ರೈತರಿಂದ ಶೀಘ್ರ ರಾಜಭವನ ಚಲೋ

ಬರ ನಿರ್ವಹಣೆಯಲ್ಲಿ ವಿಫ‌ಲ • ಜುಲೈ ಮೊದಲ ವಾರದಲ್ಲಿ ರಾಜಭವನ ಮುತ್ತಿಗೆ: ನಾಗೇಂದ್ರ

Team Udayavani, Jun 21, 2019, 2:16 PM IST

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಾವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು. ಎಚ್.ಸಿ.ಲೋಕೇಶ್‌ರಾಜ್‌ ಅರಸ್‌ ಇತರರಿದ್ದರು.

ಮೈಸೂರು: ರಾಜ್ಯದಲ್ಲಿ ಎದುರಾಗಿರುವ ಬರದ ಸಮಸ್ಯೆಗೆ ಸ್ಪಂದಿಸಲು ರಾಜ್ಯ ಸರ್ಕಾರ ವಿಫ‌ಲವಾಗಿದ್ದು, ರಾಜ್ಯ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಒತ್ತಾಯಿಸಿ ರೈತರಿಂದ ರಾಜಭವನ ಚಲೋ ಕಾರ್ಯಕ್ರಮ ವನ್ನು ಜುಲೈ ತಿಂಗಳ ಮೊದಲ ವಾರದಲ್ಲಿ ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಸಂಘವು ಮುಂಬೈ ಮತ್ತು ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಬರ ಅಧ್ಯಯನ ನಡೆಸಿದ್ದು, ಆ ಭಾಗದ ರೈತರು, ಕಾರ್ಮಿಕರು, ಜನಸಾಮಾನ್ಯರು ಬರದಿಂದ ತತ್ತರಿಸಿದ್ದಾರೆ. ಮಧ್ಯ ಕರ್ನಾಟಕ, ಹಳೇ ಮೈಸೂರು, ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲೂ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಆಡಳಿತ ಮತ್ತು ವಿರೋಧ ಪಕ್ಷಗಳು ರೈತರ ನೆರವಿಗೆ ಧಾವಿಸುತ್ತಿಲ್ಲ. ಆದ್ದರಿಂದ ಕೂಡಲೆ ರಾಜ್ಯಪಾಲರು ರೈತರ ನೆರವಿಗೆ ಧಾವಿಸಬೇಕು ಎಂದು ಬೆಂಗಳೂರು ರೈಲ್ವೆ ನಿಲ್ದಾಣದಿಂದ ರಾಜ್ಯಪಾಲರ ನಿವಾಸವಾದ ರಾಜ್‌ಭವನದ ವರೆಗೆ ರಾಜ್‌ಭವನ್‌ ಚಲೋ ಹಮ್ಮಿಕೊಂಡಿರು ವುದಾಗಿ ಗುರುವಾರ ನಡೆದ ಸುದ್ದಿಗೋಷ್ಠಿ ಯಲ್ಲಿ ಹೇಳಿದರು.

ಕಬ್ಬು ಬಾಕಿ ಪಾವತಿಗೆ ಕ್ರಮ ಕೈಗೊಳ್ಳಿ: ರಾಜ್ಯದ ಸಕ್ಕರೆ ಕಾರ್ಖಾನೆಗಳು ಕೋಟ್ಯಂತರ ರೂ. ರೈತರ ಬಾಕಿಯನ್ನು ಉಳಿಸಿಕೊಂಡಿದ್ದು, ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಕ್ಕರೆ ಜಪ್ತಿಗೆ ಕ್ರಮ ಕೈಗೊಂಡು, ರೈತರ ಬಾಕಿಯನ್ನು ಕೊಡಿಸಬೇಕು. ಸರ್ಕಾರದ ಮಧ್ಯಸ್ಥಿಕೆಯಲ್ಲಿ ಒಪ್ಪಿಕೊಂಡಿರುವಂತೆ ಹೆಚ್ಚುವರಿ ಬೆಲೆಯನ್ನು ಕೊಡಿಸಲು ಸರ್ಕಾರ ಮುಂದಾಗಬೇಕು. ಈ ಸಾಲಿನ ಕಬ್ಬಿಗೆ ಸರ್ಕಾರ ಬೆಲೆ ನಿಗದಿ ಮಾಡ ಬೇಕು. ಮಂಡ್ಯದ ಮೈಷುಗರ್‌, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಮತ್ತು ಚುಂಚನಕಟ್ಟೆಯ ಸಹಕಾರ ಸಕ್ಕರೆ ಕಾರ್ಖಾನೆ ಗಳು ನಿಂತು ಹೋಗಿದ್ದು, ಕೂಡಲೇ ಸರ್ಕಾರ ಈ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಅರೆಸ ಬೇಕೆಂದು ಒತ್ತಾಯಿಸಿದರು.

ದುಂಡು ಮೇಜಿನ ಸಭೆ: ಕೊಡಗು ಜಿಲ್ಲೆ ಗೋಣಿಕೊಪ್ಪದಲ್ಲಿ ಮೈಸೂರು ವಿಭಾಗದ ಪದಾಧಿಕಾರಿಗಳ ಸಭೆ ಹಾಗೂ ಕಾಫಿ ಹಾಗೂ ಮೆಣಸು ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚಿ ಸಲು ದುಂಡು ಮೇಜಿನ ಸಭೆಯನ್ನು ಜೂ.23 ರಂದು ಬೆಳಗ್ಗೆ 11 ಗಂಟೆಗೆ ಗೋಣಿಕೊಪ್ಪದ ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದರು.

24ರಂದು ಪ್ರತಿಭಟನೆ: ಸಾಲಮನ್ನಾದ ಕುರಿತು ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿ, ಭತ್ತ ಖರೀದಿ ಕೇಂದ್ರ ತೆರೆಯಲು, ಪವರ್‌ಗ್ರಿಡ್‌ ವಿದ್ಯುತ್‌ ಮಾರ್ಗವನ್ನು ಬದಲಾಯಿಸಿ ರೈತರ ಭೂಮಿಯನ್ನು ಉಳಿಸಲು, ಸರ್ಕಾರಿ ಭೂ ಒತ್ತುವರಿಯನ್ನು ತೆರವು ಮಾಡಿಸಲು ಮತ್ತು ಜಿಲ್ಲೆಯ ಇತರೆ ಸಮಸ್ಯೆಗಳ ಪರಿಹಾರಕ್ಕೆ ಒತ್ತಾ ಯಿಸಿ ಜೂ.24 ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್‌ ಪ್ರತಿಭಟನಾ ಸಭೆ ಏರ್ಪಡಿಸ ಲಾಗಿದೆ. ಅಂದು ಬೆಳಗ್ಗೆ 11 ಗಂಟೆಗೆ ಗನ್‌ಹೌಸ್‌ ಸರ್ಕಲ್ನಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ತಲುಪಲಿದೆ ಎಂದು ಮಾಹಿತಿ ನೀಡಿದರು.

ಸತ್ಯಶೋಧನ ಸಮಿತಿ ರಚಿಸಿ: ಗುಂಡ್ಲುಪೇಟೆ ತಾಲೂಕಿನ ಯುವಕನ ಬೆತ್ತಲೆ ಮೆರವಣಿಗೆ ಘಟನೆಗೆ ಸಂಬಂಧಿಸಿದಂತೆ ಸತ್ಯಶೋಧನ ಸಮಿತಿ ರಚನೆಯಾಗಬೇಕು. ಘಟನೆಯ ಸತ್ಯ ಸಮಾಜಕ್ಕೆ ತಿಳಿಯಬೇಕು. ಸಮಾಜ ತಿಳಿ ಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘ‌ದ ರಾಜ್ಯ ಮುಖಂಡರಾದ ಎಚ್.ಸಿ.ಲೋಕೇಶ್‌ರಾಜ್‌ ಅರಸ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್‌, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌, ಮುಖಂಡರಾದ ಹುಣಸೂರು ಬಸವರಾಜ್‌ ಭಾಗವಹಿಸಿದ್ದರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ