್ವಾಸವಿದೆ ಎಂದು ಸೋಮಶೇಖರ್ ಹೇಳಿದರು.
ಇದನ್ನೂ ಓದಿ:ಮೈಸೂರಿನಲ್ಲಿ ಐಎಎಸ್ ಅಧಿಕಾರಿಗಳ ಕಿತ್ತಾಟ: ಶಿಲ್ಪಾ ನಾಗ್ ಪರ ಬ್ಯಾಟ್ ಬೀಸಿದ ಸಚಿವ ಈಶ್ವರಪ್ಪ.
ಮೈಸೂರಿನ ಬೆಳವಣಿಗೆ ನೋಡಿ ನನಗೆ ವೈಯಕ್ತಿಕವಾಗಿ ನೋವಾಗಿದೆ. ಆ ನೋವನ್ನು ನಾನು ಮುಖ್ಯಮಂತ್ರಿಗಳ ಗಮನಕ್ಕೂ ತರುತ್ತೇನೆ, ಈಗಲೂ ಹೇಳಿದ್ದೇನೆ. ನನ್ನ ರಾಜೀನಾಮೆಯಿಂದ ಕೋವಿಡ್ ಕಂಟ್ರೋಲ್ ಆಗುತ್ತದೆ ಎನ್ನುವುದಾದರೆ ರಾಜೀನಾಮೆ ಕೊಡುವೆ. ಕಾಂಗ್ರೆಸ್ ಗೆ ಅದರಿಂದ ಸಂತೋಷ ಆಗೋದಾದರೆ ರಾಜೀನಾಮೆ ಕೊಡುತ್ತೇನೆ. ನನ್ನ ತಪ್ಪೇನು ಅಂತ ಹೇಳಿದರೆ ನಡವಳಿಕೆ ತಿದ್ದುಕೊಳ್ಳುವೆ ಎಂದು ಹೇಳಿದರು.
ಮೈಸೂರಿನಲ್ಲಿ ಡಿಸಿ ಹಾಗೂ ಆಯುಕ್ತೆ ಕಿತ್ತಾಟ ವಿಚಾರವಾಗಿ ಮಾತನಾಡಿ, ಇಲ್ಲಿ ಯಾರು ಸರಿ, ಯಾರು ತಪ್ಪು ಅಂತ ನಾನು ಹೇಳೋದಿಲ್ಲ. ಎಲ್ಲವನ್ನು ಮುಖ್ಯ ಕಾರ್ಯದರ್ಶಿ ಬಂದು ನೋಡಿದ್ದಾರೆ. ಇಲ್ಲಿ ಅವರು ಸಂಗ್ರಹಿಸಿದ ಮಾಹಿಸಿ ಸಿಎಂಗೆ ವರದಿ ಮಾಡುವರು. ನಾನು ಇಂದು ಸಂಜೆ ಅವರ ಬಳಿ ಮಾಹಿತಿ ಪಡೆದುಕೊಳ್ಳುತ್ತೇನೆ. ಮುಖ್ಯಮಂತ್ರಿಗಳೇ ಅಂತಿಮವಾಗಿ ನಿರ್ಧಾರ ಮಾಡಲಿದ್ದಾರೆ ಎಂದರು.