ಅಸ್ಥಿತ್ವಕ್ಕಾಗಿ ಸರ್ಕಾರಿ ಶಾಲೆಗಳ ಪರದಾಟ

Team Udayavani, Jun 25, 2019, 3:00 AM IST

ಮೈಸೂರು: ಪೋಷಕರನ್ನು ಬಿಟ್ಟರೆ ತಾಯಿಭಾಷೆಯ ಮೇಲಿನ ಅಗಾಧ ಪ್ರೀತಿಯನ್ನು ಹುಟ್ಟುಹಾಕಿದ ಸರ್ಕಾರಿ ಶಾಲೆಗಳು ಇಂದು ಶೋಚನೀಯ ಸ್ಥಿತಿ ತಲುಪಿದ್ದು, ತಮ್ಮ ಅಸ್ಥಿತ್ವಕ್ಕಾಗಿ ತಿಣುಕಾಡುವಂತಾಗಿದೆ.

ಪ್ರತೀ ವರ್ಷ ಮಕ್ಕಳಿಲ್ಲದ, ಶಿಕ್ಷಕರಿಲ್ಲದ ಅದೆಷ್ಟೋ ಶಾಲೆಗಳು ಸದ್ದಿಲ್ಲದೇ ಮುಚ್ಚುವ ಹಂತ ತಲುಪಿರುವುದು ಒಂದೆಡೆಯಾದರೆ, ಇನ್ನೂ ಕೆಲವೆಡೆ ಕಟ್ಟಡಗಳೇ ಇಲ್ಲ. ಕೆಲವೆಡೆ ಕಟ್ಟಡಗಳಿದ್ದರೆ, ಮೈದಾನವಿಲ್ಲ, ಮೈದಾನವಿದ್ದರೆ ಕಾಂಪೌಂಡ್‌ಗಳೇ ಇರದ ಸ್ಥಿತಿ ಇದೆ. ಇಂತಹ ಮೂಲಭೂತ ಸಮಸ್ಯೆಗಳಲ್ಲಿಯೇ ಮಕ್ಕಳು ಜ್ಞಾನಾರ್ಜನೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ನಗರದ ಹಲವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾಂಪೌಂಡ್‌, ಮೈದಾನ ಹಾಗೂ ಅಗತ್ಯ ಕಟ್ಟಗಳಿಲ್ಲದೇ ಸಮಸ್ಯೆಗಳ ನಡುವೆಯೇ ಮಕ್ಕಳು ಪಾಠ ಆಲಿಸುವಂತಾಗಿದೆ. ನಗರದ ವಿದ್ಯಾರಣ್ಯಪುರಂನ ದೇವರಾಜ ಅರಸು ಕಾಲನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ಇದಕ್ಕೆ ಹೊರತಾಗಿಲ್ಲ.

ಶಿಥಿಲ ಕಟ್ಟಡ: ಶಾಲೆಯಲ್ಲಿರುವ ಆರು ಕೊಠಡಿಗಳಲ್ಲಿ ಮೂರು ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ. ಇದರಲ್ಲಿ ಹನ್ನೆರೆಡು ವರ್ಷಗಳ ಹಿಂದೆ ನಿರ್ಮಾಣ ಮಾಡಲಾದ ಎರಡು ಹೆಚ್ಚುವರಿ ಕಟ್ಟಡಗಳು ಬೀಳುವ ಹಂತ ತಲುಪಿವೆ. ಗೋಡೆ ಚಾವಣಿ ಬಿರುಕು ಬಿಟ್ಟಿರುವುದರಿಂದ ಮಳೆಗಾಲದಲ್ಲಿ ನೀರು ಸೋರುತ್ತಿದ್ದು, ಮಕ್ಕಳು ಮತ್ತು ಶಿಕ್ಷಕರು ಜೀವ ಭಯದಲ್ಲಿ ದಿನ ದೂಡುವಂತಾಗಿದೆ.

ಕುಡುಕರ ಹಾವಳಿ: ಶಾಲೆ ಮುಗಿದ ನಂತರ ಸ್ಥಳದಲ್ಲಿ ಪುಂಡರು ಮತ್ತು ಕುಡುಕರು ಪ್ರವೇಶಿಸಿ, ಜೂಜು, ಇಸ್ಪೀಟ್‌ನಲ್ಲಿ ತೊಡಗುವುದು, ಮಲ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿದೆ. ಜೊತೆಗೆ ಕುಡಿದ ಬಾಟಲಿಗಳು, ಬೀಡಿ, ಸಿಗರೇಟು ತುಂಡುಗಳನ್ನು ಬೆಳಗ್ಗೆ ಶಾಲೆಗೆ ಬರುವ ಮಕ್ಕಳು ತೆಗೆದು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಂಪೌಂಡ್‌ ಎತ್ತರಿಸಿ: ಶಾಲೆಯ ಸುತ್ತ ನಿರ್ಮಾಣ ಮಾಡಿರುವ ಸುತ್ತುಗೋಡೆ 4 ಅಡಿ ಎತ್ತರವಿರುವುದರಿಂದ ಹೊರ ಭಾಗದ ಜನರು, ಕಾಂಪೌಂಡ್‌ ಹಾರಿ ಒಳ ಬರುವಂತಾಗಿದೆ. ಪರಿಣಾಮ ಸ್ವತ್ಛವಾಗಿರುವ ಆವರಣವನ್ನು ಅನೈತಿಕ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಿಸಬೇಕಿದೆ ಎಂದು ಮುಖ್ಯಶಿಕ್ಷಕರು ಒತ್ತಾಯಿಸಿದ್ದಾರೆ.

ದಾಖಲಾತಿ ಕುಸಿತ: ಒಂದನೇ ತರಗತಿಯಿಂದ 5ನೇ ತರಗತಿಯವರೆಗೆ 28 ಮಕ್ಕಳು ಅಭ್ಯಾಸ ಮಾಡುತ್ತಿದ್ದು, ವರ್ಷದಿಂದ ವರ್ಷಕ್ಕೆ ದಾಖಲಾತಿ ಪ್ರಮಾಣ ಕುಸಿಯುತ್ತಿದೆ. 2017ರಲ್ಲಿ 35 ಮಕ್ಕಳಿದ್ದ ಈ ಶಾಲೆಯಲ್ಲಿ 2018ಕ್ಕೆ 32 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೆ ಈ ಬಾರಿ ಮಕ್ಕಳ ಸಂಖ್ಯೆ 28ಕ್ಕೆ ಕುಸಿದಿದೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಎಂದು ಹಲವು ಜಾಥಾಗಳನ್ನು ನಡೆಸಿದ್ದರೂ ಪೋಷಕರು ಮಾತ್ರ ಸರ್ಕಾರಿ ಶಾಲೆ ಬಗ್ಗೆ ಒಲವು ತೋರುತ್ತಿಲ್ಲ ಎಂಬುದು ಶಾಲಾ ಶಿಕ್ಷಕರ ಆರೋಪವಾಗಿದೆ.

131 ಶಾಲೆಗಳಿಗೆ ಕಾಂಪೌಂಡ್‌ ಇಲ್ಲ: ಜಿಲ್ಲೆಯಲ್ಲಿರುವ 2 ಸಾವಿರದ 147 ಶಾಲೆಗಳ ಪೈಕಿ 1 ಸಾವಿರದ 131 ಶಾಲೆಗಳಿಗೆ ಇಂದಿಗೂ ಕಾಂಪೌಂಡ್‌ ಇಲ್ಲದಿರುವುದು ದುರಂತದ ಸಂಗತಿ. ಶಾಲೆಗೆ ಅಗತ್ಯವಾದ ಸುತ್ತುಗೋಡೆಯೇ ಇಲ್ಲವಾದರೆ, ಆ ಶಾಲೆಯ ಪರಿಸ್ಥಿತಿ ಊಹಿಸಲೂ ಅಸಾಧ್ಯ. ಅಲ್ಲದೇ ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯವಾಗಿ ಬೇಕಾದದ್ದು ಕ್ರೀಡೆ. ಆದರೆ ಮೈಸೂರು ಜಿಲ್ಲೆಯ 333 ಶಾಲೆಗಳಿಗೆ ಇಂದಿಗೂ ಆಟದ ಮೈದಾನಗಳೇ ಇಲ್ಲದಿರುವುದು ಮಕ್ಕಳ ಕ್ರೀಡಾಸಕ್ತಿಗೆ ನೀರೆರಚಿದಂತಾಗಿದೆ.

ಅಗತ್ಯಕ್ಕೆ ತಕ್ಕಷ್ಟು ಶೌಚಾಲಯವಿಲ್ಲ: ಜಿಲ್ಲೆಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಈ ಹಿಂದೆ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ ಮಕ್ಕಳ ಅಗತ್ಯಕ್ಕೆ ಅನುಗುಣವಾಗಿ ಶೌಚಾಲಯಗಳು ನಿರ್ಮಾಣವಾಗಿಲ್ಲ. 2 ಸಾವಿರಕ್ಕೂ ಹೆಚ್ಚು ಶಾಲೆಗಳಿರುವ ಜಿಲ್ಲೆಯಲ್ಲಿ, ಒಂದು ಸಾವಿರ ಶಾಲೆಗಳಿಗೆ ಹೆಚ್ಚುವರಿ ಶೌಚಾಲಯಗಳ ಅಗತ್ಯವಿದೆ.

ಕೊಠಡಿ ಸಮಸ್ಯೆ ನೀಗಿಲ್ಲ: ಮಕ್ಕಳು ಕುಳಿತು ಪಾಠ ಕೇಳಲು ಅಗತ್ಯವಾಗಿ ಶಾಲಾ ಕೊಠಡಿಗಳು ಬೇಕು. ಶತಮಾನ ಪೂರೈಸಿ ಶಿಥಿಲಗೊಂಡಿರುವ ಹಾಗೂ ಕಳಪೆ ಕಾಮಗಾರಿಯಿಂದ ಕಡಿಮೆ ಅವಧಿಗೆ ಶಿಥಿಲಗೊಂಡ 700ಕ್ಕೂ ಹೆಚ್ಚು ಶಾಲಾ ಕಟ್ಟಡಗಳು ಜಿಲ್ಲೆಯಲ್ಲಿದ್ದು, ಅವುಗಳನ್ನು ತೆರವುಗೊಳಿಸಿ, ನೂತನ ಕಟ್ಟಡ ನಿರ್ಮಾಣ ಮಾಡಬೇಕಿದೆ.

ಅಲ್ಲದೇ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹಾಗೂ ಗ್ರಂಥಾಲಯ, ಕಂಪ್ಯೂಟರ್‌ ಕೊಠಡಿ ಸೇರಿದಂತೆ ಹಲವು ಕಾರಣಗಳಿಗೆ ಇನ್ನೂ 692 ಶಾಲೆಗಳಿಗೆ ಹೆಚ್ಚುವರಿ ಕೊಠಡಿಗಳ ಅಗತ್ಯವಿದೆ. ಜೊತೆಗೆ 307 ಶಾಲಾ ಕಟ್ಟಡಗಳು ದುರಸ್ತಿಯಾಗದೇ ಹಾಗೆಯೇ ಇದ್ದು, ಶಿಥಿಲಗೊಂಡ ಕಟ್ಟಡಗಳಲ್ಲಿಯೇ ಮಕ್ಕಳು ಜೀವ ಬಿಗಿ ಹಿಡಿದು ಕಲಿಯುವಂತಾಗಿದೆ. ಕಟ್ಟಡಗಳ ದುರಸ್ತಿ ಯಾವಾಗ ಎಂಬುದನ್ನು ಕಾಯುವಂತಾಗಿದೆ.

ಬಡ ರೈತರು, ಕೂಲಿ ಕಾರ್ಮಿಕರು, ಮೂರು ಹೊತ್ತು ಊಟಕ್ಕೂ ತತ್ವಾರವಿರುವ ಕೆಳವರ್ಗದ ಬೀದಿಗಳಿಂದ ಬರುವ ಮಕ್ಕಳು ಸರ್ಕಾರಿ ಶಾಲೆಯಲ್ಲಿದ್ದಾರೆ. ಆದರೆ ಆ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಹಾಗೂ ಶಾಲೆಗಳ ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡಬೇಕಾದ ಸರ್ಕಾರ ಅಗತ್ಯ ಸೌಲಭ್ಯ ಒದಗಿಸುವಲ್ಲಿ ವಿಫ‌ಲವಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಪ್ರಯೋಜನವಾಗಿಲ್ಲ.
-ಆಶಾ, ಅಧ್ಯಕ್ಷರು ಎಸ್‌ಡಿಎಂಸಿ. ಸ.ಕಿ.ಪ್ರಾಥಮಿಕ ಶಾಲೆ

ಶಾಲೆಯ ಮೂರು ಕೊಠಡಿಗಳು ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಭಯದಲ್ಲಿಯೇ ದಿನ ಕಳೆಯುವಂತಾಗಿದೆ. ಜೊತೆಗೆ ಪುಂಡ ಪೋಕರಿಗಳು ಶಾಲಾವರಣವನ್ನು ಪ್ರವೇಶಿಸಿ, ಇಡೀ ವಾತಾವರಣವನ್ನು ಕಲುಷಿತಗೊಳಿಸಿಸುತ್ತಿದ್ದಾರೆ. ಕಾಂಪೌಂಡ್‌ ಎತ್ತರಿಸಿ, ಬೇಲಿ ನಿರ್ಮಿಸಬೇಕಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
-ಪದ್ಮಾವತಿ, ಮುಖ್ಯಶಿಕ್ಷಕಿ, ಸ.ಕಿ.ಪ್ರಾ ಶಾಲೆ ದೇವರಾಜ ಅರಸು ಕಾಲನಿ

ಜಿಪಂನಿಂದ ಜಿಲ್ಲೆಯಲ್ಲಿರುವ ಪ್ರೌಢಶಾಲೆಗಳ ಕೊಠಡಿ ದುರಸ್ತಿಗೆ 1.30 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಪ್ರತಿ ತಾಲೂಕುಗಳಲ್ಲಿನ ಶಾಲೆಗಳಿಗೆ ತುರ್ತಾಗಿ ದುರಸ್ತಿ ಆಗಬೇಕಿರುವ ಕಟ್ಟಡಗಳ ಪಟ್ಟಿ ತಯಾರಿಸಲಾಗುವುದು. ಜೊತೆಗೆ ಎಲ್ಲಾ ಬಿಇಒಗಳಿಗೂ ಆಟದ ಮೈದಾನ, ಕೊಠಡಿ, ಶೌಚಾಲಯ, ನೀರು, ಗ್ರಂಥಾಲಯ ಸಮಸ್ಯೆಗಳ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ. ಸರ್ಕಾರಕ್ಕೆ ಮತ್ತು ಜಿಪಂ ಸದಸ್ಯರಿಗೆ ವರದಿ ನೀಡಿ, ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದು.
-ಡಾ. ಪಾಂಡುರಂಗ, ಡಿಡಿಪಿಐ ಮೈಸೂರು ಜಿಲ್ಲೆ

* ಸತೀಶ್‌ ದೇಪುರ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ