ದುರಾಸೆಯಿಂದ ಪಕ್ಷ ಬಿಟ್ಟವರಿಗೆ ತಕ್ಕ ಪಾಠ ಕಲಿಸಿ

Team Udayavani, Oct 21, 2019, 3:00 AM IST

ಮೈಸೂರು: ತಾವು ಗೆದ್ದ ಪಕ್ಷಕ್ಕೆ ದ್ರೋಹ ಮಾಡಿ, ಬೇರೊಂದು ಪಕ್ಷದ ಆಸೆ, ಆಮೀಷಕ್ಕೆ ಒಳಗಾಗಿ, ಅಧಿಕಾರದ ವ್ಯಾಮೋಹದಿಂದ ಪಕ್ಷ ತೊರೆದಿರುವವರಿಗೆ ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು. ನಗರದ ವಾಲ್ಮೀಕಿ ಭ‌ವನದಲ್ಲಿ ನಡೆದ ಹುಣಸೂರು ತಾಲೂಕು ಕುರುಬ ಸಮಾಜದವರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 17 ಶಾಸಕರು ಜನರಿಗೆ ದ್ರೋಹ ಮಾಡಿ ಪಕ್ಷ ಬಿಟ್ಟಿದ್ದಾರೆ.

ನಾನು ಸ್ಪೀಕರ್‌ಗೆ ರಾಜೀನಾಮೆ ಅಂಗೀಕರಿಸದಂತೆ ಪತ್ರ ಬರೆದಿದ್ದೆ. ಇವರೆಲ್ಲ ರಾಜೀನಾಮೆ ನೀಡಿ ಬಾಂಬೆಗೆ ಹೋದರು. ನಿಜವಾಗಿಯೂ ಇವರು ಬಿಜೆಪಿ ಜೊತೆ ಸೇರಿದ್ದಾರೆ. ಬಿಜೆಪಿಯಿಂದಲೇ ಇವರು ಭ್ಯರ್ಥಿ ಆಗುತ್ತಾರೆ. ಹೀಗಾಗಿ ಅಧಿಕಾರದ ದುರಾಸೆಯಿಂದ ಪಕ್ಷ ಬಿಟ್ಟಿರುವವರಿಗೆ ತಕ್ಕ ಪಾಠ ಕಲಿಸಬೇಕು. ಹುಣಸೂರಿನಲ್ಲಿ ಯಾರೇ ಅಭ್ಯರ್ಥಿಯಾದರೂ ನನ್ನೊಂದಿಗೆ ಕಲ್ಲುಬಂಡೆಯಂತೆ ಇರುವ ಎಚ್‌.ಪಿ.ಮಂಜುನಾಥ್‌ ಗೆಲ್ಲಿಸಿ ಎಂದು ಹೇಳಿದರು.

ಮಂಜುನಾಥ್‌ ಜಾತಿ, ಭೇದ ಗೊತ್ತಿಲ್ಲ. ಹುಣಸೂರಿನಲ್ಲಿ ಇವನನ್ನು ಗೆಲ್ಲಿಸಿದರೆ, ನನ್ನನ್ನು ಗೆಲ್ಲಿಸಿದಂತೆ. ನಿಮಗೆ ಬಿಜೆಪಿ ಬೇಕಾ, ನಾನು ಬೇಕಾ? ಅರಸು ಬಿಟ್ಟರೆ 5 ವರ್ಷ ಸಂಪೂರ್ಣ ಆಡಳಿತ ನಡೆಸಿದವನು ನಾನು. ನನ್ನನ್ನು ಸಿಎಂ ಮಾಡಿದ ಜನರಿಗೆ ಕಪ್ಪುಚುಕ್ಕೆ ಆಗದಂತೆ ಆಡಳಿತ ನಡೆಸಿದ್ದೇನೆ. ಜನರಿಗೆ ಅನ್ಯಾಯ ಮಾಡಿದ್ದೆನಾ? ನಿಮ್ಮ ಋಣ ನನ್ನ ಮೇಲೆ. ಬೆಟ್ಟದಷ್ಟಿದ್ದು, ನಿಮ್ಮ ಆಶೀರ್ವಾದ ಇರುವವರೆಗೆ ರಾಜಕೀಯದಲ್ಲಿ ಇರುತ್ತೇನೆ. ನೀವು ಕೈಬಿಟ್ಟರೆ, ನಾನು ಸೋತಂತೆ. ನನ್ನ ಕೈ ಡಿಯುತ್ತೀರಲ್ವಾ? ಎಂದು ಪ್ರಶ್ನಿಸಿದರು.

ರಾಜಕೀಯದಲ್ಲಿ ಇರಲು ಯೋಗ್ಯರಲ್ಲ: ಒಂದೂವರೆ ವರ್ಷವಾಗದಿದ್ದರೂ ಹುಣಸೂರಿನಲ್ಲಿ ಮತ್ತೆ ಉಪ ಚುನಾವಣೆ ಬಂದಿದೆ. ನಾವು ಯಾರೂ ಇದನ್ನು ನಿರೀಕ್ಷಿಸಿರಲಿಲ್ಲ. ನಮ್ಮ ಪಕ್ಷದಲ್ಲಿ ಗೆದ್ದಿದ್ದ 14 ಮಂದಿ ಮತ್ತು ಜೆಡಿಎಸ್‌ನ ಮೂವರು ಶಾಸಕರು ರಾಜೀನಾಮೆ ನೀಡಿದ್ದರಿಂದ ಉಪ ಚುನಾವಣೆ ಬಂದಿದೆ. ದನ, ಕುರಿ, ಕೋಳಿ ಕೊಂಡುಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಶಾಸಕರೇ ವ್ಯಾಪಾರವಾಗಿದ್ದಾರೆ. ಇವರು ರಾಜಕೀಯದಲ್ಲಿ ಇರಲು ಯೋಗ್ಯರೇ ಎಂದರು.

ವಿಶ್ವನಾಥ್‌ಗೆ ಸುಳ್ಳು ಹೇಳುವುದು ಬಿಟ್ಟು ಬೇರೇನು ಗೊತ್ತಿಲ್ಲ. ಸಿದ್ದರಾಮಯ್ಯನ ಹಿಂಸೆ ತಡೆಯಲಾಗದೆ ಕಾಂಗ್ರೆಸ್‌ ಬಿಟ್ಟು, ಜೆಡಿಎಸ್‌ಗೆ ಹೋದೆ ಎಂದು ಹೇಳುತ್ತಾರೆ. ಇವರು ಜೆಡಿಎಸ್‌ನಿಂದ ಹೊರ ಬಂದಿದ್ದಾರಲ್ಲ. ಈಗ ನಾನು ತೊಂದರೆ ಕೊಟ್ಟಿದ್ದನಾ? ಇಷ್ಟಾದ ಮೇಲೆ ನೀವು ಎಚ್‌.ಪಿ.ಮಂಜುನಾಥ್‌ ಗೆಲ್ಲಿಸಬೇಕೊ ಬೇಡವೋ ಎಂದು ಪ್ರಶ್ನಿಸಿದರು.

ವಿಶ್ವನಾಥ್‌ಗೆ ನನ್ನಿಂದ ಅನ್ಯಾಯವಾಗಿಲ್ಲ: ನನ್ನಿಂದ ವಿಶ್ವನಾಥ್‌ಗೆ ಅನ್ಯಾಯವಾಗಲಿ, ತೊಂದರೆಯಾಗಲಿ ಆಗಿಲ್ಲ. ಅನ್ಯಾಯ, ತೊಂದರೆ ಆಗಿದ್ದರೆ ಅದು ಮಾಜಿ ಶಾಸಕ ದಿವಂಗತ ಮಂಚನಹಳ್ಳಿ ಮಹದೇವ್‌ಗೆ. 2008ರಲ್ಲಿ ವಿಧಾನಸಭಾ ಚುನಾವಣೆಗೆ ಹಿರಿಯ ರಾಜಕಾರಣಿ, ಮುತ್ಸದ್ಧಿಯಾಗಿದ್ದ ಮಂಚನಹಳ್ಳಿ ಮಹದೇವ್‌ಗೆ ಟಿಕೆಟ್‌ ಕೊಡಬೇಕು ಎಂದು ಹೈಕಮಾಂಡ್‌ನಿಂದ ತೀರ್ಮಾನವಾಗಿತ್ತು.

ಅವರು ಆಗ ಹಾಲಿ ಶಾಸಕರು ಮತ್ತು ಪ್ರತಿಭಾವಂತ ರಾಜಕಾರಣಿಯೂ ಆಗಿದ್ದರು. ಈ ಸಂದಭ‌ìದಲ್ಲಿ ವಿಶ್ವನಾಥ್‌ ನನ್ನ ಬಳಿ ಬಂದು ನಾನು ಹಿರಿಯ ರಾಜಕಾರಣಿ ನನಗೆ ಈ ಬಾರಿ ಎಂಎಲ್‌ಎ ಟಿಕೆಟ್‌ ನೀಡುವಂತೆ ಕೇಳಿದರು. ನಾನು ವಿಧಿ ಇಲ್ಲದೆ ಮಹದೇವ್‌ಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒಪ್ಪಿಸಿ, ವಿಶ್ವನಾಥ್‌ಗೆ ಟಿಕೆಟ್‌ ಕೊಟ್ಟೆ. ಆದರೂ ಸೋತರು. ಸೋತು ಮನೆಯಲ್ಲಿ ಇರಬೇಕಿತ್ತು,

ಮತ್ತೆ 2009ರ ಲೋಕಸಭಾ ಚುನಾವಣೆಯಲ್ಲಿಯೂ ನನಗೆ ಟಿಕೆಟ್‌ ನೀಡುವಂತೆ ಕೇಳಿಕೊಂಡು ಬಂದ. ವಿಶ್ವನಾಥ್‌ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದರಿಂದ ಕೊನೆಯ ಅವಕಾಶ ನೀಡೋಣ ಎಂದು ಮತ್ತೆ ಮಹದೇವ್‌ ಮನವೊಲಿಸಿದೆ. ಆ ಚುನಾವಣೆಯಲ್ಲಿ ವಿಶ್ವನಾಥ್‌ ಗೆದ್ದ, ದುರಾದೃಷ್ಟವಶಾತ್‌ ಮಹದೇವ್‌ ನಿಧ‌ನರಾದರು. 2014ರ ಲೋಕಸಭೆಗೆ ಟಿಕೆಟ್‌ ಪಡೆದು ಸೋತ. ಆಗಲಾದರೂ ಮನೆಯಲ್ಲಿ ಕೂರಬೇಕಿತ್ತು.

ಮತ್ತೆ ನನ್ನ ಮೇಲೆಯೇ ಬಾಣ ಬಿಡಲು ಆರಂಭಿಸಿದ. ನನ್ನ ಲಂಚಕೋರ, ಭ್ರಷ್ಟಾಚಾರಿ ಎಂದು ಸೋನಿಯಾಗಾಂಧಿಗೆ ದೂರು ನೀಡಿ, ಸಿಎಂ ಸ್ಥಾನದಿಂದ ಕೆಳಗಿಳಿಸಿ ಎಂದು ಪತ್ರ ಬರೆದರು. ಅದು ನನಗೆ ಬೇಸರವಾಗಿ ನಾನು ಮಾತನಾಡುವುದನ್ನು ಬಿಟ್ಟೆನೆ ಹೊರತು ಹಿಂಸೆ ನೀಡಿಲ್ಲ ಎಂದು ವಾಗ್ಧಾಳಿ ನಡೆಸಿದರು. ನಾನೇನಾದರೂ ಅನ್ಯಾಯ ಮಾಡಿದ್ದರೆ ಅದು ಮಂಚನಹಳ್ಳಿ ಮಹದೇವ್‌ಗೆ ಹೊರತು, ವಿಶ್ವನಾಥ್‌ಗೆ ಅಲ್ಲ.

ಆದರೆ ಸಿದ್ದರಾಮಯ್ಯನ ಹಿಂಸೆ ತಾಳಲಾರದೆ ಜೆಡಿಎಸ್‌ಗೆ ಹೋದೆ ಎಂದು ಹೇಳಿದ್ದು ಯಾಕೆ? ನನ್ನನ್ನು ಸಿಎಂ ಮಾಡಿದ್ದು ವಿಶ್ವನಾಥ್‌ ಅಲ್ಲ, ರಾಜ್ಯದ ಜನತೆ ಮತ್ತು ನೀವು. ಯಾರಾದರೂ ಈ ರೀತಿ ಪತ್ರ ಬರೆಯುತ್ತಾರಾ? ಜೊತೆಯಲ್ಲೇ ಇದ್ದುಕೊಂಡು ಹೀಗೆ ಮಾಡಬಹುದಾ? ನಾನು ದೇವರಾಜ ಅರಸರ ಶಿಷ್ಯ ಎನ್ನುವ ವಿಶ್ವನಾಥ್‌, 1980ರಲ್ಲಿ ಡಿ.ದೇವರಾಜ ಅರಸು ಸೋತ ಮಾರನೇ ದಿನವೇ ಗುಂಡುರಾವ್‌ ಅವರ ಮನೆಯಲ್ಲಿ ಇದ್ದರು. ಈಗ ನೋಡಿದರೆ ಡಿ.ದೇವರಾಜ ಅರಸು ಅವರ ಹೆಸರಿನಲ್ಲಿ ಜಿಲ್ಲೆ ಮಾಡಬೇಕು ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಚಾಮರಾಜನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡಿದವರು ನಾವು. ಈಗ ಏಕೆ ಇವರಿಗೆ ಪ್ರತ್ಯೇಕ ಜಿಲ್ಲೆ ಬೇಕು. ಮೊದಲಿನಿಂದಲೂ ನಿರಂತರವಾಗಿ ಹೋರಾಟ ನಡೆಸಿದ್ದರೆ ಒಪ್ಪಬಹುದು. ಆದರೆ ಚುನಾವಣೆಗಾಗಿ ಪ್ರತ್ಯೇಕ ಜಿಲ್ಲೆ ಕೇಳುವುದು ಸರಿಯಲ್ಲ. ಇದಕ್ಕೆ ರಾಜಕೀಯ ಬಣ್ಣ ಕಟ್ಟಲು ಹೋಗಬಾರದು ಎಂದರು. ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ಜಯಕುಮಾರ್‌ ಸೇರಿದಂತೆ ಇನ್ನಿತರರು ಹಾಜರಿದ್ದರು.

ನಿಮ್ಮ ಒಂದೊಂದು ವೋಟು ಸಿದ್ದರಾಮಯ್ಯಗೆ: ಹುಣಸೂರು ಉಪ ಚುನಾವಣೆಯಲ್ಲಿ ವಿಶ್ವನಾಥ್‌ ನಿಲ್ಲಲಿ. ಬಿಜೆಪಿ-ಜೆಡಿಎಸ್‌ನಿಂದ ಯಾರೇ ನಿಲ್ಲಲ್ಲಿ ನೀವು ಮಂಜುನಾಥ್‌ ಕೈ ಬಿಡಬೇಡಿ. ತಂದೆ ತಾಯಿಯಂತೆ ನಿಂತು ಆಶೀರ್ವದಿಸಿ. ನಾನು ಮತ್ತೂಮ್ಮೆ ಕಾರ್ಯಕರ್ತರು ಮತ್ತು ಸಾರ್ವಜನಿಕ ಸಭೆಗೆ ಬರುತ್ತೇನೆ. ನನ್ನ ಬಗ್ಗೆಯಾಗಲಿ, ಮಂಜುನಾಥ್‌ ಬಗ್ಗೆಯಾಗಲಿ ಯಾರಾದರೂ ಅಪಪ್ರಚಾರ ಮಾಡಿದರೆ ಅವರ ಮಾತು ಕೇಳಬೇಡಿ. ದಲಿತರು, ಹಿಂದುಳಿದವರು, ಬಡವರು, ಅಲ್ಪಸಂಖ್ಯಾತರು ನನ್ನ ಕೈ ಹಿಡಿದಿದ್ದಾರೆ. ಅವರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡಿದ್ದೇನೆ. ರಾಜಕೀಯದಲ್ಲಿ ಕೆಲಸ ಮಾಡುವವರು ಮುಖ್ಯ. ಆದ್ದರಿಂದ ನಿಮ್ಮ ಒಂದೊಂದು ವೋಟು ಸಿದ್ದರಾಮಯ್ಯಗೆ ಎಂಬುದನ್ನು ಮರೆಯಬೇಡಿ ಎಂದು ಹೇಳಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ