ಸಂಗೀತ ಕ್ಷೇತ್ರಕ್ಕೆ ರಾಜ ಮನೆತನದವರ ಕೊಡುಗೆ ಅಪಾರ

Team Udayavani, May 14, 2019, 3:00 AM IST

ಮೈಸೂರು: ರಾಜ ಮಹಾರಾಜರು ಸಂಗೀತ ವಿದ್ವಾಂಸರು ಹಾಗೂ ಸಂಗೀತ ಪ್ರಿಯರನ್ನು ಅರಮನೆಗೆ ಕರೆಸಿ ಸಂಗೀತ ಕಛೇರಿ ಏರ್ಪಡಿಸಿ ಅವರಿಗೆ ಬಿರುದುಗಳನ್ನು ನೀಡಿ ಗೌರವಿಸುತ್ತಿದ್ದರು. ಹೀಗಾಗಿ ಸಂಗೀತ ಕ್ಷೇತ್ರಕ್ಕೆ ರಾಜಮನೆತನದವರ ಕೊಡುಗೆ ಅಪಾರ ಎಂದು ಶಾರದಾ ವಿಲಾಸ ಕಾಲೇಜಿನ ಕನ್ನಡ ಉಪನ್ಯಾಸಕ ರಾಜೇಂದ್ರಪ್ರಸಾದ್‌ ಹೊನ್ನಲಗೆರೆ ಬಣ್ಣಿಸಿದರು. ಮೈಸೂರಿನ ಸ್ವರಾಲಯ ಸಂಗೀತ ಸಂಸ್ಥೆಯ 29ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಕೊಡುಗೆ ಮರೆಯುವಂತಿಲ್ಲ: ಸಂಗೀತ ಪ್ರೇಮಿಗಳಿಗೆ ಅನೇಕ ಕೊಡುಗೆ, ದಾನ ದತ್ತಿಯನ್ನು ನೀಡಿರುವುದನ್ನು ಇತಿಹಾಸದಲ್ಲಿ ಕಾಣಬಹುದು. ಹೀಗಾಗಿ ರಾಜಮನೆತನದವರು ನಾಡಿಗೆ ನೀಡಿರುವ ಕೊಡುಗೆಯನ್ನು ಎಂದೂ ಮರೆಯುವಂತಿಲ್ಲ. ರಾಗದಿಂದ ರೋಗ ಮುಕ್ತಿ ಎನ್ನುವಂತೆ ಸಂಗೀತವನ್ನು ಅಭ್ಯಸಿಸಿ ಆಲಿಸುವುದರಿಂದ ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಬಹುದೆಂದರು.

ಸಹಕಾರ ನೀಡಿ: ಪ್ರತಿಭೆಯನ್ನು ಗುರುತಿಸುವುದು ಸಂಗೀತ ಶಾಲೆಗಳ ಕರ್ತವ್ಯ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಅಡಗಿರುವ ಸುಪ್ತ ಪ್ರತಿಭೆ ಹೊರಚೆಲ್ಲುವ ವೇದಿಕೆ ಸಂಗೀತ ಶಾಲೆಗಳ ಜವಾಬ್ದಾರಿ. ಈ ನಿಟ್ಟಿನಲ್ಲಿ ಇಂತಹ ವಾರ್ಷಿಕೋತ್ಸವಗಳು ಹೆಚ್ಚು ಅರ್ಥ ಪೂರ್ಣ ಎಂದು ಅಭಿಪ್ರಾಯಪಟ್ಟರು. ಪ್ರತಿಭೆಗಳನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವುದು ಸಂಗೀತ ಸಂಸ್ಥೆಗಳ‌ ಆದ್ಯ ಕರ್ತವ್ಯ.

ಮಾಧ್ಯಮಗಳು ಯುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸಿ ಅವರಲ್ಲಿ ಅಡಗಿರುವ ಪ್ರತಿಭೆ ಹೊರತಂದು ನಾಡಿಗೆ ಪರಿಚಯಿಸುತ್ತಿರುವುದು ಅತ್ಯಂತ ಮೆಚ್ಚುಗೆ ವಿಚಾರ. ಸರ್ಕಾರ ಹಾಗೂ ಸಂಘ ಸಂಸ್ಥೆಗಳೂ ಇಂತಹ ಸಂಸ್ಥೆಗಳಿಗೆ ಅನುದಾನ ನೀಡಿ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಮುಖ್ಯ ಅತಿಥಿಯಾಗಿದ್ದ ಗೀತಾಂಜಲಿ ಸ್ಕೂಲ್‌ ಆಫ್ ಫೈನ್‌ ಆರ್ಟ್ಸ್ನ ನಿರ್ದೇಶಕಿ ಡಾ.ಗೀತಾ ಸೀತಾರಾಂ ಮಾತನಾಡಿ, ಸಂಗೀತ ಅಭ್ಯಾಸವನ್ನು ಜೀವನದ ಒಂದು ಭಾಗವಾಗಿ ಅಳವಡಿಸಿಕೊಂಡು ಕಲೆಯನ್ನು ವೃತ್ತಿಯನ್ನಾಗಿ ಬೆಳೆಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಹಾಗೂ ಮನುಷ್ಯನಲ್ಲಿ ಕ್ರಿಯಾಶೀಲತೆ ಹೆಚ್ಚುತ್ತದೆ ಎಂದು ತಿಳಿಸಿದರು.

ಸಂಗೀತ ಅಭ್ಯಾಸ ಮಾಡಿ: ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ವರಾಲಯ ಸಂಗೀತ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷೆ ವಿದುಷಿ ಸುಮಾ ಹರಿನಾಥ್‌, ಸಂಗೀತಾಭ್ಯಾಸ ಮಾಡುವವರಿಗೆ ಪೋಷಕರ ಬೆಂಬಲವಿಲ್ಲದೇ ಸಂಗೀತ ಕ್ಷೇತ್ರ ಇಂದು ಸೊರಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಪಠ್ಯಪುಸ್ತಕದ ಜೊತೆ ಜೊತೆಗೆ ಸಂಗೀತ ಅಭ್ಯಾಸ ಮಾಡುವುದು ಸೂಕ್ತ ಎಂದು ವಿವರಿಸಿದರು.

ಇದೇ ವೇಳೆ ವಿದುಷಿ ರೇವತಿ ಶ್ರೀಕಾಂತ್‌ ಅವರ “ಮರಳಿ ಬೃಂದಾವನಕೆ’ ಕವನ ಸಂಕಲನ ಲೋಕಾರ್ಪಣೆ ಮಾಡಲಾಯಿತು. ಈ ವೇಳೆ ವಿವಿಧ ಕ್ಷೇತ್ರಗಳ ಸಾಧಕರಾದ ಸಮಾಜ ಸೇವಕ ಜಿ.ಪಿ.ಹರೀಶ್‌, ವಿದುಷಿ ಧರಿತ್ರಿ ಆನಂದರಾವ್‌, ಶಿಕ್ಷಕಿ ಸೀತಾಲಕ್ಷ್ಮೀ, ಗಾಯಕಿ ಅಖೀಲ ಜಿ., ವಿದುಷಿ ವಿಬುಧ ರಾಜೇಂದ್ರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೊಳಲು ವಾದಕ ವಿದ್ವಾನ್‌ ಎ.ವಿ.ದತ್ತಾತ್ರೇಯ, ಪತ್ರಕರ್ತೆ ಎಸ್‌.ಎಸ್‌.ಶ್ರೀಲಕ್ಷ್ಮೀ ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ