ಶಿವಜಪ, ಅಭಿಷೇಕ, ಭಜನೆ, ಪ್ರಸಾದ

Team Udayavani, Feb 22, 2020, 3:00 AM IST

ಮೈಸೂರು ಜಿಲ್ಲೆಯಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಶಿವನ ದೇಗುಲಗಳು ಸೇರಿದಂತೆ ಹಲವು ದೇವಾಲಯಗಳಲ್ಲಿ ಶಿವನಾಮ ಸ್ಮರಣೆ ಮಾರ್ದನಿಸಿತು. ವಿಶೇಷ ಪೂಜೆ, ಅಭಿಷೇಕ, ಪ್ರಸಾದ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಂಜನಗೂಡು ಶ್ರೀಕಂಠೇಶ್ವರನ ಸನ್ನಿ°ಧಿಯಲ್ಲಿ ಜಾಗರಣೆಗೆ ಭಾರೀ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು.

ಕಪಿಲೆ ನದಿಯಲ್ಲಿ ಮಿಂದೆದ್ದು, ನಂಜುಂಡೇಶ್ವರನ ದರ್ಶನ ಪಡೆದರು. ಅರಮನೆಯ ತ್ರಿಣೇಶ್ವರ ಸ್ವಾಮಿಗೆ ಚಿನ್ನದ ಕೊಳಗ ಧಾರಣೆ ಮಾಡಿ ವಿಶೇಷವಾಗಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಅಗ್ರಹಾರದ ನೂರೆಂಟು ಶಿವಲಿಂಗ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ ವಿಶೇಷವಾಗಿತ್ತು. ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ನಿರಂತರ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸುತ್ತಾ ಭಕ್ತರು ಜಾಗರಣೆ ಮಾಡಿದರು.

ಮೈಸೂರು: ಮಹಾ ಶಿವರಾತ್ರಿ ಪ್ರಯುಕ್ತ ಸಾಂಸ್ಕೃತಿಕ ನಗರಿ ಮೈಸೂರಿನೆಲ್ಲೆಡೆ ಶಿವನಾಮ ಸ್ಮರಣೆ ಜೋರಾಗಿತ್ತು. ನಗರದಲ್ಲಿರುವ ಶಿವನ ದೇಗುಲಗಳು ಸೇರಿದಂತೆ ಹಲವು ದೇವಾಲಯಗಳಲ್ಲಿ ನಡೆದ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡ ಸಹಸ್ರಾರು ಭಕ್ತರು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದು ಪುನೀತರಾದರು.

ತ್ರಿಣೇಶ್ವರಸ್ವಾಮಿ: ಪ್ರಮುಖವಾಗಿ ಅರಮನೆ ಆವರಣದ ತ್ರಿಣೇಶ್ವರಸ್ವಾಮಿ ದೇವಸ್ಥಾನ ಸೇರಿದಂತೆ ಹಲವೆಡೆ ಶಿವ ಭಕ್ತರಿಂದ ಶಿವನಾಮ ಸ್ಮರಣೆ ಜೋರಾಗಿ ಕೇಳಿಬಂತು. ಮಹಾ ಶಿವರಾತ್ರಿಯ ಪ್ರಯುಕ್ತ ಗುರುವಾರವೇ ಚಿನ್ನದ ಕೊಳಗವನ್ನು ಜಿಲ್ಲಾ ಖಜಾನೆಯಿಂದ ತಂದು ತ್ರಿಣೇಶ್ವರ ಸ್ವಾಮಿ ದೇವಸ್ಥಾನದ ಆಡಳಿತ ವರ್ಗಕ್ಕೆ ಒಪ್ಪಿಸಲಾಗಿತ್ತು.

ಶುಕ್ರವಾರ ಮುಂಜಾನೆಯಿಂದಲೇ ಶಿವನಿಗೆ ಗಣಪತಿ ಪೂಜೆ, ಪುಣ್ಯಾಹಃ, ಸ್ನಪನ, ದ್ವಾರ ಪೂಜೆ, ವೃಷಭ ಪೂಜೆ, ಮೂಲ ದೇವರಿಗೆ ಪಂಚಾಮೃತ ಅಭಿಷೇಕ, ಮಹಾನ್ಯಾಸ ಪೂರ್ವಕ ಏಕಾವರ ರುದ್ರಾಭಿಷೇಕ, ನಂತರ ವಿವಿಧ ದ್ರವ್ಯಗಳಿಂದ ಅಭಿಷೇಕ ಮಾಡಿದ ನಂತರ ಬೆಳಗ್ಗೆ 6ಗಂಟೆಗೆ ಜಯ ಚಾಮರಾಜ ಒಡೆಯರ್‌ ಮಾಡಿಸಿಕೊಟ್ಟಿರುವ 11 ಕೇಜಿ ತೂಕದ ಚಿನ್ನದ ಕೊಳಗ ಧಾರಣೆ ಹಾಗೂ ನಕ್ಷತ್ರ ಧಾರಣೆ ಮಾಡಿ ಅಲಂಕರಿಸಿದ ನಂತರ ರಾಷ್ಟ್ರಾಶೀರ್ವಾದ, ಮಂತ್ರ-ಪುಷ್ಪಗಳಿಂದ ವಿಶೇಷ ಪೂಜೆ ಮಾಡಲಾಯಿತು ಎಂದು ಅರ್ಚಕರು ತಿಳಿಸಿದರು.

ಬೆಳಗ್ಗೆ 6ರಿಂದ ರಾತ್ರಿ 12ಗಂಟೆವರೆಗೆ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ರಾಮಾನುಜ ರಸ್ತೆಯಲ್ಲಿರುವ ಶ್ರೀ ಕಾಮಕಾಮೇಶ್ವರಿ ದೇವಾಲಯದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೈಂಕರ್ಯ ಸಭಾ ಹಾಗೂ ಅರಮನೆ ಮುಜರಾಯಿ ಸಂಸ್ಥೆಗಳ ಸಹಯೋಗದೊಂದಿಗೆ ಬೆಳಗ್ಗೆ ವಿಜಯ ವಿಶ್ವೇಶ್ವರ ಸ್ವಾಮಿಗೆ ಏಕಾದಶಾವಾರ ರುದ್ರಾಭಿಷೇಕ ಮಾಡಲಾಯಿತು. ಮಧ್ಯಾಹ್ನ ದೇವಸ್ಥಾನದ ಪ್ರಕಾರಂಗಣದಲ್ಲಿ ಉತ್ಸವ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು.

ದಿನವಿಡೀ ಕಾರ್ಯಕ್ರಮ: ಶುಕ್ರವಾರ ಬೆಳಗ್ಗೆ 10ಗಂಟೆಯಿಂದ ಶನಿವಾರ ಮುಂಜಾನೆ 5.30ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆ 10 ರಿಂದ 10.45ರವರೆಗೆ ಸಪ್ತಾದ್ರಿ ಭಜನಾ ಮಂಡಳಿಯವರಿಂದ ಭಜನೆ, ಬೆಳಗ್ಗೆ 11 ರಿಂದ 11.45ರವರೆಗೆ ಲಲಿತಾ ಪರಮೇಶ್ವರಿ ಭಜನಾ ಮಂಡಳಿಯವರಿಂದ ಭಜನೆ, ಮಧ್ಯಾಹ್ನ 12 ರಿಂದ 12.45ರವರೆಗೆ ಶ್ರೀಹರಿ ಭಜನಾ ಮಂಡಳಿಯವರಿಂದ ಭಜನೆ, ಮಧ್ಯಾಹ್ನ 1 ರಿಂದ 1.45ರವರೆಗೆ ಶ್ರೀಹರಿ ವಾಯು ಭಜನಾ ಮಂಡಳಿಯವರಿಂದ ಭಜನೆ, ಸಂಜೆ 5 ರಿಂದ 6ಗಂಟೆವರೆಗೆ ಮಾಲತಿ ಗೋಪಾಲ ಕೃಷ್ಣ ಅವರಿಂದ ಸಂಗೀತ ಹಾಗೂ ದೇವರನಾಮ,

ಸಂಜೆ 6ರಿಂದ 6.45ರವರೆಗೆ ಶ್ರೀರಾಮ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ, 7 ರಿಂದ 8ಗಂಟೆವರೆಗೆ ರೇಖಾ ಮತ್ತು ಶಾಶ್ವತಿಯವರಿಂದ ಶಾಸ್ತ್ರೀಯ ಸಂಗೀತ, ರಾತ್ರಿ 8 ರಿಂದ 10ಗಂಟೆವರೆಗೆ ನಾಟ್ಯ ಸಂಗೀತ ರಿಸರ್ಚ್‌ ಸಂಸ್ಥೆಯ ಕೆ.ಜಿ.ಗುರುಪ್ರಸಾದ್‌ ಮತ್ತು ವೃಂದದವರಿಂದ ಭಕ್ತಿಗೀತೆಗಳು, ರಾತ್ರಿ 10 ರಿಂದ 11.30ರವರೆಗೆ ಡಾ.ಪದ್ಮಾನಂದ ಮತ್ತು ತಂಡದವರಿಂದ ಸುಗಮ ಸಂಗೀತ, 11.30 ರಿಂದ 1ಗಂಟೆವರೆಗೆ ಶೃತಿ ವಾದ್ಯ ಸಂಗೀತ ಪಾಠಶಾಲೆಯ ದತ್ತಾತ್ರೇಯ ಮತ್ತು ಶಿಷ್ಯರಿಂದ ವಾದ್ಯಸಂಗೀತ, ರಾತ್ರಿ 1 ರಿಂದ 2.30ರವರೆಗೆ ಹಂಸಿನಿ ಎಸ್‌.ಕುಮಾರ್‌ ಮತ್ತು ತಂಡದವರಿಂದ ಸುಗಮ ಸಂಗೀತ,

ರಾತ್ರಿ 2.30 ರಿಂದ 3.30ರವರೆಗೆ ನಾಗೇಂದ್ರ ಮತ್ತು ಸಂಗಡಿಗರಿಂದ ಸುಗಮ ಸಂಗೀತ, ರಾತ್ರಿ 3.30ರಿಂದ ಮುಂಜಾನೆ 5.30ರವರೆಗೆ ಎಚ್‌.ಕೆ.ರವೀಂದ್ರ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭದಿಂದ ಮುಕ್ತಾಯದವರೆಗೂ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ನಿರಂತರ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸುತ್ತಾ ಭಕ್ತರು ಜಾಗರಣೆ ಮಾಡಿದರು.

ಪ್ರಸಾದ ವಿನಿಯೋಗ: ಮಂಡಿ ಮೊಹಲ್ಲಾದ ಉಪ್ಪಿನಕೇರಿಯ ಶ್ರೀ ಚಿಕ್ಕಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಸಂಜೆ ರುದ್ರಾಭಿಷೇಕ ನೆರವೇರಿಸಲಾಯಿತು. ಲಷ್ಕರ್‌ ಮೊಹಲ್ಲಾದ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ 6ಗಂಟೆಗೆ ಶ್ರೀ ಮಹದೇಶ್ವರ ಸ್ವಾಮಿಯ ಪ್ರಾಣಲಿಂಗಕ್ಕೆ ವಿಶೇಷ ಮಹಾ ರುದ್ರಾಭಿಷೇಕ ನೆರವೇರಿಸಲಾಯಿತು. ನಂತರ ಹಾಲಭಿಷೇಕ, ಬಿಲ್ವಾರ್ಚನೆ, ನಿವೇದನೆ, ಧೂಪದಾರತಿ, ತುಪ್ಪದಾರತಿ, ವಿಶೇಷ ಹೂವಿನ ಅಲಂಕಾರ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ಸಂಜೆ 6ಗಂಟೆಗೆ ಸ್ವಾಮಿಯ ಪ್ರಾಣ ಲಿಂಗಕ್ಕೆ ಮಹಾ ರುದ್ರಾಭಿಷೇಕ, ಹಾಲಭಿಷೇಕ, ಬಿಲ್ವಾರ್ಚನೆ, ನಿವೇದನೆ, ಧೂಪದಾರತಿ, ತುಪ್ಪದಾರತಿ, ಹೂವಿನ ಅಲಂಕಾರ, ಮಹಾ ಮಂಗಳಾರತಿ ಮಾಡಿದ ನಂತರ ಸ್ವಾಮಿಯ ಉತ್ಸವ ಮೂರ್ತಿ ಹಾಗೂ ಸುವರ್ಣ ಕೊಳಗದ ಮೆರವಣಿಗೆ ಮಾಡಲಾಯಿತು. ಅಗ್ರಹಾರದ ನೂರೆಂಟು ಶಿವಲಿಂಗ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ ವಿಶೇಷವಾಗಿತ್ತು. ಬೆಳಗ್ಗಿನಿಂದಲೇ ದೇವಸ್ಥಾನಕ್ಕೆ ತೆರಳಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಸಚ್ಚಿದಾನಂದೇಶ್ವರ ಶಿವಲಿಂಗಕ್ಕೆ ಸಹಸ್ರ ಕಲಶಾಭಿಷೇಕ: ನಗರದ ಊಟಿ ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಬೆಳಗ್ಗೆ 6ಕ್ಕೆ ನಾದ ಮಂಟಪದಲ್ಲಿ ಮಹಾಗಣಪತಿ ಹೋಮ, ರುದ್ರಹೋಮ, ಶ್ರೀಚಕ್ರಪೂಜೆ, ಹೋಮಪೂರ್ಣಾಹುತಿ ಜರುಗಿತು. ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಂದ ಸಚ್ಚಿದಾನಂದೇಶ್ವರ ಶಿವಲಿಂಗಕ್ಕೆ ರುದ್ರಾಭಿಷೇಕ, ಭಕ್ತರಿಂದ ಶಿವಲಿಂಗಕ್ಕೆ ಸಹಸ್ರ ಕಲಶಾಭಿಷೇಕ ನಡೆಯಿತು. ಬಳಿಕ ಸಚ್ಚಿದಾನಂದೇಶ್ವರ ಶಿವಲಿಂಗಕ್ಕೆ ರುದ್ರಾಭಿಷೇಕ ಮತ್ತು ಭಕ್ತರಿಂದ ಶಿವಲಿಂಗಕ್ಕೆ ಸಹಸ್ರ ಕಲಶಾಭಿಷೇಕ, ವಿವಿಧ ಅಲಂಕಾರ ನಡೆಯಿತು.

ಶಿವರಾತ್ರಿ ಪ್ರಯುಕ್ತ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಂದ ಶಿವಭಜನೆ, ದಿವ್ಯನಾಮ ಸಂಕೀರ್ತನೆ ನಡೆಯಿತು. ಸಂಜೆ 7ರ ಬಳಿಕ ವಿದುಷಿ ಸರ್ವಪಲ್ಲಿ ಶ್ರೇಯ ಮತ್ತು ವಿದುಷಿ ರಾಜಲಕ್ಷ್ಮೀ ಅವರಿಂದ ಕರ್ನಾಟಕ ಸಂಗೀತ ದ್ವಂದ್ವ ಗಾಯನ, ವಿದುಷಿ ಸರ್ವಪಲ್ಲಿ ಸನ್ಮತಿ ವಾರಾಣಸಿ ಮತ್ತು ವಿದುಷಿ ಶ್ರೀಕೃತಿ ವಾರಾಣಸಿ ಅವರಿಂದ ಕರ್ನಾಟಕ ಸಂಗೀತ ದ್ವಂದ್ವ ಗಾಯನ, ಡಿವೈನ್‌ ಮೆಲೋಡಿಸ್‌, ಕದ್ರಿ ಮಣಿಕಂಠ ಮತ್ತು ಸಂಗಡಿಗರಿಂದ ಸಂಗೀತ, ರಾತ್ರಿ 12ಗಂಟೆಗೆ ಭಕ್ತರಿಂದ ಶ್ರೀ ದತ್ತ ಮತ್ತು ಆನಘ ಲಕ್ಷ್ಮೀ ವ್ರತ ನೆರವೇರಿತು.

ಶಿವಾಲಯಗಳಲ್ಲಿ ಭಕ್ತಿಯ ಜಾಗರಣೆ: ಶಿವರಾತ್ರಿ ಸಂಭ್ರಮದ ನಡುವೆ ಎಲ್ಲಾ ದೇವಾಲಯಗಳಲ್ಲಿ ಶಿವ ನಾಮ ಸ್ಮರಣೆ ಕೇಳಿಬಂತು. ಶಿವರಾತ್ರಿ ಅಂಗವಾಗಿ ನಗರದ ಶಿವನ ದೇಗುಲಗಳು ಸೇರಿದಂತೆ ಇನ್ನಿತರ ದೇವಸ್ಥಾನಗಳಲ್ಲಿ ಶಿವಸ್ತುತಿ ಜೋರಾಗಿತ್ತು. ದೇವರಾಜ ಮೊಹಲ್ಲಾದ ಶ್ರೀ ಅಮೃತೇಶ್ವರ ಸ್ವಾಮಿ ದೇವಸ್ಥಾನ, ವಾಣಿ ವಿಲಾಸ ಮೊಹಲ್ಲಾದ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ದೇವಸ್ಥಾನ, ಅಶೋಕ ರಸ್ತೆಯ ಶ್ರೀ ಮುಕ್ಕಣ್ಣೇಶ್ವರ ಸ್ವಾಮಿ ದೇವಸ್ಥಾನ, ಬೋಗಾದಿ 2ನೇ ಹಂತದ ಶ್ರೀಶಿರಡಿ ಸಾಯಿ ಸೇವಾಶ್ರಮ ಟ್ರಸ್ಟ್‌ನಿಂದ ಶಿವರಾತ್ರಿ ಅಂಗವಾಗಿ ಶಿವಗಣ ಹೋಮ, ಸಂಕಲ್ಪ, ಪುಷ್ಪಾರ್ಚನೆ, ಅಭಿಷೇಕ, ಭಜನೆ, ಪ್ರಸಾದ ವಿನಿಯೋಗ ನಡೆಯಿತು.

ಗಂಗೋತ್ರಿ ಬಡಾವಣೆಯ ಮಾರುತಿ ದೇವಸ್ಥಾನ, ಹಳೇ ಸಂತೇಪೇಟೆಯ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ದೇವಸ್ಥಾನ, ಖೀಲ್ಲೆ ಮೊಹಲ್ಲಾ ಭೈರವೇಶ್ವರಸ್ವಾಮಿ ದೇವಸ್ಥಾನ, ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನ, ನಾಗಲಿಂಗೇಶ್ವರ ಮಠ, ವಿಜಯನಗರದ ಯೋಗಾ ನರಸಿಂಹಸ್ವಾಮಿ ದೇವಸ್ಥಾನ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ, ಜಾಗರಣೆ ಜೋರಾಗಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ