ಕಬ್ಬಿನ ಬಾಕಿ ಹಣ ಕೊಡಿಸದಿದ್ದರೆ ಕಚೇರಿಗೆ ಮುತ್ತಿಗೆ

Team Udayavani, May 16, 2019, 3:00 AM IST

ಮೈಸೂರು: ರಾಜ್ಯದ ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡಿದ ರೈತರಿಗೆ ಬಾಕಿ ಉಳಿಸಿಕೊಂಡಿರುವ 4 ಸಾವಿರ ಕೋಟಿ ಹಣವನ್ನು ಮೇ 25ರೊಳಗೆ ಕೊಡಿಸಲು ಗಂಭೀರ ಕ್ರಮ ಕೈಗೊಳ್ಳದಿದ್ದಲ್ಲಿ ಬೆಂಗಳೂರಿನಲ್ಲಿರುವ ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಎಚ್ಚರಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 67 ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಸರಬರಾಜು ಮಾಡಿದ ರೈತರಿಗೆ ನಾಲ್ಕು ಸಾವಿರ ಕೋಟಿ ಬಾಕಿ ಬರಬೇಕಿದೆ. ಆದರೆ, ಈ ಹಣವನ್ನು ಕಾರ್ಖಾನೆಗಳಿಂದ ರೈತರಿಗೆ ಕೊಡಿಸಲು ಸರ್ಕಾರ ಗಂಭೀರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಸಿಎಂ ಉದಾಸೀನ: ಬರಗಾಲದ ಬಗ್ಗೆ ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಕುಳಿತು ಸಭೆ ಮಾಡಿದರೆ ಸಾಲದು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಆಯಾಯ ಜಿಲ್ಲೆಗಳಲ್ಲಿ ಸಭೆ ನಡೆಸಿ ರೈತರ ಸಮಸ್ಯೆಗಳನ್ನು ಅರಿತು, ಬರ ಪರಿಹಾರಕ್ಕೆ ಕಾರ್ಯಕ್ರಮ ರೂಪಿಸಬೇಕು. ಚುನಾವಣೆ ಮುಗಿದು ತಿಂಗಳಾಗುತ್ತಾ ಬಂದರು ಇನ್ನೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದು ಸರಿಯಲ್ಲ.

ಜನಸಾಮಾನ್ಯರಿಗೆ ಇದರಿಂದ ತೊಂದರೆಯಾಗುತ್ತಿದ್ದು, ಚುನಾವಣಾ ಆಯೋಗ ಕೂಡಲೇ ನಿಂತಿ ಸಂಹಿತೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ ಅವರು, ಇನ್ನೂ ಚುನಾವಣೆ ಗುಂಗಿನಲ್ಲೇ ಇರುವ ಸರ್ಕಾರ ಮತ್ತು ಮಂತ್ರಿಗಳು ನಿದ್ರಾವಸ್ಥೆಯಿಂದ ಎಚ್ಚರಗೊಳ್ಳಬೇಕು ಎಂದರು.

ನರೇಗಾ ಯೋಜನೆ: ಬರಗಾಲದ ಕಾಮಗಾರಿ ಮತ್ತು ಕೃಷಿ ಚಟುವಟಿಕೆಯನ್ನೂ ನರೇಗಾ ಯೋಜನೆ ವ್ಯಾಪ್ತಿಗೆ ತಂದು ಬರ ಪರಿಸ್ಥಿತಿಯ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕು. ಬರದಿಂದಾದ ನಷ್ಟ ಕೊಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೇಸ್‌ ಹಿಂಪಡೆಯಿರಿ: ರಾಜ್ಯ ಸರ್ಕಾರ ತಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರ ಮೇಲಿನ ಪೊಲೀಸ್‌ ಮೊಕದ್ದಮೆಗಳನ್ನು ಹಿಂಪಡೆಯುತ್ತಿದೆ. ಆದರೆ, ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ನಡೆಸಿದ ರೈತ ಮುಖಂಡರ ವಿರುದ್ಧ ಹೂಡಲಾಗಿರುವ ಮೊಕದ್ದಮೆಗಳನ್ನು ಹಿಂಪಡೆಯದೆ ನಾಟಕವಾಡುತ್ತಿದೆ ಎಂದು ದೂರಿದರು.

ರೈತರ ಸಭೆ: ರಾಜ್ಯದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸರ್ಕಾರದ ಗಮನ ಸೆಳೆಯುವ ಹೋರಾಟ ರೂಪಿಸಲು ಮೇ 20ರಂದು ಮಧ್ಯಾಹ್ನ 2ಗಂಟೆಗೆ ಮೈಸೂರಿನ ಚೇತನ್‌ ಗಾರ್ಡನ್‌ನಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿಣಿ ಸಭೆ ಕರೆಯಲಾಗಿದೆ ಎಂದು ಕುರುಬೂರು ಶಾಂತಕುಮಾರ್‌ ತಿಳಿಸಿದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್‌, ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್‌, ಪ್ರಧಾನಕಾರ್ಯದರ್ಶಿ ಕಿರಗಸೂರು ಶಂಕರ್‌, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್‌, ಬರಡನಪುರ ನಾಗರಾಜ್‌, ಹಾಡ್ಯರವಿ ಸುದ್ದಿಗೊಷ್ಠಿಯಲ್ಲಿ ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ