ಕೃಷ್ಣರಾಜೇಂದ್ರ ಒಡೆಯರ್‌ ಸ್ಮರಣೆ ನಮ್ಮೆಲ್ಲರ ಕರ್ತವ್ಯ

Team Udayavani, Jun 17, 2019, 3:00 AM IST

ಕೆ.ಆರ್‌.ನಗರ: ಪಟ್ಟಣದ ಸ್ಥಾಪನೆಯ ನೆನಪಿಗಾಗಿ ಗರುಡಗಂಭದಂತಹ ಸ್ಮಾರಕವಿರುವುದು ಹೆಮ್ಮೆಯ ವಿಚಾರವಾಗಿದೆ. ಸ್ಮಾರಕ ಮತ್ತು ಯೋಜನಾಬದ್ಧವಾದ ಪಟ್ಟಣದ ನಿರ್ಮಾಣಕ್ಕೆ ಕಾರಣೀಭೂತರಾದ ಕೃಷ್ಣರಾಜೇಂದ್ರ ಒಡೆಯರ್‌ ಅವರನ್ನು ಸ್ಮರಿಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಹೇಳಿದರು.

ಪಟ್ಟಣದ ಗರುಡಗಂಭ ಸಂವೇದನಾ ಸಂಘದ ವತಿಯಿಂದ ಭಾನುವಾರ ನಡೆದ 85ನೇ ವರ್ಷದ ಗರುಡಗಂಭದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಹಳೆ ಎಡತೊರೆಯಿಂದ ಪಟ್ಟಣವನ್ನು ಸ್ಥಳಾಂತರಿಸಿದ ನಂತರ ಕೃಷ್ಣರಾಜೇಂದ್ರ ಒಡೆಯರ್‌ ಅವರ ಆಳ್ವಿಕೆಯ ಅವಧಿಯಲ್ಲಿ ಕೆ.ಆರ್‌.ನಗರ ನಿರ್ಮಾಣಗೊಂಡಾಗ ಸ್ಥಾಪನೆಗೊಂಡ ಗರುಡಗಂಭದ ನೆನಪನ್ನು ಶಾಶ್ವತವನ್ನಾಗಿಸಲು ಸರ್ಕಾರದ ವತಿಯಿಂದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ವೈಭವದ ವಾರ್ಷಿಕೋತ್ಸವ: ಪಟ್ಟಣದ ನಿರ್ಮಾಣದ ಕುರುಹಾದ ಗರುಡಗಂಭದ ವಾರ್ಷಿಕೋತ್ಸವವನ್ನು ಮುಂಬರುವ ದಿನಗಳಲ್ಲಿ ವೈಭವಯುತವಾಗಿ ಆಚರಿಸಲು ಸ್ಥಳೀಯ ಪುರಸಭೆ ಆಡಳಿತ ಮಂಡಳಿ ಮತ್ತು ಸಾರ್ವಜನಿಕರೊಡನೆ ಚರ್ಚಿಸಲಾಗುತ್ತದೆ. ಪುರಸಭೆ ವತಿಯಿಂದಲೇ ಪ್ರತೀ ವರ್ಷ ಪುರಸಭಾ ಬಯಲು ರಂಗ ಮಂದಿರದಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಸ್ಮಾರಕಗಳು ಇರುವುದು ಸಂತಸದ ವಿಚಾರ: ಸರ್ಕಾರ ಮತ್ತು ಸ್ಥಳೀಯ ಪುರಸಭೆಯವರು ಗರುಡಗಂಭದ ಇತಿಹಾಸವನ್ನು ಮರೆತ್ತಿದ್ದರೂ ಸ್ವರಾಜ್‌ ಇಂಡಿಯಾ ಪಕ್ಷದ ತಾಲೂಕು ಅಧ್ಯಕ್ಷ ಗರುಡಗಂಭದಸ್ವಾಮಿ ನಿರಂತರವಾಗಿ ವಾರ್ಷಿಕೋತ್ಸವ ಆಚರಿಸಿಕೊಂಡು ಬರುತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ. ಇಂತಹ ಸ್ಮಾರಕಗಳು ಇರುವುದು ಸಂತಸದ ವಿಷಯವಾಗಿದೆ ಎಂದು ಮಾಹಿತಿ ನೀಡಿದರು.

ಅಭಿವೃದ್ಧಿ, ಸ್ವಚ್ಛತೆಗೆ ಗಮನ ಹರಿಸಿ: ಹುಣಸೂರು ಶಾಸಕ ಎಚ್‌.ವಿಶ್ವನಾಥ್‌ ಮಾತನಾಡಿ, ರಾಜ್ಯದ ಅತ್ಯಂತ ಯೋಜನಾಬದ್ಧ ಮತ್ತು ವ್ಯವಸ್ಥಿತ ಪಟ್ಟಣವಾಗಿರುವ ಕೆ.ಆರ್‌.ನಗರದ ಅಭಿವೃದ್ಧಿ ಮತ್ತು ಸ್ವಚ್ಛತೆಗೆ ಎಲ್ಲರೂ ಗಮನ ಹರಿಸಬೇಕು. ಜತೆಗೆ ಕೃಷ್ಣರಾಜನಗರದ ನಿರ್ಮಾತೃ ಕೃಷ್ಣರಾಜ ಒಡೆಯರ್‌ ಮತ್ತು ಗರುಡಗಂಭದ ಹೆಸರನ್ನು ಅಜರಾಮರವಾಗಿಸಲು ಹಾಗೂ ನಿರಂತರವಾಗಿ ವಾರ್ಷಿಕೋತ್ಸವ ನಡೆಸಲು ಕಾರ್ಯ ಯೋಜನೆ ರೂಪಿಸುವುದಾಗಿ ಹೇಳಿದರು.

ಒಡೆಯರ್‌ ಆಳ್ವಿಕೆಯಲ್ಲಿ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್‌ ಮತ್ತು ಇಟಲಿಯ ಖ್ಯಾತ ವಾಸ್ತು ತಜ್ಞ ಕ್ರೆಂಬಿಗಲ್‌ ಅವರ ಯೋಜನೆಯ ಫ‌ಲವಾಗಿ ರೂಪ ತಾಳಿದೆ. ಪಟ್ಟಣವನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಲು ಎಲ್ಲರೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಅದ್ಧೂರಿ ವಾರ್ಷಿಕೋತ್ಸವಕ್ಕೆ ತೀರ್ಮಾನ: ಮುಂದಿನ ವರ್ಷ ಗರುಡಗಂಭದ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಜತೆಗೆ ಮೈಸೂರಿನ ಯದುವಂಶದ ಯುವರಾಜ ಯದುವೀರ ಚಾಮರಾಜ ಒಡೆಯರ್‌ ಅವರನ್ನು ಗೌರವಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಪಟ್ಟಣದ ಎಲ್ಲಾ ಹಿರಿಯರು ಮತ್ತು ಚುನಾಯಿತ ಜನಪ್ರತಿನಿಧಿಗಳ ಸಭೆ ಕರೆದು ತೀರ್ಮಾನ ಮಾಡಲಾಗುತ್ತದೆ ಎಂದರು.

ಅಕ್ರಮ ಒತ್ತುವರಿ ತೆರವುಗೊಳಿಸಿ: ಮುಂದಿನ ದಿನಗಳಲ್ಲಾದರೂ ಪುರಸಭೆಯವರು ಪಟ್ಟಣದಲ್ಲಿ ಆಗಿರುವ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಿ, ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಬೇಕು. ಇದಕ್ಕೆ ಬೇಕಿರುವ ಅಗತ್ಯ ಸಹಕಾರವನ್ನು ನಾವು ನೀಡಲು ಸಿದ್ಧ ಎಂದು ಘೋಷಿಸಿದರು.

ಈ ಸಂದರ್ಭದಲ್ಲಿ ಶಾಸಕ ಎಚ್‌.ವಿಶ್ವನಾಥ್‌ ಗರುಡಗಂಭ ಸಂವೇದನಾ ಸಂಘದ ಅಧ್ಯಕ್ಷ ಗರುಡಗಂಭದಸ್ವಾಮಿ ಮತ್ತಿತರರು ಗರುಡಗಂಭಕ್ಕೆ ಪೂಜೆ ಸಲ್ಲಿಸಿ ಗೌರವಿಸಿದರು.

ಪುರಸಭೆ ಸದಸ್ಯ ಕೋಳಿಪ್ರಕಾಶ್‌, ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ನಿರ್ದೇಶಕ ಅಣ್ಣಯ್ಯನಾಯಕ, ವಕೀಲ ಎಚ್‌.ಕೆ.ಹರೀಶ್‌, ಕುಂಬಾರ ಸಂಘದ ತಾಲೂಕು ಅಧ್ಯಕ್ಷ ತಿಮ್ಮಶೆಟ್ಟಿ, ಬಿಜೆಪಿ ಮುಖಂಡ ಮುಕ್ಕೋಟಿ, ಮುಖಂಡರಾದ ಶಂಕರರಾವ್‌, ಶಿವಾಜಿ ಗಣೇಶನ್‌, ರವಿ, ರಾಮಣ್ಣ, ಯೋಗೇಶ್‌ ಸೇರಿದಂತೆ ಜನಪ್ರತಿನಿಧಿಗಳು ಮತ್ತು ಪಟ್ಟಣದ ಪ್ರಮುಖರು ಉಪಸ್ಥಿತರಿದ್ದರು.

ಸ್ವಚ್ಛ ಮತ್ತು ಯೋಜನಾಬದ್ಧ ನಗರವಾಗಿರುವ ಕೆ.ಆರ್‌.ನಗರದ ಅಂದ ಹಾಳು ಮಾಡುವಲ್ಲಿ ಪಟ್ಟಣದ ಪುರಸಭೆಯ ಪಾತ್ರ ಹೆಚ್ಚಾಗಿದೆ. ಉದ್ಯಾನವನಕ್ಕೆ ದಾನಿಗಳು ನೀಡಿದ್ದ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿದ್ದು, ಪುರಸಭೆಯ ಸಾಧನೆ.
-ಎಚ್‌.ವಿಶ್ವನಾಥ್‌, ಶಾಸಕ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ