ಯೋಗ ಮಹತ್ವ ತಿಳಿಸಿಕೊಟ್ಟ ಡಾ| ಗಣಪತಿ ಸಚ್ಚಿದಾನಂದ ಸ್ವಾಮೀಜಿ

Team Udayavani, Jun 22, 2019, 3:00 AM IST

ಮೈಸೂರು: ವಿಶ್ವ ಯೋಗ ದಿನಾಚರಣೆ ಅಂಗವಾಗಿ ನಗರದ ರೇಸ್‌ಕೋಸ್‌ನಲ್ಲಿ ನಡೆದ ಬೃಹತ್‌ ಯೋಗ ಪ್ರದರ್ಶನದ ಜೊತೆಗೆ ನಾನಾ ಸಂಘ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರತ್ಯೇಕವಾಗಿ ಯೋಗ ಪ್ರದರ್ಶನ ನಡೆಸಿದವು. ಯೋಗದಿಂದಾಗುವ ಪ್ರಯೋಜನ, ಅದರ ಮಹತ್ವ, ಯೋಗದಿಂದ ಆರೋಗ್ಯ ಉತ್ತಮವಾಗಿ ಇಟ್ಟುಕೊಳ್ಳುವ ವಿಷಯ ಸೇರಿದಂತೆ ಹಲವು ವಿಚಾರಗಳ ಕುರಿತು ಉಪನ್ಯಾಸ ಕಾರ್ಯಕ್ರಮವೂ ನಡೆಯಿತು.

ಮಕ್ಕಳಿಂದ ಯೋಗ: ಅವಧೂತ ದತ್ತಪೀಠದ ನಾದಮಂಟಪದಲ್ಲಿ ಯೊಗ ಪ್ರದರ್ಶನ ಹಾಗೂ ರಂಗರಾವ್‌ ಅಂಗವಿಕಲರ ಶಾಲೆಯಲ್ಲಿ ದೃಷ್ಟಿವಿಶೇಷಚೇತನ ಮಕ್ಕಳಿಂದ ಯೋಗ ಪ್ರದರ್ಶನ ಗಮನ ಸೆಳೆಯಿತು. ನಂಜನಗೂಡು ರಸ್ತೆಯಲ್ಲಿರುವ ಅವದೂತ ದತ್ತ ಪೀಠ, ದತ್ತ ಕ್ರಿಯಾ (ಅಂತಾರಾಷ್ಟ್ರೀಯ)ಯಿಂದ ಆಶ್ರಮದ ನಾದ ಮಂಟಪದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಯಿತು.

ಡಾ.ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಕಿರಿಯ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಸಮ್ಮುಖದಲ್ಲಿ ಯೋಗ ಕಾರ್ಯಕ್ರಮ ನಡೆಸಿ ಯೋಗದ ಮಹತ್ವ ತಿಳಿಸಿಕೊಡಲಾಯಿತು. ಎನ್‌.ಆರ್‌.ರಂಗರಾವ್‌ ಸ್ಮಾರಕ ಅಂಗವಿಕಲ ಶಾಲೆಯ 40ಕ್ಕೂ ಹೆಚ್ಚು ದೃಷ್ಟಿ ವಿಶೇಷಚೇತನ ಮಕ್ಕಳು ಯೋಗ ಪ್ರದರ್ಶಿಸಿ ಗಮನ ಸೆಳೆದರು.

ಪ್ರಾತ್ಯಕ್ಷಿಕೆ: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಯಿತು. ರಾಷ್ಟ್ರೀಯ ಯೋಗ ಚಾಂಪಿಯನ್‌ ಯೋಗ ಪ್ರಕಾಶ್‌ ಅವರು ಯೋಗ ಪ್ರಾತ್ಯಕ್ಷಿಕೆ ಮೂಲಕ ಯೋಗದ ಬಗ್ಗೆ ಸವಿಸ್ತರವಾಗಿ ವಿವರಿಸಿದರು.

ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್‌ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಸಂಸ್ಥೆ ಆವರಣದಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷರಿಂದ ಯೋಗ ಪ್ರದರ್ಶನ ಹಮ್ಮಿಕೊಳ್ಳಲಾಯಿತು.

ಚುಮುಚುಮು ಚಳಿಯನ್ನೂ ಲೆಕ್ಕಿಸದೇ ಶಾಲಾ ವಿದ್ಯಾರ್ಥಿಗಳೂ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡರು. ಗಂಗೋತ್ರಿ ಪಬ್ಲಿಕ್‌ ಶಾಲೆಯ ಆಡಳಿತ ಸಂಯೋಜನಾಧಿಕಾರಿ ಕಾಂತಿನಾಯಕ್‌, ಶಾಲೆಯ ಮುಖ್ಯ ಶಿಕ್ಷಕಿ ಝರೀನಾ ಬಾಬುಲ್‌ ಸೇರಿದಂತೆ ಮತ್ತಿತರಿದ್ದರು.

ವಿವಿಧ ಆಸನ: ಕುವೆಂಪು ನಗರದಲ್ಲಿರುವ ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಯೋಗ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಸೂರ್ಯನಮಸ್ಕಾರ, ಉತಿತತಾಡಾಸನ, ಅರ್ಧಕಟಿಚಕ್ರಾಸನ, ಅರ್ಧಚಕ್ರಾಸನ, ಪಾದಹಸ್ತಾಸನ, ತ್ರೀಕೋಣಾಸನ, ವೃಕ್ಷಾಸನ, ವಕ್ರಾಸನ, ಭುಜಾಂಗಾಸನ, ಪದ್ಮಾಸನ, ಮಣಿಪರಾಸನ, ಪಶ್ಚಿಮೋತ್ತಾಸನ, ವಜ್ರಾಸನ, ಧ್ಯಾನ, ಶವಾಸನ ಆಸನ ಪ್ರದರ್ಶಿಸಲಾಯಿತು. ನಂತರ ಉತ್ತಮ ಆರೋಗ್ಯಕ್ಕೆ ಯೋಗದ ಮಹತ್ವ ಮತ್ತು ಪ್ರಾಮುಖ್ಯತೆ ತಿಳಿಸಿಸಲಾಯಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ